ಚಿಕ್ಕಬಳ್ಳಾಪುರ:ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯ ಪ್ರಸ್ತುತ ಸುಧಾಕರ್ ಕೈಯಲ್ಲಿದೆ ಎಂದು ಸಹಕಾರ ಸಚಿವ ಸೋಮಶೇಖರ್ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ನಡೆಯುತ್ತಿರುವ ಚಿಕ್ಕಬಳ್ಳಾಪುರ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಚಿವ ಸುಧಾಕರ್ ಮನಸು ಮಾಡಿದರೆ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಬಿಜೆಪಿ ಮಯವಾಗುತ್ತದೆ. ಕೋಲಾರದಲ್ಲಿ ಸಿದ್ದರಾಮಯ್ಯ ಸೋಲಲಿದ್ದಾರೆ ಎಂದು ಹೇಳಿದರು.
ಸುಧಾಕರ್ ಅವರ ನಡೆ ಏನಿರಬಹುದು ಎಂಬ ಕಾರಣದಿಂದಲೇ ಸಿದ್ದರಾಮಯ್ಯ ಹೈಕಮಾಂಡ್ ಅನುಮತಿ ಬೇಕು ಎಂದಿದ್ದಾರೆ. ಅವರಿಗೆ ಸ್ಪಷ್ಟತೆ ಇಲ್ಲ, ಹಾಗಾಗಿಯೇ ಬಾದಾಮಿ, ಚಾಮರಾಜಪೇಟೆ, ಕೊಪ್ಪಳ ಎಂದು ತಿರುಗಾಡಿದರು. ಈಗ ಅಂತಿಮವಾಗಿ ಕೋಲಾರವನ್ನು ಘೋಷಿಸಿ, ಹೈಕಮಾಂಡ್ ಮೇಲೆ ಹಾಕಿದ್ದಾರೆ. ಇದಕ್ಕೆ ಕಾರಣ ಸುಧಾಕರ್ ಪ್ರತಿಕ್ರಿಯೆ ನೋಡುವುದಕ್ಕಾಗಿ ಎಂದು ಟಾಂಗ್ ನೀಡಿದರು.
ಸಚಿವ ಡಾ.ಸುಧಾಕರ್ ಮತ್ತು ನಾನು ರಾಜಕೀಯಕ್ಕೆ ಬಂದಾಗಲಿಂದಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟಾರ್ಗೆಟ್ ಮಾಡಿಕೊಳ್ಳುತ್ತ ಬಂದಿದ್ದಾರೆ. ಟಾರ್ಗೆಟ್ ಮಾಡಿದರೆ ಮಾಡಲಿ, ನಾವು ರಾಜಕಾರಣಕ್ಕೆ ಬಂದಾಗಲಿಂದ ಟಾರ್ಗೆಟ್ ನಡೆಯುತ್ತಲೇ ಇದೆ. ಯಾರು ಸಾರ್ವಜನಿಕರ ಮಧ್ಯೆ ಕೆಲಸ ಮಾಡ್ತಾರೆ, ಯಾರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆಗಳು ಸಮರ್ಪಕ ಅನುಷ್ಠಾನ ಮಾಡ್ತಾರೆ ಅವರ ಮೇಲೆ ಅವರಿಗೆ ಕಣ್ಣಿರುತ್ತೆ ಎಂದು ಹೇಳಿದರು.
ಕಳೆದ ಮೂರು ವರ್ಷಗಳಿಂದ ಮೌನವಾಗಿದ್ದ ಅವರು, ಇನ್ನು ಕೇವಲ ಮೂರು ನಾಲ್ಕು ತಿಂಗಳಲ್ಲಿ ಚುನಾವಣೆ ಇದೆ ಎಂಬುದನ್ನು ನೋಡಿಕೊಂಡು, ನಮ್ಮ ಮೇಲೆ ಟೀಕೆ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ರಾಜ್ಯದ ಜನ ಎಲ್ಲವನ್ನು ನೋಡುತ್ತಿದ್ದಾರೆ. ಜನರೇ ಸೂಕ್ತ ತೀರ್ಪು ನೀಡುತ್ತಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಟಾಂಗ್ ನೀಡಿದರು.