ತುಮಕೂರು: ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಅವಿಸ್ಮರಣಿಯ ಸೇವೆ ಸಲ್ಲಿಸಿರುವ ಸಿದ್ಧ ಗಂಗಾ ಶ್ರೀಗಳಾದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ ಸ್ಮರಣಾರ್ಥ ಸರ್ಕಾರದ ವತಿಯಿಂದ ಕಾರ್ಯಕ್ರಮ ರೂಪಿಸಲು ಬರುವ ಆಯ ವ್ಯಯದಲ್ಲಿ ಅನುದಾನ ಮೀಸಲಿಡುವಂತೆ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸ ಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ನಗರದ ಸಿದ್ಧಗಂಗಾ ಮಠಕ್ಕೆ ಶುಕ್ರವಾರ ಭೇಟಿ ನೀಡಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಲಿಂಗೈಕ್ಯರಾಗಿರುವ ಶ್ರೀ ಶಿವಕುಮಾರ ಸ್ವಾಮೀಜಿಯವರ ಅವರ ನೆನಪು ಉಳಿಯಲು ಸರ್ಕಾರದಿಂದ ಯಾವುದಾದರೊಂದು ಕಾರ್ಯ ಕ್ರಮದ ಬಗ್ಗೆ ಘೋಷಣೆ ಮಾಡಲು ಬರುವ ಆಯ ವ್ಯಯದಲ್ಲಿ ಮಂಡಿಸಬೇಕೆಂದು ಮುಖ್ಯಮಂತ್ರಿ ಗಳೊಂದಿಗೆ ಚರ್ಚಿಸಿದ್ದೇನೆ. ಶ್ರೀಗಳ ನೆನಪಿಗಾಗಿ ಸರ್ಕಾರದಿಂದ ಕಾರ್ಯಕ್ರಮ ರೂಪಿಸಲು ಚಿಂತಿಸ ಲಾಗುತ್ತಿದೆ ಎಂದರು.
ಜ್ಯೋತಿಯಾಗಿದ್ದ ಶ್ರೀಗಳು: ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಮಾಡಿರುವ ಶ್ರೀಗಳಂಥವರು ಮತ್ತೂಮ್ಮೆ ಸಾರ್ವಜನಿಕ ಬದುಕಿನಲ್ಲಿ ಹುಟ್ಟಿ ಬರಲು ಸಾಧ್ಯವಿಲ್ಲ. ಅವರ ಕಾಲಘಟ್ಟದಲ್ಲಿ ಬದುಕಿದ್ದೆವು ಎನ್ನುವುದು ನಮ್ಮೆಲ್ಲರ ಭಾಗ್ಯ. ಲಕ್ಷಾಂತರ ಕುಟುಂಬ ಗಳ ಮನೆಯನ್ನು ಬೆಳಗಿದ ಜ್ಯೋತಿಯಾಗಿದ್ದ ಶ್ರೀಗಳು ಭೌತಿಕವಾಗಿ ನಮ್ಮೊಡನೆ ಇರದಿದ್ದರೂ ಅವರ ಸೇವಾ ಕಾರ್ಯಗಳು ಸದಾ ನಮ್ಮ ನೆನಪಿನಲ್ಲಿರುತ್ತದೆ ಎಂದು ನುಡಿದರು.
ಮೆಚ್ಚುಗೆ: ಶ್ರೀಗಳ ಅಂತಿಮ ದರ್ಶನವು ಎಲ್ಲಿಯೂ ಲೋಪವಾಗದಂತೆ ಶಾಂತ ರೀತಿಯಿಂದ ನಡೆಸಲು ವ್ಯವಸ್ಥೆ ಕಲ್ಪಿಸಿದ್ದ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನ ವಂಶಿಕೃಷ್ಣ, ಹಿಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್, ಕೇಂದ್ರ ವಲಯದ ಐಜಿಪಿ ದಯಾನಂದ್ ಸೇರಿದಂತೆ ಎಲ್ಲಾ ಅಧಿಕಾರಿ, ಸಿಬ್ಬಂದಿಗಳ ಕಾರ್ಯದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸರ್ಕಾರದಿಂದ ಪುಣ್ಯ ಸ್ಮರಣೆ: ಶ್ರೀಗಳ ಅಂತಿಮ ದರ್ಶನದಲ್ಲಿ ಪಾಲ್ಗೊಂಡು ಅಂತ್ಯ ಕ್ರಿಯೆಯ ವಿಧಿ ವಿಧಾನಗಳು ಪೂರ್ಣಗೊಳ್ಳುವವರೆಗೆ ಮಠ ದಲ್ಲಿಯೇ ಉಪಸ್ಥಿತರಿದ್ದ ಮುಖ್ಯಮಂತ್ರಿಗಳು, ವಿರೋಧಪಕ್ಷದ ನಾಯಕರು, ಸಚಿವರು, ಗಣ್ಯ ರೆಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಡಿಸಿಎಂ, ಜ.31ರಂದು ನಡೆಯಲಿರುವ ಶ್ರೀಗಳ ಪುಣ್ಯಸ್ಮರಣೆ ಸಮಾರಂಭದ ನುಡಿನಮನದಲ್ಲಿ ಮುಖ್ಯಮಂತ್ರಿ ಸೇರಿದಂತೆ ಸಚಿವರು, ಗಣ್ಯರು ಭಾಗವಹಿಸಲಿದ್ದು, ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಸರ್ಕಾರದಿಂದಲೇ ನಡೆಸುವ ಬಗ್ಗೆ ಕಾರ್ಯಕ್ರಮ ರೂಪಿಸಬೇಕೆಂದು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಕ್ಷಮೆ ಕೇಳಿದ್ದಾರೆ: ಕಾಯಕವೇ ಕೈಲಾಸ ಎಂಬ ಭಾವನೆ ಯಿಂದ ಕಾರ್ಯಕ್ರಮ ಸಾಂಕೇತಿಕವಾಗಿ ಉದ್ಘಾಟನೆ ಮಾಡಲಾಗಿದೆ. ಸ್ವಾಮೀಜಿಗಳ ಮೇಲೆ ಅವರಿಗೆ ಅಪಾರ ಗೌರವವಿದೆ. ಆದರೂ ತಪ್ಪಾಗಿದ್ದರೆ ಈಗಾ ಗಲೇ ಕ್ಷಮೆ ಕೇಳಿರುವ ಬಗ್ಗೆ ಪ್ರಿಯಾಂಕ್ ಖರ್ಗೆ ತಮ್ಮ ಗಮನಕ್ಕೆ ತಂದಿದ್ದಾರೆ. ಆದರೂ ಬಿಜೆಪಿಯವರು ಈ ವಿಷಯವನ್ನು ರಾಜಕೀಯವಾಗಿ ಬಳಸಿ ಕೊಳ್ಳುತ್ತಿದ್ದಾರೆ ಎಂದು ದೂರಿದರು. ಶ್ರೀಗಳ ಪುತ್ಥಳಿ ಸ್ಥಾಪನೆ ಕುರಿತಂತೆ ಮಠಾಧ್ಯಕ್ಷ ಸಿದ್ಧಲಿಂಗ ಶ್ರೀಗಳೊಂದಿಗೆ ಚರ್ಚಿಸಿದ ನಂತರ ನಿರ್ಣಯ ಕೈಗೊಳ್ಳಲಾಗುವುದೆಂದರು. ಈ ವೇಳೆ ಮಠಕ್ಕೆ ತೆರಳಿ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ನಂತರ ಪುಣ್ಯ ಸ್ಮರಣೆ ಸಮಾರಂಭದ ಬಗ್ಗೆಯೂ ಚರ್ಚಿಸಿದರು.ಈ ಸಂದರ್ಭದಲ್ಲಿ ಸಂಸದ ಎಸ್.ಪಿ. ಮುದ್ದಹನುಮೇಗೌಡ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಉಪವಿಭಾಗಾಧಿಕಾರಿ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.