Advertisement

2023ರ ವಿಧಾನಸಭೆ ಚುನಾವಣೆಗೆ ಕಾರ್ಯತಂತ್ರ: ಸೋನಿಯಾಗೆ ನೀಲನಕ್ಷೆ ಸಲ್ಲಿಸಿದ ಸಿದ್ದರಾಮಯ್ಯ

10:24 AM Oct 07, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆಗೆ ಯಾವ ರೀತಿಯ ಕಾರ್ಯತಂತ್ರ ರೂಪಿಸಬಹುದು ಎಂಬ ಬಗ್ಗೆ ಸೋನಿಯಾ ಗಾಂಧಿಯವರಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೀಲನಕ್ಷೆ ಸಲ್ಲಿಸಿ ಬಂದಿದ್ದಾರೆ.

Advertisement

ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ದೂರವಾಗಿರುವ ಮತ ಬ್ಯಾಂಕ್‌ ಮತ್ತೆ ಸೆಳೆಯುವ ನಿಟ್ಟಿನಲ್ಲಿ ಅನುಸರಿಸಬೇಕಾದ ಮಾರ್ಗಗಳ ಕುರಿತು ತಮ್ಮ ಅಭಿಪ್ರಾಯ ಹಾಗೂ ಯೋಜನೆ ಬಗ್ಗೆಯೂ ಸೋನಿಯಾ ಗಾಂಧಿಯವರ ಗಮನಕ್ಕೆ ತಂದಿದ್ದಾರೆ.

ಅಷ್ಟೇ ಅಲ್ಲದೆ, ಪಕ್ಷ ಸಂಘಟನೆ ಹಾಗೂ ಚುನಾವಣೆಗೆ ಸಜ್ಜಾಗುವ ನಿಟ್ಟಿನಲ್ಲಿ ಮುಂದಿನ ಏಪ್ರಿಲ್‌ನಿಂದ ರಾಜ್ಯ ಪ್ರವಾಸ ಹಾಗೂ ಸಮುದಾಯದವಾರು ಸಮಾವೇಶ ಕೈಗೊಳ್ಳುವ ಇಂಗಿತವನ್ನೂ ವ್ಯಕ್ತಪಡಿಸಿದರು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನ ಸಾಂಪ್ರದಾಯಿಕ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಮತ ವಿಭಜನೆಯಿಂದ ಎರಡು ಚುನಾವಣೆಗಳಲ್ಲಿ ಹಿನ್ನೆಡೆಯಾಗಿದ್ದು, ಮುಂದಿನ ಚುನಾವಣೆಯಲ್ಲಿ ಅದಕ್ಕೆ ಅವಕಾಶ ಇಲ್ಲದಂತೆ ಅಭ್ಯರ್ಥಿಗಳ ಆಯ್ಕೆಯಲ್ಲೂ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಹೇಳಿದರು ಎನ್ನಲಾಗಿದೆ.

ಸ್ವಂತ ಸಾಮರ್ಥ್ಯ ಹಾಗೂ ಕ್ಷೇತ್ರಗಳಲ್ಲಿ ಪ್ರಭಾವ ಹೊಂದಿರುವ ಬಿಜೆಪಿ ಹಾಗೂ ಜೆಡಿಎಸ್‌ನ ಕೆಲವು ಶಾಸಕರು ಸಂಪರ್ಕದಲ್ಲಿದ್ದು ಕಾಂಗ್ರೆಸ್‌ ಸೇರ್ಪಡೆ ಮಾಡಿಕೊಂಡರೆ ಪಕ್ಷ ಅಧಿಕಾರಕ್ಕೆ ಬರಲು ಸಹಾಯವಾಗಬಹುದು ಎಂಬ ಮಾಹಿತಿ ಹಾಗೂ ಹೆಸರುಗಳನ್ನೂ ನೀಡಿದ್ದಾರೆ ಎಂದು ಹೇಳಲಾಗಿದೆ.

Advertisement

ಸೋನಿಯಾ ಸಲಹೆ: ಸಿದ್ದರಾಮಯ್ಯ ಅವರ ಅಭಿಪ್ರಾಯ ಆಲಿಸಿದ ಸೋನಿಯಾ ಗಾಂಧಿಯವರು ಅಹಿಂದ ವರ್ಗದ ಜತೆಗೆ ಮೇಲ್ವರ್ಗದ ಮತಬ್ಯಾಂಕ್‌ ಸೆಳೆಯುವ ನಿಟ್ಟಿನಲ್ಲಿ ಗಮನಹರಿಸಿ, ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಎಲ್ಲಿ ವ್ಯತ್ಯಾಸಗಳಾಗಿವೆ ಎಂಬುದನ್ನು ಪತ್ತೆ ಹಚ್ಚಿ ಸರಿಪಡಿಸಿ. ಪ್ರಮುಖವಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನೀವು ಮತ್ತು ಅಧ್ಯಕ್ಷರು ಒಗ್ಗಟ್ಟಿ ನಿಂದ ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿ ಎಂದು ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಮಾರ್ಚ್‌ ವೇಳೆಗೆ ಪ್ರತಿ ವಿಧಾನಸಭೆ ಕ್ಷೇತ್ರಾವಾರು ಚಿತ್ರಣ ಹಾಗೂ ಗೆಲುವಿನಲ್ಲಿ ಪಾತ್ರ ವಹಿಸುವ ಪ್ರಮುಖ ಅಂಶಗಳ ಕುರಿತು ವರದಿ ಸಿದ್ಧಪಡಿಸಲು ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ. ಈ ಮಧ್ಯೆ, ರಾಜ್ಯ ಬಿಜೆಪಿ ಬೆಳವಣಿಗೆಗಳ ಬಗ್ಗೆಯೂ ಸಿದ್ದರಾಮಯ್ಯ ಅವರ ಬಳಿ ಸೋನಿಯಾ ಗಾಂಧಿಯವರು ಮಾಹಿತಿ ಪಡೆದುಕೊಂಡರು. ಬಿ.ಎಸ್‌.ಯಡಿಯೂರಪ್ಪ ಅವರ ನಿರ್ಗಮನ, ನೂತನ ಮುಖ್ಯಮಂತ್ರಿ ಕಾರ್ಯವೈಖರಿ, ಬಿಜೆಪಿಯ ಆಂತರಿಕ ಲೆಕ್ಕಾಚಾರಗಳ ಬಗ್ಗೆಯೂ ಇದೇ ವೇಳೆ ಚರ್ಚಿಸಿದರು ಎಂದು ಹೇಳಲಾಗಿದೆ.

ಇದನ್ನೂ ಓದಿ:ಜೆಡಿಎಸ್ ಪಕ್ಷದ ಟಾರ್ಗೆಟ್ ಕಾಂಗ್ರೆಸ್ ಮಾತ್ರ, ಬಿಜೆಪಿಯಲ್ಲ: ಸಿದ್ದರಾಮಯ್ಯ

ಬಿಜೆಪಿ ಜತೆಗೆ ಜೆಡಿಎಸ್‌ನ ವಿಚಾರವೂ ಚರ್ಚೆ ಸಂದರ್ಭದಲ್ಲಿ ಪ್ರಸ್ತಾಪವಾಯಿತು. ಆಗ, ಸಿದ್ದರಾಮಯ್ಯ ಅವರು ಬೆಳಗಾವಿ, ಬಸವಕಲ್ಯಾಣ, ಮಸ್ಕಿ ಕ್ಷೇತ್ರಗಳ ಉಪ ಚುನಾವಣೆ ವಿಚಾರ ಹಾಗೂ ಹಾನಗಲ್‌, ಸಿಂದಗಿ ಕ್ಷೇತ್ರಗಳ ವಿದ್ಯಮಾನಗಳ ಬಗ್ಗೆಯೂ ಗಮನಕ್ಕೆ ತಂದಿದ್ದಾರೆಂದು ತಿಳಿದು ಬಂದಿದೆ.

ಮೇಡಂ ಭೇಟಿಯಿಂದ ಸಿದ್ದು ಖುಷ್‌: ಹೈಕಮಾಂಡ್‌ನಿಂದ ಸೋಮವಾರ ಸಂಜೆ ದಿಢೀರ್‌ ಕರೆ ಬಂದ ತಕ್ಷಣ ಸಿದ್ದರಾಮಯ್ಯ ಅವರು ಮಾನಸಿಕವಾಗಿ ತಯಾರಿ ಮಾಡಿಕೊಂಡೇ ದೆಹಲಿಗೆ ಹೊರಟಿದ್ದರು. ಮುಂದಿನ ವಿಧಾನಸಭೆ ಚುನಾವಣೆ ಎದುರಿಸುವ ಸಂಬಂಧ ತಮ್ಮದೇ ಆದ ಪ್ಲ್ರಾನ್‌ ಸೋನಿಯಾಗಾಂಧಿ ಅವರ ಮುಂದಿಡಲು ಸಜ್ಜಾಗಿಯೇ ಹೋಗಿದ್ದರು ಎಂದು ಹೇಳಲಾಗಿದೆ. ಸೋನಿಯಾ ಗಾಂಧಿ ಅವರ ಭೇಟಿ ನಂತರ ಸಿದ್ದರಾಮಯ್ಯ ಅವರು ಆಪ್ತರ ಬಳಿ ಸಂತಸ ಹಂಚಿಕೊಂಡಿದ್ದಾರೆ. ಎರಡು ವರ್ಷದ ನಂತರ ನಡೆದ ಒಳ್ಳೆಯ ಭೇಟಿ ಎಂದು ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next