Advertisement

Siddaramayya: ಸಿದ್ದು ಅಂಗಳಕ್ಕೆ ರಾಹುಲ್‌ ಚೆಂಡು

09:42 PM Apr 07, 2023 | Team Udayavani |

ಬೆಂಗಳೂರು: ತಮಗೆ ಈಗಾಗಲೇ ವರುಣಾ ಕ್ಷೇತ್ರದಿಂದ ಟಿಕೆಟ್‌ ಘೋಷಿಸಲಾಗಿದ್ದು ಕೋಲಾರದಿಂದ ಸ್ಪರ್ಧಿಸಬೇಕೋ-ಬೇಡವೋ ಎಂಬುದನ್ನು ತಾವೇ ನಿರ್ಧರಿಸಬೇಕು ಎಂದು ಹೇಳುವ ಮೂಲಕ ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ಅವರು ಕೋಲಾರ ಸ್ಪರ್ಧೆಯ ಚೆಂಡನ್ನು ಮತ್ತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಂಗಳಕ್ಕೆ ತಳ್ಳಿದ್ದಾರೆ.

Advertisement

ದಿಲ್ಲಿಯಲ್ಲಿ ಮೂರು ದಿನ ನಡೆದ ಸ್ಕ್ರೀನಿಂಗ್‌ ಕಮಿಟಿ ಹಾಗೂ ಕೇಂದ್ರ ಚುನಾವಣಾ ಸಮಿತಿ ಸಭೆಗಳಲ್ಲಿ ಕೋಲಾರ ಕ್ಷೇತ್ರದ ವಿಷಯ ಸಾಕಷ್ಟು ಚರ್ಚೆಗೆ ಒಳಗಾಗಿದೆ. ವಿಶೇಷವಾಗಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ರಾಹುಲ್‌ಗಾಂಧಿ ಅವರು ಕೋಲಾರದ ಬಗ್ಗೆ ಸಾಕಷ್ಟು ವಿವಾದ-ಗೊಂದಲಗಳು ಸೃಷ್ಟಿಯಾಗಿವೆ. ಈ ವಿಷಯದಲ್ಲಿ ತಮ್ಮನ್ನು ಅನಗತ್ಯವಾಗಿ ಎಳೆಯಬಾರದು. ಕೋಲಾರದಿಂದ ಸ್ಪರ್ಧೆ ಬೇಕೋ-ಬೇಡವೋ ಎಂಬುದನ್ನು ನಿರ್ಧರಿಸಿ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದಂತೆ ಕಾಣುತ್ತಿದೆ.

ಸದ್ಯ ಬಾದಾಮಿ ಶಾಸಕರಾಗಿರುವ ಸಿದ್ದರಾಮಯ್ಯ ಅವರಿಗೆ ತಮ್ಮ ಪುತ್ರ ಡಾ.ಯತೀಂದ್ರ ಪ್ರತಿನಿಧಿಸುತ್ತಿರುವ ವರುಣಾದಿಂದ ಮೊದಲ ಪಟ್ಟಿಯಲ್ಲಿಯೇ ಟಿಕೆಟ್‌ ಘೋಷಿಸಲಾಗಿದೆ. ಆದರೆ ಸುರಕ್ಷತೆ ದೃಷ್ಟಿಯಿಂದ ಎರಡು ಕಡೆ ಸ್ಪರ್ಧಿಸಬೇಕು ಎಂಬುದು ಸಿದ್ದರಾಮಯ್ಯ ಲೆಕ್ಕಾಚಾರ. ಇದಕ್ಕೆ ಪಕ್ಷದೊಳಗೆ ವ್ಯಾಪಕ ವಿರೋಧವಿದೆ. ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಸಹ ತಮಗೆ ಕೊರಟಗೆರೆ ಜತೆಗೆ ಪುಲಕೇಶಿನಗರದಿಂದಲೂ ಸ್ಪರ್ಧಿಸಲು ಅವಕಾಶ ಕೊಡಬೇಕೆಂಬ ಬೇಡಿಕೆ ಮುಂದಿಟ್ಟಿದ್ಧಾರೆ. ಈ ವಿಷಯ ದಿಲ್ಲಿ ಸಭೆಗಳಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದೆ.

ಅಂತಿಮವಾಗಿ ಸಿದ್ದರಾಮಯ್ಯ ಅವರೇ ಕೋಲಾರದ ಬಗ್ಗೆ ನಿರ್ಧರಿಸಲಿ ಎಂದು ಹೈಕಮಾಂಡ್‌ ಹೇಳುವ ಮೂಲಕ ಜಾಣ ನಡೆ ಅನುಸರಿಸಿದೆ. ರಾಹುಲ್‌ ಗಾಂಧಿ ಅವರಿಂದ ಕೋಲಾರಕ್ಕೆ ಗ್ರೀನ್‌ ಸಿಗ್ನಲ್‌ ಸಿಗಬಹುದೆಂದು ನಿರೀಕ್ಷಿಸಿದ್ದ ಸಿದ್ದರಾಮಯ್ಯ ಈಗ ಆತಂಕಕ್ಕೆ ಒಳಗಾದಂತೆ ಕಾಣುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರು ರಾಹುಲ್‌ ಗಾಂಧಿ ಅವರೊಂದಿಗೆ ಮತ್ತೂಮ್ಮೆ ಚರ್ಚಿಸಿ ವಿವಾದ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆಂದು ಗೊತ್ತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next