ಬೆಂಗಳೂರು : ಚಾಮರಾಜನಗರದಲ್ಲಿ 28 ಜನ ಸತ್ತಿದ್ದಾರೆ. ಆದ್ರೆ 3 ಜನ ಸತ್ತಿದ್ದಾರೆ ಎಂದು ಸುಧಾಕರ್ ಹೇಳುತ್ತಿರುವುದು ಶುದ್ದ ಸುಳ್ಳು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ನಿನ್ನೆ ನಾನು ಚಾಮರಾಜನಗರಕ್ಕೆ ಭೇಟಿ ನೀಡಿದಾಗ ಆಸ್ಪತ್ರೆ ಡೀನ್ ಮತ್ತು ಜಿಲ್ಲಾಧಿಕಾರಿ ಆಕ್ಸಿಜನ್ ಕೊರತೆ ಬಗ್ಗೆ ಒಪ್ಪಿಕೊಂಡಿದ್ದಾರೆ. ಹೀಗಾಗಿ 3 ಮಂದಿಯಲ್ಲ 28 ಮಂದಿ ಮೃತರಾಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಚಾಮರಾಜನಗರ ಆಸ್ಪತ್ರೆಯಲ್ಲಿ 350 ಆಕ್ಸಿಜನ್ ಬೇಕಿತ್ತು. ಆದರೆ ಕೇವಲ 150 ಸಿಲೆಂಡರ್ ಸಪ್ಲೈ ಆಗಿತ್ತು. ಭಾನುವಾರ ಮಧ್ಯಾಹ್ನ ಕೊರತೆಯಾಗಿ ದುರ್ಘಟನೆ ನಡೆದಿದೆ ಎಂದರು.
ಇನ್ನು ಕೂಡಲೇ ಚಾಮರಾಜನಗರ ಜಿಲ್ಲೆಗೆ ಅಗತ್ಯ ಇರುವ ಆಕ್ಸಿಜನ್ ಒದಗಿಸಲು ಸೂಚಿಸಿದ್ದೇನೆ. ಕೊರತೆ ಆಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಅಂತಾ ಹೇಳಿದ್ದೇನೆ. ಚಾಮರಾಜ ನಗರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ಮಾಡಲು ನಾನು ಒತ್ತಾಯಿಸಿದ್ದೇನೆ. ನ್ಯಾಯಾಂಗ ತನಿಖೆಗೆ ಸರ್ಕಾರ ಒಪ್ಪಿದೆ. ತನಿಖೆಯಿಂದ ಸತ್ಯ ಹೊರಬರುತ್ತೆ ಅಂತಾ ಆಶಾಭಾವನೆ ಇದೆ. ಸತ್ಯ ಹೊರ ಬಂದ ಬಳಿಕ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದರು.
ತೇಜಸ್ವಿ ಸೂರ್ಯ ಬೆಡ್ ಬ್ಲಾಕಿಂಗ್ ಬಗ್ಗೆ ಹೇಳಿದ್ದಾರೆ. ಇಟ್ಸ್ ಗುಡ್. ಒಳ್ಳೆಯದನ್ನೇ ಮಾಡಿದ್ದಾರೆ. ಆದರೆ ರಾಷ್ಟ್ರೀಯ ಯುವ ಮೋರ್ಚ ಅಧ್ಯಕ್ಷರಾಗಿ ಅಷ್ಟಕ್ಕೆ ಸೀಮಿತವಾಗಬಾರದು. ಸೂರ್ಯ ಮುಂದಾಳತ್ವ ವಹಿಸಿ ರಾಜ್ಯದ ಸಂಸದ ನಿಯೋಗ ಪ್ರಧಾನಿ ಬಳಿ ಕೊಂಡೋಯ್ದು, ಆಕ್ಸಿಜನ್ ಬೇಡಿಕೆ ನೀಡಬೇಕು ಎಂದರು.