ಮಸ್ಕಿ: ಬಿಜೆಪಿಯವರು ದುಡ್ಡಿದ್ರೇ ಎಲೆಕ್ಷನ್ ಮಾಡಬಹುದು ಅನ್ಕೊಂಡಿದ್ದಾರೆ. ಆದರೆ ಜನ ದುಡ್ಡಿಗೆ ಮಾರಕೊಳ್ಳೋದಿಲ್ಲ. ಅವರು ಸ್ವಾಭಿಮಾನಿಗಳು. ಅದರಲ್ಲೂ ಮಸ್ಕಿಯ ಜನ ಬಾಂಬೆಗೆ ಹೋಗಿ ವ್ಯಾಪರವಾದ ವ್ಯಕ್ತಿಯ ಬದಲು ಸ್ವಾಭಿಮಾನದ ವ್ಯಕ್ತಿಗೆ ಮತ ಹಾಕಲಿದ್ಧಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಮಸ್ಕಿ ವಿಧಾನ ಸಭೆ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ತುರುವಿಹಾಳ ಉಮೇದುವಾರಿಕೆ ಸಲ್ಲಿಕೆ ಬಳಿಕ ಮಲ್ಲಿಕಾರ್ಜುನ ದೇವಸ್ಥಾನದ ಬಳಿ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದರು. ಪ್ರತಾಪಗೌಡ ಪಾಟೀಲ್ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. 25-30 ಕೋಟಿಗೆ ಮಾರಾಟವಾಗಿದ್ದಾರೆ. 2013ರಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಸೇರುವಾಗ ಇದು ಕಳ್ಳ ಎತ್ತು. ಇದರ ಮೇಲೆ ಒಂದು ಕಣ್ಣೀಡಿ ಎಂದು ರಾಯಚೂರು ಜಿಲ್ಲೆ ಕಾಂಗ್ರೆಸ್ ಮುಖಂಡರಿಗೆ ಹೇಳಿದ್ದೆ. ಆದರೆ ಅದೇ ನಿಜವಾಯ್ತು. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದ ಕೆಲವೇ ದಿನಗಳಲ್ಲಿ ಪ್ರತಾಪಗೌಡ ಬಾಂಬೆಗೆ ಹೋದ್ರು. ದುಡ್ಡು ತಂಗೊಂಡು ಬಿಜೆಪಿ ಸೇರಿದ್ದಾರೆ. ಟಿಕೆಟ್ ಕೊಟ್ಟು ಗೆಲ್ಲಿಸಿದ ಪಕ್ಷಕ್ಕೆ ಮೋಸ ಮಾಡಿದ ಪ್ರತಾಪಗೌಡ ಸೋಲೋದು ಸತ್ಯ. ಬಿಜೆಪಿಯವರು ಹಣ ಕೊಟ್ಟು ಜನರನ್ನು ಖರೀದಿ ಮಾಡಲು ಹೊಂಚು ಹಾಕಿದ್ಧಾರೆ.
ಇದಕ್ಕಾಗಿಯೇ ಸಿಎಂ ಯಡಿಯೂರಪ್ಪನ ಮಗ ವಿಜಯೇಂದ್ರನಿಗೆ ಮಸ್ಕಿ ಜವಾಬ್ದಾರಿ ನೀಡಿದ್ದಾರೆ. ವಿಜಯೇಂದ್ರ ಅಂದ್ರೆ ದುಡ್ಡು. ದುಡ್ಡು ಇದ್ರೆ ಎಲೆಕ್ಷನ್ ಎನ್ನುವ ಭಾವನೆ ಬಿಜೆಪಿಯವರದ್ದಾಗಿದೆ. ಆದರೆ ಮಸ್ಕಿ ಕ್ಷೇತ್ರದಲ್ಲಿ ಇದೆಲ್ಲ ಉಲ್ಟಾ ಆಗಲಿದೆ. ಆರ್.ಬಸನಗೌಡ ತುರುವಿಹಾಳ ಬಡವ ಇದ್ದಾನೆ. ಹೀಗಾಗಿ ಜನ ಈ ಬಡವನಿಗೆ ವೋಟ್ ಹಾಕಲಿದ್ದಾರೆ. ಮಸ್ಕಿ ಕ್ಷೇತ್ರದ ಸ್ವಾಭಿಮಾನವನ್ನು ಜನ ಎತ್ತಿ ಹಿಡಿಯಲಿದ್ದಾರೆ.
ಬಸನಗೌಡ ಗೆದ್ದು ಶಾಸಕನಾದ್ರೆ ಅದು ಮಸ್ಕಿ ಜನರ ಸ್ವಾಭಿಮಾನದ ಸಂಕೇತವಾಗಲಿದೆ ಎಂದರು. ಅಪರೇಷನ್ ಕಮಲದ ಸಿಎಂ: ಮುಖ್ಯಮಂತ್ರಿ ಯಡಿಯೂರಪ್ಪಗೆ ಜನ ಅ ಧಿಕಾರ ಕೊಟ್ಟಿಲ್ಲ. ಹಿಂಬಾಗಿಲಿನಿಂದ, ಆಪರೇಷನ್ ಕಮಲದ ಮೂಲಕ ಸಿಎಂ ಆಗಿದ್ದಾರೆ. ಆದರೆ ಅ ಧಿಕಾರಕ್ಕೆ ಬಂದ ಬಳಿಕವಾದ್ರೂ ಜನಪರ ಕೆಲಸ ಮಾಡುವುದು ಬಿಟ್ಟು ಜನಪರ ಯೋಜನೆಗಳನ್ನೇ ಕಟ್ ಮಾಡ್ತಾ ಇದ್ದಾರೆ. ದೇಶದಲ್ಲಿ ಹೆಚ್ಚು ಸುಳ್ಳು ಹೇಳುವರು ಯಾರಾದ್ರೂ ಇದ್ರೆ ಮೋದಿ ಮತ್ತು ಯಡಿಯೂರಪ್ಪ ಎಂದ ಸಿದ್ದರಾಮಯ್ಯ, ಯಡಿಯೂರಪ್ಪ, ಮೋದಿ ಇದುವರೆಗೂ ಒಂದು ರೂಪಾಯಿ ಸಾಲಮನ್ನಾ ಮಾಡಿಲ್ಲ.
ಪ್ರಧಾನ ನರೇಂದ್ರ ಮೋದಿ ಕಪ್ಪು ಹಣ ತರ್ತೇನೆ, ಯುವಕರಿಗೆ ಉದ್ಯೋಗ ಕೊಡ್ತಿನಿ ಎಂದ ಯಾಮಾರಿಸಿದ್ರು. ಈಗ ರೈತರ ವಿರುದ್ಧ ಕಾನೂನು ಜಾರಿ ಮಾಡ್ತಾ ಇದಾರೆ ಹೀಗಾಗಿ ಬಿಜೆಪಿಗೆ ಯಾವ ಕಾರಣಕ್ಕೂ ವೋಟ್ ಕೊಡಬಾರದು ಎಂದು ಸಿದ್ದರಾಮಯ್ಯ ಹೇಳಿದರು. ಬಿಸಲಲ್ಲಿ ಇಷ್ಟು ಕಾದು ಕುಳಿತ ಕಾಂಗ್ರೆಸ್ ಕಾರ್ಯಕರ್ತರಿಗೆ ಕೋಟಿ ನಮಸ್ಕಾರ ಎಂದು ಮಾತು ಆರಂಭಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಸ್ಕಿ ಜನರ ತೀರ್ಪು ಮತ್ತು ಸ್ವಾಭಿಮಾನವನ್ನು ಸಾಯಿಸಿದ್ದಕ್ಕಾಗಿ ಈಗ ಉಪಚುನಾವಣೆ ಬಂದಿದೆ. ಪ್ರತಾಪಗೌಡಂದು ಯಾವಾಗಲೂ ಕಾಟ ಇದ್ದಿದ್ದೆ. ಗೆದ್ದ ಕೂಡಲೇ ಬಾಂಬೆಗೆ ಹೋಗಿ ವ್ಯಾಪಾರ ಆದ್ರೂ ಅದರ ಫಲವೇ ಈಗ ಚುನಾವಣೆ.
ಜನರ ನಂಬಿಗೆಕೆ ಮೋಸ ಮಾಡಿದ ಪ್ರತಾಪಗೌಡ ಪಾಟೀಲ್‌ಗೆ ಬುದ್ಧಿ ಕಲಿಸಬೇಕು. ಕಾಂಗ್ರೆಸ್ ಅಭ್ಯರ್ಥಿ ಆರ್. ಬಸನಗೌಡ ತುರುವಿಹಾಳ ಬಸವಣ್ಣನ ತತ್ವ ಅನುಸರಿಸಿಕೊಂಡಿದ್ಧಾರೆ. ಇಡೀ ಕ್ಷೇತ್ರದ ಜನರ ಮನಸ್ಸು ಗೆದ್ದಿದ್ದಾರೆ. ಇಲ್ಲಿನ ಜನರು ಕೂಡ ಒಳ್ಳೆಯವರಿದ್ದು ಈ ಕ್ಷೇತ್ರ ಸಾಮಾನ್ಯ ಕ್ಷೇತ್ರವಾದರೆ ನಾನು ಮುಂದೊಂದು ದಿನ ಇಲ್ಲಿಯೇ ಸ್ಪರ್ಧೆ ಮಾಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ದ್ರುವನಾರಾಯಣ, ವಿಧಾನ ಪರಿಷತ್ ಸದಸ್ಯ ಎನ್.ಎಸ್.ಭೋಸರಾಜು, ಶಾಸಕ ಅಮರೇಗೌಡ ಪಾಟೀಲ್ ಬಯ್ನಾಪುರ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಕೆ.ಕರಿಯಪ್ಪ ಮಾತನಾಡಿದರು. ಶಾಸಕರಾದ ಬಸನಗೌಡ ದದ್ದಲ, ಡಿ.ಎಸ್.ಹೂಲಗೇರಿ, ಮುಖಂಡರಾದ ಬಸನಗೌಡ ಬಾದರ್ಲಿ, ಮಲ್ಲಿಕಾರ್ಜುನ ಯದ್ದಲದಿನ್ನಿ, ಹನುಮಂತಪ್ಪ ಮುದ್ದಾಪೂರ ಸೇರಿ ಇದ್ದರು.