Advertisement

ಸಿಎಂ ಕುಮಾರಸ್ವಾಮಿಗೆ 4 ಪತ್ರ ಬರೆದ ಸಿದ್ದರಾಮಯ್ಯ

09:33 AM Feb 16, 2019 | Team Udayavani |

ಗುಳೇದಗುಡ್ಡ: ಉತ್ತರ ಕರ್ನಾಟಕ ಭಾಗದಲ್ಲಿ ಯಾವುದೇ ಜಿಲ್ಲೆಗಳಲ್ಲಿ ಸುಸಜ್ಜಿತ ಹೃದಯ ರೋಗದ ಆಸ್ಪತ್ರೆ ಇಲ್ಲ. ಆದ್ದರಿಂದ ಬಾಗಲಕೋಟೆಯ ಗುಳೇದಗುಡ್ಡ ಪಟ್ಟಣದಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಘಟಕ ಆರಂಭಿಸಬೇಕೆಂದು ಮಾಜಿ ಸಿಎಂ, ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ.

Advertisement

ಮಾಜಿ ಸಿಎಂ ಮತ್ತು ಸ್ಥಳೀಯ ಶಾಸಕ ಸಿದ್ದರಾಮಯ್ಯನವರು ಒಟ್ಟು ನಾಲ್ಕು ಪತ್ರಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಬರೆದಿದ್ದು, ಈ ಭಾಗದಲ್ಲಿ ರೈತರು, ಕೂಲಿ ಕಾರ್ಮಿಕರು, ಬಡ ಜನರಿಗೆ ಹೃದಯ ರೋಗಕ್ಕೆ ಸಂಬಂಧಿಸಿದ ರೋಗಿಗಳು ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಹೃದಯ ಸಂಸ್ಥೆ ಅಥವಾ ಹೊರ ರಾಜ್ಯದ ಆಸ್ಪತ್ರೆಗೆ ಕನಿಷ್ಠ 500 ಕಿ.ಮೀ. ತೆರಳಿ ಚಿಕಿತ್ಸೆ ಪಡೆಯುವಂತಾಗಿದೆ. ಇದರಿಂದ ರೋಗಿಗಳು ತೀವ್ರವಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಜೊತೆಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯದೇ ಮೃತರಾದ ಘಟನೆ ಸಂಭವಿಸಿವೆ. ಆದ್ದರಿಂದ ಉತ್ತರ ಕರ್ನಾಟಕದ ಮಧ್ಯ ಭಾಗದ ಕೇಂದ್ರವಾಗಿರುವ ಬಾಗಲಕೋಟೆಯ ಗುಳೇದಗುಡ್ಡ ಪಟ್ಟಣದಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಘಟಕ ತೆರೆಯಬೇಕೆಂದು ಪತ್ರ ಬರೆದಿದ್ದಾರೆ.

ವಿಭಾಗೀಯ ಕಚೇರಿ ಆರಂಭಿಸಿ: ಬಾದಾಮಿ ತಾಲೂಕಿನಲ್ಲಿ ಬಾದಾಮಿ ಪಟ್ಟಣ, ಕೆರೂರು ಹಾಗೂ ನೂತನ ತಾಲೂಕು ಗುಳೇದಗುಡ್ಡ ಪಟ್ಟಣ ಸುಮಾರು 154 ಹಳ್ಳಿಗಳಿಂದ ಕೂಡಿದ್ದು, ಹೆಸ್ಕಾಂ ವಿಭಾಗೀಯ ಕಚೇರಿಯು ಬಾಗಲಕೋಟೆಯಲ್ಲಿರುವುದರಿಂದ ಬಾದಾಮಿ ಹಾಗೂ ಗುಳೇದಗುಡ್ಡ ತಾಲೂಕಿನ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಗುಳೇದಗುಡ್ಡ ಪಟ್ಟಣದಲ್ಲಿ ನೂತನ ವಿಭಾಗೀಯ ಕಚೇರಿ ಮಂಜೂರು ಮಾಡಬೇಕೆಂದು ಪತ್ರ ಬರೆದಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೆಪಿಟಿಎಸ್‌ಎಲ್‌ ಬೆಂಗಳೂರಿನ ವ್ಯವಸ್ಥಾಪಕ ನಿರ್ದೇಶಕರಿಗೆ ವಿಭಾಗೀಯ ಕಚೇರಿ ತೆರೆಯಲು ಸೂಚಿಸಿದ್ದಾರೆ.

110ಕೆವಿ ವಿದ್ಯುತ್‌ ಸ್ಟೇಶನ್‌ ಆರಂಭಿಸಿ: ಬಾದಾಮಿ ತಾಲೂಕಿನ ಕೆಂದೂರ, ಆಲದಕಟ್ಟಿ ಕ್ರಾಸ್‌, ನಾಗರಾಳ ಎಸ್‌.ಪಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿದ್ಯುತ್ತಿನ ಸಮಸ್ಯೆಯಿದೆ. ರೈತರಿಗೆ ಸಮರ್ಪಕ ವಿದ್ಯುತ್‌ ದೊರೆಯುತ್ತಿಲ್ಲ. ಆದ್ದರಿಂದ ಈ ಕೆಂದೂರ, ಆಲದಕಟ್ಟಿ ಕ್ರಾಸ್‌, ನಾಗರಾಳ ಎಸ್‌.ಪಿ ಭಾಗದಲ್ಲಿ ಹೊಸದಾಗಿ 110ಕೆವಿ ವಿದ್ಯುತ್‌ ವಿತರಣಾ ಸ್ಟೇಶನ್‌ ಮಂಜೂರಿ ಮಾಡಬೇಕೆಂದು ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ಭೂಗತ ವಿದ್ಯುತ್‌ ಮಾರ್ಗ: ಗುಳೇದಗುಡ್ಡ ಪಟ್ಟಣವು ಬಾದಾಮಿ ತಾಲೂಕು ಕೇಂದ್ರವಾಗಿದ್ದು, ಈ ಎರಡು ಪಟ್ಟಣಗಳಲ್ಲಿ ಓವರ್‌ಹೆಡ್‌ ವಿದ್ಯುತ್‌ ಲೈನ್‌ ಇದ್ದು, ಇದನ್ನು ಭೂಗತ ವಿದ್ಯುತ್‌ ಲೈನ್‌ಆಗಿ ಮಾರ್ಪಡಿಸಿದರೆ ಸಾರ್ವಜನಿಕರಿಗೆ ಗುಣಮಟ್ಟದ ವಿದ್ಯುತ್‌ ಅನ್ನು ನೀಡಲು ಅನುಕೂಲವಾಗುವುದು. ಬಾದಾಮಿ ಮತ್ತು ಗುಳೇದಗುಡ್ಡ ಪಟ್ಟಣದಲ್ಲಿ ಭೂಗತ ವಿದ್ಯುತ್‌ ಲೈನ್‌ಆಗಿ ಮಾರ್ಪಡಿಸಲು ಕೋರಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕ್ರಮಕೈಗೊಳ್ಳಲು ನಿರ್ದೇಶಕರಿಗೆ ಸೂಚಿಸಿದ್ದಾರೆ.

Advertisement

ಸಚಿವ ರೇವಣ್ಣರಿಗೂ ಪತ್ರ
ಗುಳೇದಗುಡ್ಡ ಪಟ್ಟಣ ನೂತನ ತಾಲೂಕು ಘೋಷಣೆಯಾಗಿ ಕಾರ್ಯರಂಭಗೊಂಡಿದೆ. ಸದರಿ ತಾಲೂಕು ಕಚೇರಿ ಕಟ್ಟಡ ಅವಶ್ಯಕತೆ ಇರುವುದರಿಂದ ಅಗತ್ಯ ಅನುದಾನ ಮಂಜೂರು ಮಾಡುವಂತೆ ಸಿದ್ದರಾಮಯ್ಯ ಅವರು ಲೋಕೋಪಯೋಗಿ ಸಚಿವ ರೇವಣ್ಣನವರಿಗೂ ಸಹ ಪತ್ರ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next