ವಿಜಯಪುರ : ಮೇಕೆದಾಟು ವಿಷಯದಲ್ಲಿ ಡಿ.ಕೆ.ಶಿವಕುಮಾರ್ ಪಾದಯಾತ್ರೆ ಮೂಲಕ ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡುತ್ತಿದ್ದಾರೆ. ರಾಜಕೀಯ ಅಂಧಕಾರದಲ್ಲಿರುವ ಸಿದ್ದರಾಮಯ್ಯ ಕಾಂಗ್ರೆಸ್ ತೊರೆದು ಬಿಜೆಪಿ ಬಾಗಿಲು ಬಡಿದರೂ ಅಚ್ಚರಿ ಇಲ್ಲ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಪಾದಯಾತ್ರೆ ನಡೆಸಿದ್ದು ಜನಹಿತಕ್ಕಾಗಿ ಅಲ್ಲ. ಬದಲಾಗಿ ರಾಜಕೀಯ ಪ್ರತಿಷ್ಠೆಗಾಗಿ, ಇದೇ ವಿಷಯದಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಮಧ್ಯೆ ಸಂಘರ್ಷ ಆರಂಭಗೊಂಡಿದೆ ಎಂದರು.
ಬಿಜೆಪಿ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಶಿವಕುಮಾರ್, ಸಿದ್ದರಾಮಯ್ಯ ಹೇಳಿರುವುದು ಹಸಿ ಸುಳ್ಳು. ಬದಲಾಗಿ ಸಿದ್ದರಾಮಯ್ಯ ಅವರಿಗೆ ಕ್ರೆಡಿಟ್ ಹೋಗುತ್ತದೆಂದು ಮೇಕೆದಾಟು ಪಾದಯಾತ್ರೆ ಅರ್ಧಕ್ಕೆ ನಿಲ್ಲಿಸಿದ್ದು, ಅವರ ಮಧ್ಯದಲ್ಲೇ ರಾಜಕೀಯ ಸಂಘರ್ಷ ಆರಂಭಗೊಂಡಿದೆ. ಇದರಿಂದ ರಾಜಕೀಯವಾಗಿ ಸಂಕಷ್ಟ ಎದುರಿಸುತ್ತಿರುವ ಸಿದ್ದರಾಮಯ್ಯ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರೂ ಅಚ್ಚರಿ ಇಲ್ಲ ಎಂದರು.
ಇದನ್ನೂ ಓದಿ:ಕಾಂಗ್ರೆಸ್ ನ ಬೀದಿ ಜಗಳ ಬಯಲಿಗೆ ಬಂದಿದೆ: ಸಚಿವ ಆರ್ ಅಶೋಕ್ ಟೀಕೆ
ವಿಜಯಪುರ ನಗರದ ಅಭಿವೃದ್ಧಿ ಕಾರ್ಯಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ 50 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದಾರೆ. ಇನ್ನೂ 200 ಕೋಟಿ ರೂ. ಅನುದಾನ ನೀಡುವ ಭರವಸೆ ನೀಡಿದ್ದು ನಗರದಲ್ಲಿ ಅಭಿವೃದ್ಧಿ ಕಾರ್ಯಗಳಾಗಲಿವೆ ಎಂದರು.
ವಿಜಯಪುರ ನಗರ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿಯ ಪಟ್ಟಿಯಲ್ಲಿ ಇರಬೇಕಾಗಿತ್ತು. ಆದರೆ ದುರದೃಷ್ಟವಶಾತ್ ಅಂಥ ಅವಕಾಶ ಪಡೆಯುವಲ್ಲಿ ವಿಫಲವಾಗಿದ್ದೇವೆ ಎಂದು ಪರೋಕ್ಷವಾಗಿ ಸ್ವಪಕ್ಷೀಯ ವಿಜಯಪುರ ಸಂಸದ ರಮೇಶ ಜಿಗಜಿಣಗಿ ವಿರುದ್ದವೂ ವಾಗ್ದಾಳಿ ನಡೆಸಿದರು.