ಬೀದರ್: ಪ್ರಜ್ವಲ್ ರೇವಣ್ಣನವರ ಎಲ್ಲ ಎಪಿಸೋಡ್‌ಗಳನ್ನು ನೋಡಿದ್ದರೆ ಸಿಎಂ ಸಿದ್ದರಾಮಯ್ಯನವರೇ ಆತನನ್ನು ವಿದೇಶಕ್ಕೆ ಕಳುಹಿಸಿದ್ದಾರೆ ಎಂದೆನಿಸುತ್ತದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ, ರೇವಣ್ಣ ಆಪ್ತರೇ ಸಂತ್ರಸ್ತ ಮಹಿಳೆಯನ್ನು ಎಸ್ಕೇಪ್ ಮಾಡಿದ್ದಾರೆಂಬ ಸಿಎಂ ಹೇಳಿಕೆಗೆ ತಿರುಗೇಟು ನೀಡಿದರು. ಪೊಲೀಸ್ ಮತ್ತು ಗುಪ್ತಚರ ಇಲಾಖೆ ರಾಜ್ಯ ಸರ್ಕಾರದ ಕೈಯಲ್ಲೇ ಇದೆ. ಹಾಸನದಲ್ಲಿ ವೋಟು ಹಾಕಿ 300 ಕಿ.ಮೀ ದೂರದ ವಾಯು ನಿಲ್ದಾಣದವರೆಗೆ ಹೇಗೆ ಹೋದರು? ಅವರನ್ನು ಬಿಟ್ಟವರು ಯಾರು ಎಂದು ಪ್ರಶ್ನಿಸಿದರು.
ಪ್ರಜ್ವಲ್ ತಪ್ಪು ಮಾಡಿದ್ದಾನೆ ಎಂದಾದರೆ ಆತನನ್ನು ಯಾಕೆ ಬಂಧಿಸಲಿಲ್ಲ, ಪೆನ್ ಡ್ರೈವ್ ಆಚೆ ಬಂದು 15 ದಿನ ಕಳೆದರೂ ಯಾಕೆ ಪ್ರಕರಣ ದಾಖಲಿಸಿಲ್ಲ. ಪೊಲೀಸ್ ಮತ್ತು ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು, ಅವರಿಗೆ ಜ್ಞಾನ ಇರಲಿಲ್ಲವೇ ಎಂದು ಪ್ರಶ್ನಿಸಿದ ಅಶೋಕ್, ಇದು ಮಾಜಿ ಪ್ರಧಾನಿ ದೇವೇಗೌಡರಿಗೆ ಅವಮಾನ ಮಾಡಬೇಕೆಂಬ ಯೋಜನೆಯಾಗಿದೆ ಎಂದು ಹೇಳಿದರು.
ಅತ್ಯಾಚಾರಿಗಳನ್ನು ವಿದೇಶಕ್ಕೆ ಪರಾರಿ ಮಾಡುವುದೇ ಮೋದಿ ಗ್ಯಾರಂಟಿ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಪ್ರಕ್ರಿಯಿಸಿದ ಅಶೋಕ, ಸಿದ್ದರಾಮಯ್ಯ ಅವರ ಮೊಬೈಲ್ ಟ್ರ್ಯಾಕ್ ಮಾಡಿದರೆ ಪ್ರಜ್ವಲ್‌ನನ್ನು ವಿದೇಶಕ್ಕೆ ಹೋಗಲು ಯಾರು ಸಹಕರಿಸಿದ್ದರು ಎಂಬುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಬಿಟ್ಟವರು ಸಿಎಂ, ಕೇಳುವುದು ಪ್ರಧಾನಿಯನ್ನು ಎಂದು ಕಿಡಿಕಾರದ ಅಶೋಕ್, ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ, ಗುಪ್ತಚರ ಸತ್ತು ಹೋಗಿದೆಯಾ ಎಂದು ಆಕ್ರೋಶ ವ್ಕಕ್ತಪಡಿಸಿದರು.
ಪ್ರಜ್ವಲ್ ಪ್ರಕರಣ ಹೊರಬಿದ್ದ ಮೇಲೆ ಮೋದಿ ಕಾರ್ಯಕ್ರಮ ರದ್ದು ಎಂಬ ರಾಹುಲ್ ಹೇಳಿಕೆಗೆ ಉತ್ತರಿಸಿದ ಅಶೋಕ್, ಮೋದಿಯವರ ಕಾರ್ಯಕ್ರಮ ಜಾಸ್ತಿ ಆಗಿವೆ. ಅಮಿತ್ ಶಾ ಬಂದು ಹೋಗಿದ್ದಾರೆ. ಪ್ರಜ್ವಲ್ ನನ್ನು ಬಂಧಿಸಬೇಕಾಗಿರೋದು ಸಿದ್ದರಾಮಯ್ಯ ಸರ್ಕಾರವೇ ಹೊರತು ಮೋದಿ ಸರ್ಕಾರವಲ್ಲ ಎಂದರು.
ನೇಹಾ ಹಿರೇಮಠ ಹತ್ಯೆ ಲವ್ ಜಿಹಾದ್ ಪ್ರಕರಣವಾಗಿದ್ದು, ಕಾಂಗ್ರೆಸ್ ಸರ್ಕಾರ ಇದನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ. ಸಿಐಡಿ ತನಿಖೆ ಸರಿ ಇರದಿದ್ದರೆ ಸಿಬಿಐಗೆ ಕೊಡುವಂತೆ ಅಮಿತ್ ಶಾ ಹೇಳಿದ್ದಾರೆ. ಪ್ರಕರಣವನ್ನು ಸಿಬಿಐಗೆ ಕೊಟ್ಟರೆ ಸತ್ಯಾಂಶ ಹೊರಗೆ ಬರಲಿದೆ ಎಂದು ಅಶೋಕ್ ಹೇಳಿದರು.