Advertisement

ರೈತರ ಒಂದು ರೂ. ಸಾಲ ಕೂಡ ಮನ್ನಾ ಆಗಿಲ್ಲ

06:00 AM Nov 12, 2018 | |

ಕಲಬುರಗಿ: ಮಾಜಿ ಸಿಎಂ ಸಿದ್ದರಾಮಯ್ಯ ಘೋಷಿಸಿದ ರೈತರ ಬೆಳೆ ಸಾಲ ಮನ್ನಾವೇ ಇನ್ನೂ ಬಾಕಿ ಇದ್ದು, ಕುಮಾರಸ್ವಾಮಿ ಮಾಡಿದ ಸಾಲಮನ್ನಾದ ಒಂದೇ ಒಂದು ರೂಪಾಯಿ ಕೂಡ ಬಿಡುಗಡೆಯಾಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ದೂರಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ ಎಂದು ಹೇಳುತ್ತಾರೆ. ಆದರೆ, ಇದುವರೆಗೂ ಒಂದು ರೂಪಾಯಿ ಸಹ ಬಿಡುಗಡೆಯಾಗಿಲ್ಲ. 

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 50 ಸಾವಿರ ರೂ.ವರೆಗಿನ ಎಂಟು ಸಾವಿರ ಕೋಟಿ ಸಾಲ ಮನ್ನಾ ಹಣದಲ್ಲೇ ಇನ್ನೂ 547 ಕೋಟಿ ಬಾಕಿಯಿದೆ. ರಾಜ್ಯದ ಪ್ರಗತಿ ಕುಂಠಿತಗೊಂಡಿದ್ದು, ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳಿಗೆ ಟೆಂಡರ್‌ ನಡೆಯುತ್ತಿಲ್ಲ. ಪರಿಶಿಷ್ಟ ಪಂಗಡ ಮತ್ತು ಜಾತಿಯ ಯೋಜನೆಗಳಿಗೆ ಮತ್ತು ವಿದ್ಯಾರ್ಥಿ ವೇತನಕ್ಕೆ ಅನುದಾನ ಬಿಡುಗಡೆಯಾಗಿಲ್ಲ. ಸ್ಮಾರ್ಟ್‌ ಯೋಜನೆಯಲ್ಲಿ ಕೇವಲ 3ರಷ್ಟು ಮಾತ್ರ ಪ್ರಗತಿಯಾಗಿದೆ. ಜಲಸಂಪನ್ಮೂಲ, ಲೋಕೋಪಯೋಗಿ ಇಲಾಖೆಗಳಿಗೆ ಅನುದಾನ ಸಿಕ್ಕಿಲ್ಲ. ಕೌಶಲ್ಯಾಭಿವೃದ್ಧಿ, ಸ್ವತ್ಛ ಭಾರತ ಮುಂತಾದ ಯೋಜನೆಗಳ ಅಭಿವೃದ್ಧಿ ಶೇ.25ರಷ್ಟು ಮಾತ್ರ ಇದೆ ಎಂದರು.

ಸೋಲಿನ ಹೊಣೆ ಹೊರುವೆ:
ಉಪಚುನಾವಣೆಯಲ್ಲಿ ಪಕ್ಷದ ಸೋಲಿನ ಹೊಣೆ ಹೊರಲು ನಾನು ಸಿದ್ಧನಿದ್ದೇನೆ. ಬಳ್ಳಾರಿ ಮತ್ತು ಜಮಖಂಡಿಯಲ್ಲಿ ಅಭ್ಯರ್ಥಿಗಳ ಸೋಲಿಗೆ ಪಕ್ಷದ ಸಂಘಟನೆಯ ಕೊರತೆ ಕಾರಣ ಅಲ್ಲ. ರಾಮನಗರದಲ್ಲಿ ಅಭ್ಯರ್ಥಿ ಆಯ್ಕೆಯಲ್ಲಿ ತಪ್ಪಾಗಿದೆ. ಆದರೂ, ಪಕ್ಷದ ಸೋಲನ್ನು ಒಪ್ಪಿಕೊಳ್ಳುತ್ತೇನೆ. ಶಿವಮೊಗ್ಗದಲ್ಲಿ ಮತಗಳ ಅಂತರ ಕಡಿಮೆ ಆಗಿದ್ದನ್ನು ಮುಂಬರುವ ಚುನಾವಣೆಯಲ್ಲಿ ಸರಿಪಡಿಸಿಕೊಳ್ಳುತ್ತೇವೆ. ಮಂಗಳವಾರ ಪಕ್ಷದ ಸಭೆ ಕರೆಯಲಾಗಿದ್ದು, ಎಲ್ಲ ವಿಷಯಗಳ ಕುರಿತು ಚರ್ಚೆ ಮಾಡುತ್ತೇವೆ ಎಂದರು.

ಖರ್ಗೆ ವಿರುದ್ಧ ಪ್ರಬಲ ಅಭ್ಯರ್ಥಿ ಸ್ಪರ್ಧೆ
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಹಾಲಿ ಸಂಸದ ಡಾ. ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಂಜಾರಾ ಸಮುದಾಯದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುತ್ತದೆ. ಲೋಕಸಭೆ ಚುನಾವಣೆಯಲ್ಲಿ ಬೀದರ್‌, ಕಲಬುರಗಿ ಕ್ಷೇತ್ರಗಳು ಸೇರಿ ಕನಿಷ್ಠ 22 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಬಿಎಸ್‌ವೈ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಕಾಂಗ್ರೆಸ್‌-ಜೆಡಿಎಸ್‌ನವರು ಕಚ್ಚಾಡಿಕೊಂಡು ಸರ್ಕಾರ ಬಿದ್ದರೆ, ನಾವು ಸರ್ಕಾರ ರಚಿಸುವುದಕ್ಕೆ ಹಿಂದೆ-ಮುಂದೆ ನೋಡಲು ಆಗೋದಿಲ್ಲ. ಹೀಗಾಗಿ ಕಾಲ ಬಂದಾಗ ನೋಡೋಣ. ಮುಂದಿನ ಮುಖ್ಯಮಂತ್ರಿ ಎಂದು ಕುಳಿತುಕೊಳ್ಳದೆ ಪ್ರತಿಪಕ್ಷವಾಗಿ ಒಳ್ಳೆಯ ಕೆಲಸ ಮಾಡುವ ಬಗ್ಗೆ ಗಮನ ನೀಡಲಾಗುತ್ತಿದೆ.
– ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next