ಅರಸೀಕೆರೆ: ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕನಸು ಕಾಣುತ್ತಿದ್ದರೇ, ರಾಜ್ಯದಲ್ಲಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಸಂಪೂರ್ಣ ಯಶಸು ಸಾಧಿಸಿದ್ದು, ನುಡಿದಂತೆ ನಡೆದಿದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಮೋದಿ ಅವರು ದೇಶದ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ಜನರಿಗೆ ಕನಸ್ಸುಗಳನ್ನು ಬಿತ್ತುತ್ತಿದ್ದಾರೆ. ಹೊರತು ಇದುವರೆಗೂ ಯಾವುದನ್ನು ನನಸು ಮಾಡುವ ದಾರಿಯಲ್ಲಿ ಮುಂದೆ ಸಾಗಿಲ್ಲದೆ. ಸುಳ್ಳು ಆಶ್ವಾಸನೆಗಳನ್ನು ನೀಡಿ ದೇಶದ ಜನರ ದಾರಿ ತಪ್ಪಿಸುವ ವಿಫಲ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣೆ ಪೂರ್ವ ಜನರಿಗೆ ನೀಡಿದ್ದ ಭರವಸೆಗಳನ್ನೂ ಈಡೇರಿಸಿ ಜನತೆಯ ಆಶೋತ್ತರಕ್ಕೆ ಸ್ಪಂದಿಸುವ ಮೂಲಕ ನುಡಿದಂತೆ ನಡೆದ ಏಕೈಕ ಸರ್ಕಾರ ಎಂಬ ಕೀರ್ತಿಗೆ ಪಾತ್ರವಾಗಿದೆ ಎಂದು ಹೇಳಿದರು. ಸಹೋದರ ಸಚಿವ ಡಿ.ಕೆ.ಶಿವಕುಮಾರ್ ಮೇಲೆ ನಡೆದಿರುವ ಐಟಿ ದಾಳಿ ರಾಜಕೀಯ ಪ್ರೇರಿತವಾಗಿದ್ದು, ಸೂಕ್ತ ದಾಖಲಾತಿಗಳೊಂದಿಗೆ ಕಾನೂನಾತ್ಮಕ ಹೋರಾಟವನ್ನು ನಡೆಸಲು ಸಮರ್ಥವಾಗಿದ್ದೇವೆಯೇ ಹೊರತು ಯಾವುದಕ್ಕೂ ಅಂಜುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕಳೆದ ಮೂರು ದಶಕಗಳಿಂದ ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅನೇಕ ರೀತಿ ತೊಂದರೆ ಅನುಭವಿಸಿದ್ದಾರೆ. ಕಾಂಗ್ರೆಸ್‌ಗೆ ಪಕ್ಷದವರೇ ಸಮಸ್ಯೆಯಾಗಿ ಕಾಡಿದ್ದಾರೆ ಎಂಬ ಅಪವಾದಗಳಿಂದ ಪಕ್ಷವನ್ನು ಮುಕ್ತಗೊಳಿಸಿ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಅತ್ಯಂತ ಬಹುಮತಗಳ ಅಂತರದಿಂದ ಗೆಲ್ಲಿಸುವ ಸಂಕಲ್ಪವನ್ನು ನಾವುಗಳು ಕೈಗೊಂಡು ಮುಂದಿನ ವಿಧಾನಸಬಾ ಚುನಾವಣೆಗೆ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪ್ರತಿಯೊಂದು ಬೂತ್ ಮಟ್ಟದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಅಭಿಪ್ರಾಯಗಳ ಸಂಗ್ರಹಣೆ ಜೊತೆಗೆ ಚುನಾವಣೆಯಲ್ಲಿ ಸ್ಪರ್ಧೆ ಬಯಸುವ ಆಕಾಂಕ್ಷಿಗಳಿಂದ ಅರ್ಜಿಗಳನ್ನು ಪಡೆದು ಮಾಹಿತಿ ಸಂಗ್ರಹಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಪಕ್ಷದಲ್ಲಿ ಸಮನ್ವಯದ ಕೊರತೆ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಸಂದರ್ಭದಲ್ಲಿ ನ್ಪೋಟಗೊಂಡ ಭಿನ್ನಮತ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸುರೇಶ್, ಪಕ್ಷದಲ್ಲಿ ಭಿನ್ನಮತ ಎನ್ನುವುದು ಇಲ್ಲ, ಕಾರ್ಯಕರ್ತರ ಸಂಪರ್ಕ ಹಾಗೂ ಸಮನ್ವಯದ ಕೊರತೆಯಿಂದ ಸಣ್ಣಪುಟ್ಟ ಸಮಸ್ಯೆಗಳು ಉಂಟಾಗುತ್ತಿವೆ ಎನ್ನುವುದು ತಮ್ಮ ಗಮನಕ್ಕೂ ಈಗಾಗಲೇ ಬಂದಿದೆ. ಚುನಾವಣೆ ದೃಷ್ಟಿಯಿಂದ ಒಳ್ಳೆಯ ಬೆಳೆವಣಿಗೆಯಲ್ಲ, ಜಿಲ್ಲಾಧ್ಯಕ್ಷರ ಸೂಚನೆ ಮೇರೆಗೆ ಜಿಲ್ಲೆಯ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಕಾರ್ಯಕ್ರಮ ರೂಪಿಸಿಕೊಂಡು ಯಾವುದೇ ರೀತಿಯಲ್ಲಿ ಗೊಂದಲ ಉಂಟಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ ಎಂದರು.
ಮಾಜಿ ವಿಧಾನ ಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ, ಅರಸೀಕೆರೆ ಕ್ಷೇತ್ರದ ಚುನಾವಣಾ ವೀಕ್ಷಕ ಜೇಸುದಾಸ್, ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್, ಶಿವಮೊಗ್ಗ ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಸಿ.ಶ್ರೀನಿವಾಸ್ ಹಾಗೂ ಮೆಟ್ರೋ ಬಾಬು ಹಾಗೂ ಇನ್ನಿತರ ಮುಖಂಡರು ಹಾಜರಿದ್ದರು.