ಮೈಸೂರು: ನನ್ನ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಅನ್ಯೋನ್ಯತೆಯಿದೆ, ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀನಿವಾಸ ಪ್ರಸಾದ್ ಅವರಿಗೆ ಕೋಮುವಾದಿ ಪಕ್ಷ ಸೇರಿ ನನ್ನ ವಿರುದ್ಧ ಹೇಳಿಕೆ ನೀಡಲು ನೈತಿಕತೆಯಿಲ್ಲ. ಶ್ರೀನಿವಾಸ್ ಪ್ರಸಾದ್ ಕಾಂಗ್ರೆಸ್, ಜೆಡಿಎಸ್, ಸಮಾಜವಾದಿ ಪಕ್ಷ, ಬಿಜೆಪಿ ಹೀಗೆ ಎಲ್ಲಾ ಪಕ್ಷ ಸುತ್ತಾಡಿದ್ದಾರೆ. ನನ್ನ ವಿರುದ್ಧ ಮಾತನಾಡಲು ಅವರಿಗೆ ನೈತಿಕತೆ ಏನಿದೆ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿಯವರ ಸರಣಿ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ ಅವರು, ವೈಯಕ್ತಿಕವಾಗಿ ನಾನು ಯಾರ ಮೇಲೂ ಟೀಕೆ ಮಾಡುವುದಿಲ್ಲ. ಕೇವಲ ವಿಚಾರಾಧಾರಿತ ಸಮಸ್ಯೆಗಳ ಬಗ್ಗೆ ಮಾತ್ರ ನಾನು ಟೀಕೆ ಮಾಡುತ್ತೇನೆ. ಹೆಚ್ ಡಿ ದೇವೇಗೌಡ, ಕುಮಾರಸ್ವಾಮಿ ಹಾಗೂ ಅವರ ಕುಟುಂಬ ಸದಸ್ಯರ ಮೇಲೆ ನನಗೆ ವೈಯಕ್ತಿಕವಾಗಿ ಯಾವುದೇ ರೀತಿಯ ದ್ವೇಷವಿಲ್ಲ. ಕೇವಲ ತತ್ವ ಸಿದ್ದಾಂತದ ವಿಚಾರದಲ್ಲಿ ಮಾತ್ರ ಭಿನ್ನಾಭಿಪ್ರಾಯಗಳಿವೆ. ಜೆಡಿಸ್ ನವರು ಜಾತ್ಯಾತೀತ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಆ ಬಗ್ಗೆ ನಾನು ಮಾತನಾಡಿದರೆ ಅವರ ಮೇಲೆ ದ್ವೇಷ ಸಾಧಿಸುತ್ತಿದ್ದೇನೆಂದು ಹೇಳುತ್ತಾರೆ ಎಂದರು.
ಇದನ್ನೂ ಓದಿ:ನಕಲಿ ಜಾತ್ಯತೀತ ಶೂರನ ಅಸಲಿರೂಪ ಕಳಚಿದೆ.. ಆಟ ಈಗ ಆರಂಭ..!: ಎಚ್ ಡಿಕೆ
ಅವರು ನನಗೆ ಎಸ್ ಸಿಎಫ್ (ಸಿದ್ದು ಸೂತ್ರ ಕಾಂಗ್ರೆಸ್ ಫ್ಯಾಮಿಲಿ) ಎನ್ನುತ್ತಾರೆ. ಯಾರು ಕುಟುಂಬ ರಾಜಕಾರಣ ಮಾಡುತ್ತಾರೆಂದು ಇಡೀ ರಾಜ್ಯ ದೇಶಕ್ಕೆ ಗೊತ್ತು. ಅದನ್ನು ನಾನು ಹೇಳುವ ಅಗತ್ಯವಿಲ್ಲ ಎಂದು ಟೀಕಿಸಿದರು.
ಒಂದು ಗಂಟೆಗಳ ಸುದ್ದಿಗೋಷ್ಠಿ ನಡೆಸಿದ ನಾನು ಒಂದೇ ಒಂದು ಮಾತನ್ನು ಜೆಡಿಎಸ್ ಬಗ್ಗೆ ಮಾತನಾಡಿಲ್ಲ. ಕೇವಲ ವಿಚಾರಗಳ ಬಗ್ಗೆ ಸಮಸ್ಯೆಗಳ ಬಗ್ಗೆ ಮಾತ್ರ ಮಾತನಾಡಿದ್ದೇನೆ. ಅದು ಕೇವಲ ಬಿಜೆಪಿ ಬಗ್ಗೆ ಮಾತ್ರವೇ ಮಾತನಾಡಿದ್ದೇನೆ. ನಾನು ಅನಗತ್ಯವಾಗಿ ಜೆಡಿಎಸ್ ಬಗ್ಗೆ ಮಾತನಾಡಲ್ಲ ಎಂದು ನಿಮಗೆ ಗೊತ್ತಾಗುತ್ತದೆ ಎಂದರು ಸಿದ್ದರಾಮಯ್ಯ ಹೇಳಿದರು.