Advertisement

ಮುಸ್ಲಿಂ ಬಾಲಕನ ಕಿವಿಹಿಂಡಿ ಓದು ಎಂದಿದ್ದರು ಸಿದ್ಧಗಂಗಾ ಶ್ರೀ

10:19 AM Jan 22, 2019 | Team Udayavani |

ಬಳ್ಳಾರಿ: ನಡೆದಾಡುವ ದೇವರೆಂದೇ ಕರೆಯುವ ಶ್ರೀ ಶಿವಕುಮಾರ ಸ್ವಾಮೀಜಿಗಳ ಸಿದ್ಧಗಂಗಾ ಮಠದಲ್ಲಿ ಶಿಕ್ಷಣ ಪಡೆದ ಶಿಷ್ಯವೃಂದದ ಬಳಗ ಬಳ್ಳಾರಿಯಲ್ಲೂ ಇದೆ. ಸ್ವಾಮೀಜಿಗಳಿಂದ ಕಿವಿಹಿಂಡಿಸಿಕೊಂಡಿದ್ದ ಮುಸ್ಲಿಂ ವಿದ್ಯಾರ್ಥಿ ಆಲಂಬಾಷಾ ನಗರದ ಪಶುಸಂಗೋಪನಾ ಇಲಾಖೆ ಕಚೇರಿಯಲ್ಲಿ ಅಧಿಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಠದಲ್ಲಿ ಅವಕಾಶ ದೊರೆಯದಿದ್ದರೂ ಸ್ವಾಮೀಜಿಗಳನ್ನು ಭೇಟಿಯಾಗಿ ಸೀಟ್ ಗಿಟ್ಟಿಸಿಕೊಂಡಿದ್ದ ಅಡ್ಡೇರ್‌ ಮಲ್ಲಪ್ಪ ಇಂದು ಇಲ್ಲಿನ ಡಯಟ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ತ್ರಿವಿಧ ದಾಸೋಹಿಗಳ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ.

Advertisement

ಕಿರಿಯ, ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮ ಡಿ.ಕಗ್ಗಲ್ಲು ಮತ್ತು ಪಕ್ಕದ ದಮ್ಮೂರು ಶಾಲೆಯಲ್ಲಿ ಮುಗಿಸಿ, ಪ್ರೌಢಶಾಲಾ ಶಿಕ್ಷಣ ಪಡೆಯಲು 1997-98ರಲ್ಲಿ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಹೋಗಿದ್ದೆವು. ಹಣೆಗೆ ವಿಭೂತಿ ಧರಿಸಿದ್ದ ನನ್ನನ್ನು ಹತ್ತಿರ ಕರೆದು ಕಿವಿಹಿಂಡಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ನೀನು ಮುಸ್ಲಿಂ ತಾನೇ. ಚೆನ್ನಾಗಿ ಓದಬೇಕು ಎಂದಿದ್ದರು. ಈ ದೃಶ್ಯವನ್ನು ಇತರೆ ವಿದ್ಯಾರ್ಥಿಗಳು ಅಚ್ಚರಿಯಿಂದ ನೋಡಿದ್ದರು. ಸ್ವಾಮೀಜಿಗಳು ಎಲ್ಲ ವಿದ್ಯಾರ್ಥಿಗಳಿಗೆ ಆಶೀರ್ವಾದ ಮಾಡುತ್ತಿದ್ದರು ಹೊರತು, ಯಾರಿಗೂ ಪ್ರತ್ಯೇಕವಾಗಿ ಏನೂ ಹೇಳುತ್ತಿರಲಿಲ್ಲ. ಅಂತಹುದರಲ್ಲಿ ನಿನ್ನನ್ನು ಹತ್ತಿರ ಕರೆದು ಕಿವಿಹಿಂಡಿದ್ದಾರೆ ಎಂದರೆ ನೀವೇ ಅದೃಷ್ಟವಂತ ಎಂದಿದ್ದರು. ಇನ್ನು ಕೆಲ ವಿದ್ಯಾರ್ಥಿಗಳು ನನ್ನನ್ನು ಹತ್ತಿರ ಕರೆದಿಲ್ಲವೆಂದರೆ ನನಗೆ ಮಠದಲ್ಲಿ ಅವಕಾಶ ದೊರೆಯುವುದು ಅನುಮಾನ ಎಂದು ಅಳ್ಳೋಕೆ ಶುರು ಮಾಡಿದ್ದರು ಎಂದು ತಮ್ಮ ವಿದ್ಯಾರ್ಥಿ ದಿನಗಳನ್ನು ಸ್ಮರಿಸಿದರು.

ಶ್ರೀ ಶಿವಕುಮಾರ ಸ್ವಾಮೀಜಿಗೆ ಜಾತಿ, ಮತ ಹಾಗೂ ಪಂಥವಿರಲಿಲ್ಲ. ಎಲ್ಲ ಧರ್ಮದ ಮಕ್ಕಳನ್ನೂ ಪ್ರೀತಿ ಪೂರ್ವಕವಾಗಿ ನೋಡಿಕೊಳ್ಳುತ್ತಿದ್ದರು. ಅಂತಹ ದಿವ್ಯಚೇತನದ ಅಗಲಿಕೆಯಿಂದ ರಾಜ್ಯಕ್ಕೆ ಮಾತ್ರವಲ್ಲ ದೇಶಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಭಾವುಕರಾದರು.

ನಾನು 8, 9 ಹಾಗೂ 10 ತರಗತಿಯನ್ನು ತುಮಕೂರಿನ ಸಿದ್ಧಗಂಗಾ ಮಠದಲ್ಲೇ ಪೂರೈಸಿರುವೆ. ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದದಿಂದ ಇದೀಗ ಪಶು ಸಂಗೋಪನೆ ಇಲಾಖೆಯಲ್ಲಿ ಅಧೀಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿರುವೆ ಎಂದು ನೆನಪಿಸಿಕೊಂಡರು.

ಮನೆಯಲ್ಲಿ ಕಿತ್ತು ತಿನ್ನುವ ಬಡತನವಿತ್ತು. ಜಿಲ್ಲೆಯ ದಮ್ಮೂರು, ಕಗ್ಗಲ್‌ ಗ್ರಾಮದಲ್ಲಿ ಪ್ರೌಢಶಿಕ್ಷಣಕ್ಕೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ಆಗ ನನಗೂ, ನನ್ನ ಸ್ನೇಹಿತರಿಗೆ ಥಟ್ಟನೆ ನೆನಪಾಗಿದ್ದು, ಸಿದ್ಧಗಂಗಾ ಮಠ. ಮಠಕ್ಕೆ ಹೋಗುತ್ತಿದ್ದಂತೆಯೇ ಪ್ರವೇಶಾತಿ ಮುಕ್ತಾಯವಾಯಿತು. ನಮ್ಮನ್ನು ಕರೆದೊಯ್ದಿದಿದ್ದ ಮುಖಂಡರು ಶಿವಕುಮಾರ ಸ್ವಾಮೀಜಿಯವರನ್ನು ಭೇಟಿಯಾಗಿದ್ದರು. ಆಗ ನೇರವಾಗಿ ನಮ್ಮನೆಲ್ಲಾ ಸ್ವಾಮೀಜಿಯವರು ತಮ್ಮ ಕಚೇರಿಗೆ ಕರೆಯಿಸಿಕೊಂಡು ಶಾಲೆಯ ಮುಖ್ಯಶಿಕ್ಷಕರಿಗೆ ಪ್ರವೇಶಾತಿ ನೀಡುವಂತೆ ಸೂಚನೆ ನೀಡಿದ್ದರು. ಅಂತಹ ಉದಾತ್ತ ಮನೋಭಾವವುಳ್ಳ ಸ್ವಾಮೀಜಿ ಅವರ ವಿಶೇಷ ಕಾಳಜಿಯೇ ಈ ದಿನ ನನ್ನನ್ನು ಉನ್ನತ ಮಟ್ಟಕ್ಕೆ ಏರಲು ಸಹಕಾರಿಯಾಯಿತು ಎನ್ನುತ್ತಾರೆ ಅವರು.

Advertisement

ಗ್ರಾಮದಿಂದ ಒಟ್ಟು 9 ಜನ ವಿದ್ಯಾರ್ಥಿಗಳು ಸಿದ್ಧಗಂಗಾ ಮಠಕ್ಕೆ ಸೇರಲು ಬಂದಾಗ ಯಾರಿಗೂ ಸೀಟ್ ದೊರೆತಿರಲಿಲ್ಲ. ಬಳಿಕ ದೊಡ್ಡಬುದ್ದಿ (ಶ್ರೀ ಶಿವಕುಮಾರ ಸ್ವಾಮೀಜಿ) ಅವರನ್ನು ಕಂಡು ಮನವಿ ಮಾಡಿಕೊಂಡಾಗ ವಿದ್ಯಾಭ್ಯಾಸಕ್ಕೆ ಅವಕಾಶ ದೊರೆಯಿತು. ಅದರಲ್ಲೂ, ಎಲ್ಲರಿಗೂ ಮಠದಿಂದ ಒಂದು ಕಿಮೀ ದೂರದಲ್ಲಿದ್ದ ನಿವೇದಿತಾ ಶಾಲೆಯಲ್ಲಿ ಅವಕಾಶ ಸಿಕ್ಕರೆ, ನನಗೆ ಮಾತ್ರ ಅಷ್ಟು ದೂರ ನಡೆಯಲಾಗಲ್ಲ ಎಂದು ಮಠದ ಆವರಣದಲ್ಲೇ ಇದ್ದ ಶಾಲೆಯಲ್ಲಿ ವ್ಯಾಸಂಗಕ್ಕೆ ಅವಕಾಶ ಮಾಡಿಕೊಟ್ಟಿದ್ದರು ಎಂದು ಸ್ವಾಮೀಜಿಗಳು ಅಂದು ನೀಡಿದ್ದ ಸಹಕಾರವನ್ನು ಉಪನ್ಯಾಸಕ ಅಡ್ಡೇರ ಮಲ್ಲಪ್ಪ ಸ್ಮರಿಸಿದರು.

ಸ್ವಾಮೀಜಿಗಳೇ ಪ್ರಸಾದ ನೀಡುತ್ತಿದ್ದರು: ಮಠದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಆಗಾಗ ಹೊಲಕ್ಕೆ ಕರೆದೊಯ್ದು ಕೆಲಸ ಮಾಡಿಸಲಾಗುತ್ತಿತ್ತು. ಕೆಲಸ ಮಾಡಿದ ವಿದ್ಯಾರ್ಥಿಗಳಿಗೆ ದೊಡ್ಡಬುದ್ದಿ (ಸ್ವಾಮೀಜಿಗಳು) ಅವರೇ ಸ್ವತಃ ಮಂಡಕ್ಕಿ, ಬೆಲ್ಲವನ್ನು ನೀಡುತ್ತಿದ್ದರು. ಇನ್ನು ಸ್ವಾಮೀಜಿಗಳ ಜನ್ಮದಿನವೆಂದರೆ ಇಡೀ ಮಠದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತಿತ್ತು. ಅಂದು ಇಡೀ ಮಠದಲ್ಲಿ 10 ರಿಂದ 15 ಕಡೆ ದಾಸೋಹ ನಡೆಯುತ್ತಿತ್ತು.

ಭೂಮಿಪೂಜೆ ನೆರವೇರಿಸಿದ್ದ ಶ್ರೀಗಳು

ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳು ಕಳೆದ 2010ರಲ್ಲಿ ಒಮ್ಮೆ ಗಣಿನಗರಿ ಬಳ್ಳಾರಿಗೂ ಭೇಟಿ ನೀಡಿದ್ದರು. ಆಗ ನಗರದ ಹೊಸ ಬಸ್‌ನಿಲ್ದಾಣ ಬಳಿಯ ಸಕ್ಕರೆ ಕರೆಡೆಪ್ಪ ವಸತಿ ನಿಲಯದಲ್ಲಿ ಕಟ್ಟಡವೊಂದಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಬಳಿಕ ನಗರದ ವಿವಿಧೆಡೆ ಅವರಿಗೆ ಪೂಜೆಯೂ ನಡೆದಿತ್ತು. ನಂತರ ಅಂದು ರಾತ್ರಿ ನಗರದ ಎಸ್‌ಜಿ ಕಾಲೇಜು ಮೈದಾನದಲ್ಲಿ ನಡೆದ ನಾಟಕಕ್ಕೂ ಚಾಲನೆ ನೀಡಿದ್ದರು. ಅಂದು ಮಧ್ಯರಾತ್ರಿವರೆಗೂ ಬಳ್ಳಾರಿಯಲ್ಲೇ ಉಳಿದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next