Advertisement

ಬಿಜೆಪಿ ಜನವಿರೋಧಿ ಸಿದ್ಧಾಂತ ಪಡೆದಿರುವುದು ಆರ್ ಎಸ್ ಎಸ್ ನಿಂದ: ಸಿದ್ದರಾಮಯ್ಯ

12:50 PM Dec 28, 2021 | Team Udayavani |

ಬೆಂಗಳೂರು : ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸಂಘರ್ಷ ವೈಯಕ್ತಿಕವಾದುದಲ್ಲ, ಇದೊಂದು ಸೈದ್ದಾಂತಿಕ ಹೋರಾಟ. ನಮ್ಮದು ಜನಪರವಾದ ಸಿದ್ದಾಂತ. ಆ ಸಿದ್ದಾಂತವನ್ನು ನಾವು ಪಡೆದುಕೊಂಡಿರುವುದು ಸಂವಿಧಾನದಿಂದ. ಬಿಜೆಪಿಯದ್ದು ಜನವಿರೋಧಿ ಸಿದ್ದಾಂತ, ಆ ಸಿದ್ದಾಂತವನ್ನು ಅವರು ಪಡೆದಿರುವುದು ಆರ್ ಎಸ್ ಎಸ್ ನಿಂದ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

Advertisement

ಕಾಂಗ್ರೆಸ್‌ ಸಂಸ್ಥಾಪನಾ ದಿನದ ಹಿನ್ನೆಲೆಯಲ್ಲಿ ಸರಣಿ ಟ್ವೀಟ್‌ ಮಾಡಿರುವ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಸ್ವಾತ್ರಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷದ ಲಕ್ಷಾಂತರ ದೇಶಪ್ರೇಮಿ ಸದಸ್ಯರು ಗುಂಡಿಗೆ ಎದೆ ಕೊಟ್ಟರು, ಹಲವರು ಲಾಠಿಗೆ ಎದೆ ಕೊಟ್ಟರು, ಸಾವಿರಾರು ಜನ ಹುತಾತ್ಮರಾದರು, ಕಾಂಗ್ರೆಸ್ ಪಕ್ಷದ ಈ ಧೀರ ಹೋರಾಟಗಾರರು ಹರಿಸಿದ ರಕ್ತ, ಬೆವರಿನ ಫಲವೇ ನಾವಿಂದು ಅನುಭವಿಸುತ್ತಿರುವ ಸ್ವಾತಂತ್ರ್ಯ.

ಮಹಾತ್ಮ ಗಾಂಧೀಜಿಯವರಿಂದ ತಾಯಿಯ ಹೃದಯವನ್ನು,‌ ಜವಾಹರ‌ಲಾಲ ನೆಹರು ಅವರಿಂದ ವೈಚಾರಿಕ ಸ್ಪಷ್ಟತೆಯನ್ನೂ, ವಲ್ಲಭಬಾಯಿ ಪಟೇಲ್‌ರಿಂದ ಉಕ್ಕಿನ ಸ್ಥೈರ್ಯವನ್ನೂ ಪಡೆದ ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯ ಸಂಗ್ರಾಮದ ಗುರಿ ಈಡೇರಿಕೆಯಲ್ಲಿ ಯಶಸ್ವಿಯಾಯಿತು.

ಸ್ವಾತಂತ್ರ್ಯ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಧುಮುಕದಿದ್ದರೆ ಏನಾಗುತ್ತಿತ್ತು? ನಾವಿಂದು ಕೂಡಾ ಬ್ರಿಟಿಷರ ಗುಲಾಮಗಿರಿಗೆ ಸಿಕ್ಕಿ ನರಳಾಡುತ್ತಿದ್ದೆವೇನೋ? ಸ್ವತಂತ್ರ ಭಾರತದ ನಾಯಕತ್ವವನ್ನು ಕಾಂಗ್ರೆಸ್ ಪಕ್ಷ ವಹಿಸದೆ ಹೋಗಿದ್ದರೆ ಇಂದು ಕೂಡಾ ದೇಶ ಬಡತನ, ಅನಕ್ಷರತೆ, ಅಸಮಾನತೆ, ನಿರುದ್ಯೋಗದ ಸಮಸ್ಯೆಗಳಲ್ಲಿಯೇ ಉರುಳಾಡುತ್ತಿತ್ತೋ ಏನೋ?

Advertisement

ಗರೀಬಿ ಹಠಾವೋ, ಹಸಿರು ಕ್ರಾಂತಿ, ಬ್ಯಾಂಕುಗಳ ರಾಷ್ಟ್ರೀಕರಣ, ಇಪ್ಪತ್ತು ಅಂಶದ ಕಾರ್ಯಕ್ರಮಗಳು ಮೊದಲಾದ ಜನಪರ ಯೋಜನೆಗಳ ಮೂಲಕ ಇಂದಿರಾ ಗಾಂಧಿ ಅವರು ಬಡತನದ ವಿರುದ್ಧ ಹೋರಾಟವನ್ನೇ ನಡೆಸಿದ್ದರು. ಇಂದು ಕೂಡಾ ಇಂದಿರಾ ಗಾಂಧಿ ದೇಶದ ಬಡವರ ಕಣ್ಮಣಿಯಾಗಿದ್ದಾರೆ.

ಶ್ರೀಮತಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರು ಈ ನಾಡಿಗಾಗಿ, ನಾಡಿನ ಏಳಿಗೆಗಾಗಿ ತಮ್ಮ ಇಡೀ ಬದುಕು ಸವೆಸಿದವರು. ಹೌದು, ಇದು ಅಮ್ಮ-ಮಗ ತಮ್ಮ ರಕ್ತ ಬಸಿದು, ಪ್ರಾಣ ತೆತ್ತು ಕಟ್ಟಿದ ಪಕ್ಷ. ಅವರು ಪ್ರಾಣ ಕಳೆದುಕೊಂಡರು, ದೇಶ ಉಳಿಸಿದರು.

ಮೂಲ ಮತಾಂತರ ನಿಷೇಧ ಕಾಯ್ದೆಯ ಕರಡು ರೂಪಿಸಲು ತಮ್ಮದೇ ಸರ್ಕಾರ ಕಾರಣ ಎಂದು ಯಡಿಯೂರಪ್ಪ ಮತ್ತು ಮತಾಂತರ ನಿಷೇಧ ಕಾಯ್ದೆ ಜಾರಿ ಆರ್.ಎಸ್.ಎಸ್ ನ ಉದ್ದೇಶವಾಗಿತ್ತು ಎಂದು ಈಶ್ವರಪ್ಪ ಅವರು ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಈ ಕಾಯ್ದೆ ಆರ್.ಎಸ್.ಎಸ್ ನ ಕೂಸು ಎಂಬುದಕ್ಕೆ ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು ? ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next