Advertisement

ಕೇವಲ ಓಟಿಗಾಗಿ ಮಾತ್ರ ಹಿಂದುತ್ವ, ಹಿಂದೂ ಧರ್ಮದ ಬಗ್ಗೆ ಬಿಜೆಪಿಗೆ ಗೌರವವೇ ಇಲ್ಲ : ಸಿದ್ದು

06:37 PM Sep 15, 2021 | Team Udayavani |

ಬೆಂಗಳೂರು : ಬಿಜೆಪಿಯವರು ಓಟಿಗೆ ಮಾತ್ರ ಹಿಂದುತ್ವ ಅಸ್ತ್ರವನ್ನು ಬಳಸುತ್ತಾರೆ. ಹಿಂದೂ ಧರ್ಮದ ಬಗ್ಗೆ ಅವರಿಗೆ ಗೌರವವೇ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

Advertisement

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸರಕಾರದ ಗಮನಕ್ಕೆ ತರದೆ ಮುಖ್ಯ ಕಾರ್ಯದರ್ಶಿಗಳು ದೇವಸ್ಥಾನ ತೆರವುಗೊಳಿಸುವ ಕುರಿತು ಪತ್ರ ಬರೆಯಲು ಸಾಧ್ಯವಿಲ್ಲ. ಇಡೀ ಪ್ರಕರಣದಲ್ಲಿ ಬಿಜೆಪಿ ನಾಟಕವಾಡುತ್ತಿದೆ ಎಂದರು.

ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರು ಸುಪ್ರೀಂ ಕೋರ್ಟಿನ ಆದೇಶದಂತೆ ಸಾರ್ವಜನಿಕ ಸ್ಥಳಗಳಲ್ಲಿರುವ ಧಾರ್ಮಿಕ ಕಟ್ಟಡಗಳನ್ನು ನೆಲಸಮ ಮಾಡುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರ ವಿರೋಧ ವ್ಯಕ್ತವಾದ ಮೇಲೆ ತಮ್ಮ ಮಾನ ಉಳಿಸಿಕೊಳ್ಳಲು ಸರಕಾರ ಬಣ್ಣ ಬದಲಾಯಿಸಿದೆ. ದೇವಾಲಯ ಒಡೆದ ಮೇಲೆ ಮಾತನಾಡುತ್ತಿರುವ ಮೈಸೂರು ಸಂಸದರು, ಮೊದಲೇ ಸರಕಾರದ ಗಮನಕ್ಕೆ ತಂದು ಉಳಿಸಬೇಕಿತ್ತಲ್ಲವೇ ಎಂದು ಪ್ರಶ್ನಿಸಿದರು.

ದೇವಾಲಯಗಳನ್ನು ಬಿಜೆಪಿಯವರೇ ನಾಶ ಮಾಡುತ್ತಿದ್ದಾರೆ. ಮಾತನಾಡಿದ್ರೆ ರಾಮ ಮಂದಿರ ಕಟ್ಟುತ್ತೇವೆ ಎಂದು ಜನರ ದಾರಿ ತಪ್ಪಿಸುತ್ತಿದ್ದಾರೆ. ಭಕ್ತರ ಗಮನಕ್ಕೆ ತಂದು ಪರ್ಯಾಯ ವ್ಯವಸ್ಥೆ ಮಾಡಿದ ಬಳಿಕ ದೇವಸ್ಥಾನ ಕೆಡವಬಹುದಿತ್ತು. ಏಕಾಏಕಿ ದೇವಸ್ಥಾನ ಧ್ವಂಸ ಮಾಡಿರುವುದು ಬಿಜೆಪಿಯವರ ಢೋಂಗಿತನವನ್ನು ತೋರಿಸುತ್ತದೆ ಎಂದು ದೂರಿದರು.

ಸುಪ್ರೀಂ ಕೋರ್ಟ್‌ ಆದೇಶ ಬಂದದ್ದು ಇಂದು, ನಿನ್ನೆಯಲ್ಲ. ಸರಕಾರ ಇಷ್ಟು ದಿನ ಏನು ಮಾಡುತ್ತಿತ್ತು? ಈಗ ಯಾಕೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡುವ ನಾಟಕವಾಡುತ್ತಿದೆ ಎಂದು ಪ್ರಶ್ನಿಸಿದರು.

Advertisement

ಇದನ್ನೂ ಓದಿ :ಸಿಎಂ ಕೇಜ್ರಿವಾಲ್ ಭೇಟಿ ಬೆನ್ನಲ್ಲೆ ನಟ ಸೋನು ಸೂದ್‍ಗೆ ’ಐಟಿ’ ಶಾಕ್

ರಾಜ್ಯದಲ್ಲಿ ದೇವಸ್ಥಾನ ಒಡೆಯುವ ಆತಂಕ: ಈಶ್ವರಪ್ಪ
ಜಿಲ್ಲಾಧಿಕಾರಿಯವರು ದೇವಸ್ಥಾನವನ್ನು ಒಡೆದು ಹಾಕಿರುವುದು ತಪ್ಪು. ಬಿಜೆಪಿ ಸಂಸ್ಕೃತಿಯನ್ನು ನಂಬಿಕೊಂಡಿರುವ ಪಕ್ಷ. ಕಾಂಗ್ರೆಸ್‌ ನಾಯಕರು ಹೇಳಿದ್ದರಲ್ಲೂ ತಪ್ಪಿಲ್ಲ. ಈಗಲಾದರೂ ಅವರಿಗೆ ದೇವಸ್ಥಾನ ಉಳಿಯಬೇಕೆಂದು ಅನ್ನಿಸಿದೆಯಲ್ಲ, ಅದು ಮುಖ್ಯ. ರಾಜ್ಯದಲ್ಲೆಲ್ಲೂ ದೇವಸ್ಥಾನಗಳನ್ನು ಒಡೆಯಬಾರದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next