Advertisement

BJP: ರಾಜ್ಯ ಬಿಜೆಪಿ ನಾಯಕರಿಗೆ ಸವಾಲೆಸೆದ ಸಿದ್ದರಾಮಯ್ಯ

11:00 PM Dec 14, 2023 | Team Udayavani |

ಬೆಳಗಾವಿ: ಶೋಷಿತ ವರ್ಗಗಳ ಬಗ್ಗೆ ಬಿಜೆಪಿಗೆ ನಿಜವಾಗಿಯೂ ಕಾಳಜಿ ಇದ್ದರೆ, ಮಹತ್ವಾ ಕಾಂಕ್ಷಿ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆ ಕಾಯ್ದೆ (ಎಸ್‌ಸಿಎಸ್‌ಪಿ-ಟಿಎಸ್‌ಪಿ) ಜಾರಿಗೊಳಿಸಲು ಕೇಂದ್ರದ ಮೇಲೆ ಬಿಜೆಪಿ ರಾಜ್ಯ ನಾಯಕರು ಒತ್ತಡ ಹಾಕಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.

Advertisement

ಮೇಲ್ಮನೆಯಲ್ಲಿ ಗುರುವಾರ ಪೂರಕ ಅಂದಾಜಿನ ಮೇಲಿನ ಚರ್ಚೆ ವೇಳೆ ವಿಪಕ್ಷಗಳಿಗೆ ತಿರುಗೇಟು ನೀಡಿದ ಅವರು, ದೇಶದಲ್ಲಿ ತಮಿಳುನಾಡು ಹೊರತುಪಡಿಸಿದರೆ ಎಸ್‌ಸಿಎಸ್‌ಪಿ-ಟಿಎಸ್‌ಪಿ ಕಾಯ್ದೆ ತಂದ ಏಕೈಕ ರಾಜ್ಯ ಕರ್ನಾಟಕ. ಈ ಕಾಯ್ದೆ ತಂದಿದ್ದು 2013ರ ಇದೇ ಬೆಳಗಾವಿ ಅಧಿವೇಶನದಲ್ಲಿ, ಇದೇ ಕಾಂಗ್ರೆಸ್‌ ಮತ್ತು ಇದೇ ಸಿದ್ದರಾಮಯ್ಯ. ಇದರಿಂದ ದಲಿತರ ಅಭಿವೃದ್ಧಿಗೆ ನೀಡುವ ಅನುದಾನ ಪ್ರಮಾಣ ನಾಲ್ಕೂವರೆ ಪಟ್ಟು ಹೆಚ್ಚಳ ಆಗಿದೆ. ಇದು ಅವಕಾಶ ವಂಚಿತ ಸಮುದಾಯಗಳ ಬಗ್ಗೆ ನಮ್ಮ ಬದ್ಧತೆಗೆ ಸಾಕ್ಷಿ. ನಿಮಗೂ (ಬಿಜೆಪಿಗೆ) ಬದ್ಧತೆ ಇದ್ದರೆ, ಉದ್ದೇಶಿತ ಕಾಯ್ದೆ ಜಾರಿಗೆ ಕೇಂದ್ರದ ಮೇಲೆ ಒತ್ತಡ ಹಾಕಿ ನೋಡೋಣ ಎಂದು ಸವಾಲು ಹಾಕಿದರು.

ದಲಿತ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಲಾಗಿದೆ ಎಂದು ಆರೋಪಿಸುತ್ತಿರುವ ಬಿಜೆಪಿ, ಕಳೆದ 9 ವರ್ಷಗಳಿಂದ ಯಾಕೆ ಮೌನವಾಗಿದೆ? ಎಸ್‌ಸಿಎಸ್‌ಪಿ-ಟಿಎಸ್‌ಪಿ ಕಾಯ್ದೆ ತರುವಂತೆ ಕೇಂದ್ರದ ಮೇಲೆ ಯಾಕೆ ಒತ್ತಡ ಹಾಕುತ್ತಿಲ್ಲ? 2008-2013ರ ವರೆಗೆ ಪ. ಜಾತಿ, ಪಂಗಡಕ್ಕೆ ನೀಡಿದ ಅನುದಾನ 22 ಸಾವಿರ ಕೋಟಿ ರೂ. 2013-2018ರ ವರೆಗೆ ಅದೇ ಸಮುದಾಯಕ್ಕೆ 82 ಸಾವಿರ ಕೋಟಿ ರೂ. ನೀಡಲಾಯಿತು. 2018ರ ಬಳಿಕ ಬಂದ ಸರಕಾರವು ಆ ಅನುದಾನವನ್ನು 30 ಸಾವಿರ ಕೋ. ರೂ.ಗೆ ಇಳಿಸಿದ್ದು ಯಾಕೆ ಎಂದು ತರಾಟೆಗೆ ತೆಗೆದುಕೊಂಡರು.

ಮತ್ತೆ ಕೋಲಾಹಲ
ಇದಕ್ಕೂ ಮುನ್ನ ಪ.ಜಾತಿ/ಪಂಗಡಗಳಿಗೆ ಮೀಸಲಿಟ್ಟ ಹಣವನ್ನು ಸರಕಾರ ಗ್ಯಾರಂಟಿ ಯೋಜನೆಗಳಿಗಾಗಿ ಬಳಕೆ ಆರೋಪ ಮೇಲ್ಮನೆಯಲ್ಲಿ ಕೋಲಾಹಲ ಸೃಷ್ಟಿಸಿತು. ಪೂರಕ ಅಂದಾಜಿನ ಮೇಲಿನ ಚರ್ಚೆ ವೇಳೆ ವಿಷಯ ಪ್ರಸ್ತಾಪಿಸಿದ ವಿಪಕ್ಷಗಳ ಸದಸ್ಯರು, ಸುಮಾರು 11 ಸಾವಿರ ಕೋಟಿ ರೂ. ಮೊತ್ತವನ್ನು ಗ್ಯಾರಂಟಿಗಾಗಿ ಬಳಸಿಕೊಳ್ಳಲಾಗಿದೆ. ಇದರಿಂದ ಶೋಷಿತ ಸಮುದಾಯಕ್ಕೆ ಅನ್ಯಾಯ
ವಾಗಿದೆ. ಡಾ| ಅಂಬೇಡ್ಕರ್‌ ಅಭಿವೃದ್ಧಿ ನಿಗಮ ಸಹಿತ ಹಲವು ನಿಗಮಗಳಿಗೆ ಅನುದಾನ ತಡೆಹಿಡಿಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸಚಿವ ಎಚ್‌.ಸಿ.ಮಹದೇವಪ್ಪ ಮಧ್ಯಪ್ರವೇಶಿಸಿ, 2019-22ರ ಅವಧಿಯಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆಯ ಸೆಕ್ಷನ್‌ 7 (ಡಿ) ಕೆಳಗೆ ಸುಮಾರು 10 ಸಾವಿರ ಕೋಟಿ ರೂ. ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳಲಾಗಿದೆ. ಇದು ಪುನರಾವರ್ತನೆ ಆಗದಿರಲು ನಮ್ಮ ಸರಕಾರ ಆ ಸೆಕ್ಷನ್‌ 7 (ಡಿ) ಅನ್ನು ತೆಗೆದುಹಾಕಿದೆ ಎಂದು ಸಮಜಾಯಿಷಿ ನೀಡಲು ಮುಂದಾದರು. ಆಗ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ಸೆಕ್ಷನ್‌ 7 (ಡಿ) (ಮೀಸಲಿಟ್ಟ ಹಣದಲ್ಲಿ ವಿಭಜಿಸಲಾಗದ ಪ್ರಕರಣಗಳಲ್ಲಿ ಆಗುವ ವೆಚ್ಚದ ಒಂದು ಭಾಗವನ್ನು ಪ.ಜಾತಿ ಮತ್ತು ಪಂಗಡಕ್ಕೆ ತಲುಪಿದೆ ಎಂದು ಭಾವಿಸತಕ್ಕದ್ದು) ತಂದವರು ಯಾರು ಎಂದು ಪ್ರಶ್ನಿಸಿದರು. ಇದಕ್ಕೆ ಬಿಜೆಪಿಯ ಉಳಿದ ಸದಸ್ಯರು ದನಿಗೂಡಿಸಿದರು. ಆಗ ಗದ್ದಲ ಉಂಟಾಯಿತು. ಸಭಾಪತಿ ಹೊರಟ್ಟಿ ಮಧ್ಯಪ್ರವೇಶಿಸಿ ತಿಳಿಗೊಳಿಸಿದರು.

Advertisement

ಪೂರಕ ಅಂದಾಜಿಗೆ ಮೇಲ್ಮನೆ ಅಸ್ತು
ಬೆಳಗಾವಿ: ಪ್ರಸಕ್ತ ಸಾಲಿನ 3,452.10 ಕೋಟಿ ರೂ. ಮೊತ್ತದ ಪೂರಕ ಅಂದಾಜಿಗೆ ಗುರುವಾರ ಮೇಲ್ಮನೆಯಲ್ಲೂ ಅನುಮೋದನೆ ನೀಡಲಾಯಿತು.

ವಿಧಾನಸಭೆಯಲ್ಲಿ ಅಂಗೀಕಾರಗೊಂಡು ಬಂದಿದ್ದ ಈ ಪೂರಕ ಅಂದಾಜನ್ನು ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಒಟ್ಟಾರೆ 3,542.10 ಕೋಟಿ ರೂ. ಮೊತ್ತದಲ್ಲಿ 684.28 ಕೋಟಿ ರೂ. ಕೇಂದ್ರದಿಂದ ಬರಲಿದೆ. 327 ಕೋಟಿ ರೂ. ರಿಸರ್ವ್‌ ಫ‌ಂಡ್‌ಗೆ ಸೇರಿದೆ. ಒಟ್ಟಾರೆ 2,531 ಕೋಟಿ ರೂ. ಮಾತ್ರ ಖರ್ಚು ಮಾಡುವಂಥದ್ದಾಗಿದೆ ಎಂದು ಮಾಹಿತಿ ನೀಡಿದರು.

2023-24ನೇ ಸಾಲಿನಲ್ಲಿ ಅನುಮೋದನೆ ಪಡೆದಿದ್ದ ಬಜೆಟ್‌ ಮೊತ್ತಕ್ಕಿಂತ ಹೆಚ್ಚುವರಿಯಾಗಿ ಖರ್ಚು ಮಾಡಿದ ಮತ್ತು ಮಾಡಬೇಕಾದ 3,542.10 ಕೋಟಿ ರೂ. ಪೂರಕ ಅಂದಾಜು ಇದಾಗಿದೆ. ಇದರಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆ (ಎಸ್‌ಸಿಎಸ್‌ಪಿ-ಟಿಎಸ್‌ಪಿ)ಗೆ 508 ಕೋಟಿ ರೂ. ಸೇರಿ ರಾಜ್ಯ ವಿಪತ್ತು ಪರಿಹಾರ, ಕೃಷಿ ಭಾಗ್ಯ, ತೋಟಗಾರಿಕೆ, ಶಿಕ್ಷಣ, ಮೂಲಸೌಕರ್ಯ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್‌, ಪಶುಸಂಗೋಪನೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗಳಿಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳಿಗೆ ಹೆಚ್ಚುವರಿ ಮೊತ್ತ ನೀಡಲಾಗಿದೆ ಎಂದರು.

ಈ ವೇಳೆ ಮಾತನಾಡಿದ ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ, ಸಚಿವರಿಗೆ ಕಾರು ಖರೀದಿ, ಪ್ರವಾಸ ಮತ್ತಿತರ ಉದ್ದೇಶಗಳಿಗೂ ಪೂರಕ ಅಂದಾಜಿನಲ್ಲಿ ಕೋಟ್ಯಂತರ ರೂ. ನೀಡಲಾಗಿದೆ. ಇಂತಹ ಹಲವು ಅಂಶಗಳನ್ನು ಮುಂದಕ್ಕೆ ಹಾಕಬಹುದಿತ್ತು ಎಂದು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next