Advertisement

MUDA Case: ಸಿಎಂ ಲೋಕಾಯುಕ್ತ ವಿಚಾರಣೆ: ವಿಪಕ್ಷ ಬಿಜೆಪಿ, ಜೆಡಿಎಸ್‌ ಅನುಮಾನ

12:48 AM Nov 07, 2024 | Team Udayavani |

ಬೆಂಗಳೂರು/ಹುಬ್ಬಳ್ಳಿ: ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಲೋಕಾಯುಕ್ತ ಪೊಲೀಸರಿಂದ ವಿಚಾರಣೆಗೊಳಗಾದ ಬೆನ್ನಲ್ಲೇ, ಅವರ ವಿರುದ್ಧ ಮುಗಿ ಬಿದ್ದಿರುವ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ವಿಚಾರಣೆ ಎದುರಿಸಲಿ ಎಂದು ಆಗ್ರಹಿಸಿದ್ದಾರಲ್ಲದೆ, ಪಾರದರ್ಶಕ ತನಿಖೆಗೆ ಅನುಮಾನ ವ್ಯಕ್ತಪಡಿಸಿ, ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ.

Advertisement

ಈ ಸಂಬಂಧ ರಾಮನಗರದಲ್ಲಿ ಮಾತನಾಡಿದ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಇಂತಹ ಭಂಡ ಮುಖ್ಯಮಂತ್ರಿಯನ್ನು ನಾನು ಎಲ್ಲಿಯೂ ನೋಡಿಲ್ಲ. ಪಾರದರ್ಶಕ ತನಿಖೆ ನಡೆದಿದೆ ಎಂದು ನನಗೆ ಅನಿಸಲ್ಲ. ಈ ತನಿಖೆ ನಾನು ಮಾತ್ರವಲ್ಲ, ಇಡೀ ರಾಜ್ಯದ ಜನ ಯಾರೂ ನಂಬಲ್ಲ. ಒಬ್ಬ ಎಸ್ಪಿಯಿಂದ ಮುಖ್ಯಮಂತ್ರಿಯನ್ನು ವಿಚಾರಣೆ ಮಾಡುತ್ತಾರೆ ಅಂದರೆ ನಂಬುವ ಮಾತಾ ಎಂದು ಪ್ರಶ್ನಿಸಿದ್ದಾರೆ.

ಚನ್ನಪಟ್ಟಣದ ಅಂಬಾಡಹಳ್ಳಿ ಗ್ರಾಮದಲ್ಲಿ ಚುನಾವಣ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಿದ್ದರಾಮಯ್ಯ ಅವರು ರಾಜೀನಾಮೆ ಕೊಟ್ಟು ಲೋಕಾಯುಕ್ತ ತನಿಖೆಗೆ ಹೋಗಬೇಕು. ಆದರೆ ಅಧಿಕಾರದಲ್ಲಿದ್ದಾಗ ತನಿಖೆಗೆ ಹೋದರೆ ಹೇಗೆ? ಲೋಕಾಯುಕ್ತ ಅಧಿಕಾರಿಗಳೆಲ್ಲ ರಾಜ್ಯದವರೇ. ಹೀಗಾಗಿ ಮುಖ್ಯಮಂತ್ರಿಗೆ ಅನುಕೂಲವಾಗುವ‌ ರೀತಿ ಎಲ್ಲವನ್ನೂ ಮಾಡಿಕೊಡುತ್ತಾರೆ. ಮುಖ್ಯಮಂತ್ರಿ ಪ್ರಾಮಾಣಿಕರಿದ್ದರೆ ಎಲ್ಲ ಹಗರಣವನ್ನು ಸಿಬಿಐಗೆ ನೀಡಲಿ ಎಂದು ಆಗ್ರಹಿಸಿದ್ದಾರೆ.

“ಲೋಕಾಯುಕ್ತದವರಿಗೂ ಸಿಎಂ ಭಯ ಕಾಡುತ್ತಿದೆ. ಎಷ್ಟು ಬೇಗ ಸಿಎಂಗೆ ರಿಲೀಫ್ ಕೊಡಬೇಕು, ಬಿ ರಿಪೋರ್ಟ್‌ ಹಾಕಬೇಕು ಅಂತಾ ಲೋಕಾಯುಕ್ತ ತನಿಖೆ ಸಾಗುತ್ತಿದೆ. ಲೋಕಾಯುಕ್ತ ಒತ್ತಡದಲ್ಲಿ ಕೆಲಸ ಮಾಡುತ್ತಿದೆ. ಲೋಕಾಯುಕ್ತ ಕ್ಲೀನ್‌ ಚೀಟ್‌ ಕೊಟ್ಟರೂ ಗಂಡಾಂತರದಿಂದ ಪಾರಾಗಲು ಸಾಧ್ಯವಿಲ್ಲ.”
ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

“ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿಯೊಬ್ಬರು ಲೋಕಾಯುಕ್ತ ವಿಚಾರಣೆ ಎದುರಿಸುತ್ತಿರುವುದು ರಾಜ್ಯದಲ್ಲಿ ಇದೇ ಮೊದಲು. ರಾಜ್ಯದ ರಾಜಕೀಯ ಇತಿಹಾಸಕ್ಕೆ ಮತ್ತು ಕಾಂಗ್ರೆಸ್‌ ಪಕ್ಷಕ್ಕೆ ಇದು ಕಪ್ಪು ಚುಕ್ಕೆ. ನೈತಿಕತೆಯಿಂದ ಕೂಡಲೇ ಆರೋಪಿತರಾಗಿರುವ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು.”
ಕೆ.ಎಸ್‌.ಈಶ್ವರಪ್ಪ, ಮಾಜಿ ಡಿಸಿಎಂ

Advertisement

“ಪ್ರಕರಣದ ತನಿಖೆ ವಿಚಾರಕ್ಕೆ ಬಂದರೆ ಕಾಂಗ್ರೆಸ್‌ಗೊಂದು, ಬಿಜೆಪಿಗೊಂದು ಕಾನೂನು ಇದೆಯಾ? ಮುಡಾ ಹಗರಣದ ನೆಪದಲ್ಲಿ ಮುಖ್ಯಮಂತ್ರಿ ಸಿದ್ದರಾಮ್ಯಯ ರಾಜೀನಾಮೆಗೆ ಒತ್ತಾಯಿಸುವ ಬಿಜೆಪಿಯವರು ಚುನಾವಣ ಬಾಂಡ್‌ ಪ್ರಕರಣದಲ್ಲಿ ಆತ್ಮಾವಲೋಕನ ಮಾಡಿಕೊಂಡು ಹೇಳಿಕೆ ನೀಡಲಿ.”
ಎಚ್‌.ಕೆ.ಪಾಟೀಲ್‌, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next