Advertisement
ಸಮಾವೇಶದಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಜಾರಿಗೆ ತಂದಿರುವ ಮಸೂದೆಗಳನ್ನು ರಾಜ್ಯದಲ್ಲೂ ಜಾರಿಗೆ ತರುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಅಮಿತ್ ಶಾ ಪತ್ರ ಬರೆದು ಒತ್ತಡ ಹಾಕಿದ್ದಾರೆ. ಪತ್ರದಲ್ಲಿ ಮಾರುಕಟ್ಟೆ ಕಾಯ್ದೆಯ ಕಾನೂನುಗಳನ್ನು ತಿದ್ದುಪಡಿ ರಾಜ್ಯದಲ್ಲೂ ಭೂಸುಧಾರಣೆ ಹಾಗೂ ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ತಂದು ಅದರ ವರದಿ ನೀಡುವಂತೆ ಸೂಚಿಸಿದ್ದಾರೆ. ಅದರಂತೆ ಯಡಿಯೂರಪ್ಪ ಅವರು ರಾಜ್ಯದಲ್ಲೂ ಕೃಷಿ ಮಾರುಕಟ್ಟೆಯನ್ನು ನಾಶ ಮಾಡಲು ಮುಂದಾಗಿದ್ದಾರೆ ವಾಗ್ದಾಳಿ ನಡೆಸಿದರು.
ಕೆಲವು ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡಲು ಇಡೀ ದೇಶದ ರೈತರು, ಕಾರ್ಮಿಕರು, ಬಡವರು, ಶ್ರಮಿಕರು, ಹಿಂದುಳಿದ ವರ್ಗದ ಜನರನ್ನು ಶೋಷಣೆ ಮಾಡಲು ನರೇಂದ್ರಮೋದಿ ಮುಂದಾಗಿದ್ದಾರೆ. ಈ ಮಸೂದೆಗಳು ಸಂವಿಧಾನಕ್ಕೆ ವಿರುದ್ಧವಾಗಿವೆ. ರಾಜ್ಯಗಳ ಸ್ವಾಯತ್ತ ಹಾಗೂ ದೇಶದ ಆಡಳಿತವನ್ನು ಬಂಡವಾಳಶಾಹಿಗಳ ಕಪಿಮುಷ್ಟಿಗೆ ಸಿಲುಕಿಸಲು ಮುಂದಾಗಿದ್ದಾರೆ ಎಂದರು. ಸಂವಿಧಾನ ಬದಲಾವಣೆಯಾದರೆ ರಕ್ತಕ್ರಾಂತಿ:
ಸಂವಿಧಾನ ಬದಲಾವಣೆ ಮಾಡಿದರೆ ದೇಶದಲ್ಲಿ ರಕ್ತಕ್ರಾಂತಿಯಾಗಲಿದೆ. ಸಂವಿಧಾನ ಬದಲಾವಣೆ ಮಾಡಿಸುತ್ತೇನೆ ಎಂದು ಸಂಸದ ಅನಂತ್‌ಕುಮಾರ್ ಹೆಗಡೆ ಬಾಯಲ್ಲಿ ಹೇಳಿಸುವ ಮೋದಿ ಹಾಗೂ ಅಮಿತ್ ಶಾ ನಾಟಕವಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
Related Articles
ಬಿಜೆಪಿಯವರು ಸಾಮಾಜಿಕ ನ್ಯಾಯ, ಸಮಾನತೆ, ಅಧಿಕಾರ ವಿಕೇಂದ್ರೀಕರಣಕ್ಕೆ ವಿರೋಧವಾಗಿದ್ದಾರೆ. ಈಗಾಗಲೇ ದೇಶದ ಜಿಡಿಪಿ ಕುಸಿದಿದ್ದು, ರೈತರು ಕೃಷಿಯಿಂದ ವಿಮುಖರಾಗುತ್ತಿರುವುದೇ ಕಾರಣ ಎಂದು ರೈತರ ಮೇಲೆ ದೂರುತ್ತಿದ್ದಾರೆ. ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ. ರೈತರ ಜಮೀನು ಕಿತ್ತುಕೊಂಡು ಬಂಡವಾಳಶಾಹಿಗಳಿಗೆ ಕೊಡಲು ಹೊರಟಿದ್ದಾರೆ. ರೈತ ಸರ್ಕಾರ ಎಂದು ಹೇಳುತ್ತಾರೆ ಎಂದು ಕಿಡಿಕಾರಿದರು.
Advertisement
ಜೆಡಿಎಸ್ ಮೌನ:ಭೂಸುಧಾರಣೆ ಮೂಲಕ ಬಂಡವಾಳಶಾಹಿಗಳ 13 ಸಾವಿರ ಭೂ ಪ್ರಕರಣಗಳನ್ನು ರದ್ದು ಮಾಡುವ ಹುನ್ನಾರ ಇದೆ. ಕೇಂದ್ರದ ಒತ್ತಡ ಒಂದು ಕಡೆಯಾದರೆ, ಸಿಎಂ ಯಡಿಯೂರಪ್ಪ ಹಾಗೂ ಸಚಿವ ಆರ್.ಅಶೋಕ್ ಅವರು ಲಂಚ ತೆಗೆದುಕೊಂಡು ಮಸೂದೆಗಳನ್ನು ಜಾರಿಗೆ ತರಲು ಹೊರಟಿದ್ದಾರೆ. ಇದೊಂದು ಲಜ್ಜೆಗೆಟ್ಟ ಸರ್ಕಾರ. ಇದರ ವಿರುದ್ಧ ಧ್ವನಿ ಎತ್ತಲು ಸಹಕಾರ ನೀಡಿ ಎಂದು ಜೆಡಿಎಸ್‌ನವರನ್ನು ಕೇಳಿದರೆ ಈ ವಿಚಾರದಲ್ಲಿ ನಾವು ಮೌನವಾಗುತ್ತೇವೆ ಎಂದು ಸುಮ್ಮನಾದರು. ಆದರೆ ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುತ್ತಾ ಬಿಜೆಪಿ ಪರವಾಗಿ ನಿಂತಿದ್ದಾರೆ ಎಂದು ಜೆಡಿಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರ ಬಿಟ್ಟು ಹೋಗಿ:
ರಾಜ್ಯದ ರೈತರು ಹಾಗೂ ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಈಗ ನಾವು ಇದರ ವಿರುದ್ಧ ಧ್ವನಿ ಎತ್ತದಿದ್ದರೆ ರೈತರು ಬೀದಿ ಪಾಲಾಗಲಿದ್ದಾರೆ. ರೈತರನ್ನು ಕಾಂಗ್ರೆಸ್ ಪಕ್ಷ ಎಂದಿಗೂ ಕೈಬಿಟ್ಟಿಲ್ಲ. ಮುಂದೆಯೂ ರೈತರ ಪರವಾಗಿ ಕೆಲಸ ಮಾಡಲಿದ್ದು, ಬೆಂಬಲವಾಗಿ ನಿಲ್ಲಲಿದೆ. ಸಿಎಂ ಯಡಿಯೂರಪ್ಪ ಅವರು ರೈತರಿಗೆ ಪರಿಹಾರ ನೀಡಿ ಎಂದರೆ ದುಡ್ಡಿಲ್ಲ ಎನ್ನುತ್ತಾರೆ. ದುಡ್ಡಿಲ್ಲ ಎಂದು ಹೇಳಲು ಅಧಿಕಾರ ಬೇಕೇ?. ಬಿಟ್ಟು ಹೋದರೆ, ನಾವು ಬಂದು ಉತ್ತಮ ಆಡಳಿತ ನೀಡುತ್ತೇವೆ ಎಂದರು.