ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ ನಿರ್ಧಾರವನ್ನು ಸ್ವಾಗತಿಸಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದು ಪ್ರಜಾಪ್ರಭುತ್ವಕ್ಕರ ಸಂದ ನೈಜ ಗೆಲುವು ಎಂದಿದ್ದಾರೆ.
ಸ್ಪೀಕರ್ ಆದೇಶ ಹೊರಬೀಳುತ್ತಿದ್ದಂತೆ ಟ್ವೀಟ್ ಮಾಡಿದ ಸಿದ್ದರಾಮಯ್ಯ, ಸ್ವಾರ್ಥ ಸಾಧನೆ, ಅಧಿಕಾರದಾಸೆಯಿಂದ ಜನಾದೇಶವನ್ನು ಧಿಕ್ಕರಿಸಿ ತಮ್ಮನ್ನು ತಾವು ಮಾರಿಕೊಳ್ಳುವ ಹೀನ ಸಂಸ್ಕೃತಿಗೆ ಈ ತೀರ್ಪು ಇತಿಶ್ರೀ ಹಾಡಲಿದೆ ಎಂಬ ನಂಬಿಕೆಯಿದೆ ಎಂದಿದ್ದಾರೆ.
ಶಾಸಕರ ಅನರ್ಹತೆ ವಿಚಾರವಾಗಿ ಮತ್ತೊಂದು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಸರಕಾರಗಳು ಬರುತ್ತವೆ, ಹೋಗುತ್ತವೆ. ಪದವಿ, ಅಧಿಕಾರ ರಾಜಕಾರಣದಲ್ಲಿ ಯಾವತ್ತಿಗೂ ಶಾಶ್ವತವಲ್ಲ. ಮುಂದಿನ ಪೀಳಿಗೆಯ ರಾಜಕಾರಣಕ್ಕೆ ನಾವು ಮಾದರಿಯಾಗಿ ಏನನ್ನು ಬಿಟ್ಟು ಹೋಗುತ್ತೇವೆ ಎನ್ನುವುದು ಮುಖ್ಯ. ಸಭಾಧ್ಯಕ್ಷರ ಇಂದಿನ ನಿರ್ಣಯ ಅವಕಾಶವಾದಿ ರಾಜಕಾರಣಕ್ಕೆ ನೀಡಿರುವ ಕೊಡಲಿ ಏಟು. ಸ್ಪೀಕರ್ ಅವರ ತೀರ್ಮಾನವನ್ನು ನಾನು ಸ್ವಾಗತಿಸುತ್ತೇನೆ ಎಂದಿದ್ದಾರೆ.
ಇಂದು ಶಾಸಕರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರು 14 ಶಾಸಕರ ಅನರ್ಹತೆಯನ್ನು ಘೋಷಿಸಿದ್ದರು.