ಮೈಸೂರು: ನಾನು ಕೋಲಾರದಿಂದ ಸ್ಪರ್ಧೆ ಮಾಡುವ ವಿಚಾರವನ್ನು ಹೈಕಮಾಂಡ್ ತೀರ್ಮಾನ ಮಾಡಬೇಕಿದೆ, ನಾಡಿದ್ದು ನಡೆಯುವ ಸಭೆಯಲ್ಲಿ ತೀರ್ಮಾನ ಆಗಬಹುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಟಿಕೆಟ್ ವಿಚಾರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು ಚಾಮರಾಜ ಮತ್ತು ಚಾಮುಂಡೇಶ್ವರಿ ಕ್ಷೇತ್ರದ ಟಿಕೇಟ್ ವಿಚಾರ ನಾಡಿದ್ದು ಇತ್ಯರ್ಥವಾಗಬಹುದು. ನಾಡಿದ್ದು ಕೇಂದ್ರ ಚುನಾವಣಾ ಸಮಿತಿ ಸಭೆ ಇದೆ, ಅಂದು ಇತ್ಯರ್ಥವಾಗಬಹುದು. ಈ ಸಭೆಯ ನಂತರ ಎರಡನೇ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದರು.
ಯಾರನ್ನು ಯಾರಿಂದಲೂ ಕಟ್ಟಿಹಾಕಲು ಆಗಲ್ಲ. ಒಬ್ಬರನ್ನು ಸೋಲಿಸುವುದು ಗೆಲ್ಲಿಸುವುದು ಜನರ ಕೈಲಿದೆ. ನಾನು ನಾಮಪತ್ರ ಸಲ್ಲಿಕೆಗೆ ಮಾತ್ರ ವರುಣಾಗೆ ಹೋಗುತ್ತೇನೆ. ಯತೀಂದ್ರ ಅವರು ಅಲ್ಲಿನ ಹಾಲಿ ಶಾಸಕರು, ಅವರು ಕೂಡ ಅಲ್ಲಿ ನನ್ನ ಪರವಾಗಿ ಕೆಲಸ ಮಾಡುತ್ತಾರೆ. ಚುನಾವಣೆಯಲ್ಲಿ ನನ್ನ ಎದುರಾಳಿ ಯಾರು ಎಂಬ ಬಗ್ಗೆ ಯೋಚನೆ ಮಾಡಲು ಹೋಗಲ್ಲ, ಯಾರು ನಮ್ಮ ಶಾಸಕರಾಗಬೇಕು ಎಂದು ತೀರ್ಮಾನ ಮಾಡುವುದು ಜನ. ಜನರ ಆಶೀರ್ವಾದ ಮುಖ್ಯವಾಗುತ್ತೆ, ಯಾರು ನಮ್ಮಲ್ಲಿ ಗೆದ್ದರೆ ಕ್ಷೇತ್ರ ಅಭಿವೃದ್ಧಿ ಮಾಡುತ್ತಾರೆ ಎಂದು ತೀರ್ಮಾನ ಮಾಡಬೇಕಾಗಿರುವುದು ಜನ. ಎದುರಾಳಿ ಯಾರೇ ಇರಲಿ ಅದರ ಬಗ್ಗೆ ನನಗೆ ಚಿಂತೆ ಇಲ್ಲ ಎಂದು ಹೇಳಿದ್ದಾರೆ.
ಸರ್ಕಾರ ತರಾತುರಿಯಲ್ಲಿ, ಅವೈಜ್ಞಾನಿಕವಾಗಿ ಮೀಸಲಾತಿ ಪರಿಷ್ಕರಣೆ ಮಾಡಿದೆ. ಅವರ ಉದ್ದೇಶ ಒಳ್ಳೆಯದಿಲ್ಲ. ಮೀಸಲಾತಿ ಕೊಡಬೇಕು ಎಂದಿದ್ದರೆ ಅದರ ಬಗ್ಗೆ ಅಧ್ಯಯನ ಮಾಡಿ ಸಂವಿಧಾನಬದ್ಧವಾಗಿ, ವೈಜ್ಞಾನಿಕವಾಗಿ ನೀಡುತ್ತಿದ್ದರು. ಒಳಮೀಸಲಾತಿ ವಿಚಾರವಾಗಿ ಸರ್ಕಾರ 4 ವರ್ಷದಿಂದ ಸುಮ್ಮನಿದ್ದು ಚುನಾವಣೆ ಬಂದಾಗ ಓಟಿಗಾಗಿ ಕೊನೆ ಘಳಿಗೆಯಲ್ಲಿ ಜಾರಿ ಮಾಡಿದ್ದಾರೆ. ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು 15 ರಿಂದ 17% ಗೆ, ಪರಿಶಿಷ್ಟ ವರ್ಗಗಳ ಮೀಸಲಾತಿಯನ್ನು 3% ಇಂದ 7% ಗೆ ಹೆಚ್ಚಿಸಿದರು, ನ್ಯಾ. ನಾಗಮೋಹನ್ ದಾಸ್ ಅವರ ಸಮಿತಿ ರಚನೆಯಾದದ್ದು ಸಮ್ಮಿಶ್ರ ಸರ್ಕಾರ ಇದ್ದಾಗ, ವರದಿ ನೀಡಿದ್ದು 2020ರಲ್ಲಿ, ಸರ್ಕಾರ ತೀರ್ಮಾನ ತೆಗೆದುಕೊಂಡಿದ್ದು 2023ರಲ್ಲಿ. ವರದಿ ಬಂದು ಮೂರು ವರ್ಷಗಳ ವರೆಗೆ ಸರ್ಕಾರ ಏನು ಮಾಡುತ್ತಿತ್ತು? ಮೀಸಲಾತಿ ಹೆಚ್ಚಳ ಮಾಡಿದ ಮೇಲೆ ಒಟ್ಟು ಮೀಸಲಾತಿ ಪ್ರಮಾಣ 56% ಆಯಿತು, ಇದರಿಂದ ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ “ಮೀಸಲಾತಿ ಪ್ರಮಾಣ 50% ಗಿಂತ ಮೀರಬಾರದು” ಎಂಬ ತೀರ್ಪಿನ ಉಲ್ಲಂಘನೆಯಾಗುತ್ತದೆ, ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಶೆಡ್ಯೂಲ್ ಗೆ ಸೇರಿಸುವ ಕೆಲಸವನ್ನು ಸರ್ಕಾರ ಮಾಡಿದೆಯಾ? ಹೀಗಿದ್ದಾಗ ಇದು ಊರ್ಜಿತವಾಗುತ್ತದಾ? ಹೀಗೆ ಸರ್ಕಾರ ಪರಿಶಿಷ್ಟ ಜಾತಿ, ವರ್ಗದ ಮತ್ತು ಅಲ್ಪಸಂಖ್ಯಾತ ವರ್ಗದ ಜನರಿಗೆ ಮೋಸ ಮಾಡಿದೆ ಎಂದು ಗುಡುಗಿದರು.
ಕೆಟಗರಿ 2ಬಿ ಯನ್ನು ರದ್ದು ಮಾಡಿದ್ದು ಯಾಕೆ? ಇದು 1995 ಜನವರಿಯಿಂದ ಇತ್ತು, ಚಿನ್ನಪ್ಪ ರೆಡ್ಡಿ ಅವರ ಸಮಿತಿಯ ವರದಿ ಆಧರಿಸಿ ಈ ಮೀಸಲಾತಿ ನೀಡಲಾಗಿತ್ತು. ಈಗ ಮೀಸಲಾತಿಯನ್ನು ತೆಗೆದುಹಾಕಿದರೆ ಅದು ಸೇಡಿನ ರಾಜಕಾರಣವಾಗಲ್ವಾ?
ನಮ್ಮ ಸರ್ಕಾರ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯನ್ನು ಯಾಕೆ ಸರ್ಕಾರ ಬಿಡುಗಡೆ ಮಾಡಿಲ್ಲ. ಈ ಸಮೀಕ್ಷೆಗಾಗಿ ನಾವು ಹಣ ಖರ್ಚು ಮಾಡಿ, ಇಂಥದ್ದೊಂದು ಸಮೀಕ್ಷೆಯ ವರದಿ ಸರ್ಕಾರದ ಬಳಿ ಇದ್ದರೆ ಮೀಸಲಾತಿ ನಿಗದಿ ಮಾಡಲು ಮತ್ತು ಕಾರ್ಯಕ್ರಮಗಳನ್ನು ರೂಪಿಸಲು ಅನುಕೂಲವಾಗುತ್ತದೆ ಎಂದು ಮಾಡಿದ್ದೆವು. ಯಾವೆಲ್ಲ ಸಮುದಾಯಗಳು ಹಿಂದುಳಿದಿವೆ ಅವುಗಳಿಗೆ ಹೆಚ್ಚಿನ ಒತ್ತು ನೀಡಿ, ಮುಖ್ಯವಾಹಿನಿಗೆ ತರಲು ಅನುಕೂಲವಾಗುತ್ತದೆ. ಈ ಸರ್ಕಾರಕ್ಕೆ ತಳ ಸಮುದಾಯಗಳ ಬಗ್ಗೆಯಾಗಲೀ, ಮೀಸಲಾತಿ ನೀಡುವ ವಿಚಾರದಲ್ಲಿಯಾಗಲೀ ಯಾವ ಆಸಕ್ತಿ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ: ಡೈರೆಕ್ಟರ್ ಜನರಲ್ ನೇವಲ್ ಆಪರೇಷನ್ಸ್ ಆಗಿ ಅತುಲ್ ಆನಂದ ಅಧಿಕಾರ ಸ್ವೀಕಾರ