Advertisement

ಎಚ್ಕೆಇ ಅಂಗ ಸಂಸ್ಥೆಗೆ ಶ್ರೀ ಹೆಸರು

06:56 AM Jan 23, 2019 | Team Udayavani |

ಕಲಬುರಗಿ: ಶರಣ ತತ್ವದ ನಿಜವಾದ ಅನುಯಾಯಿಗಳಾಗಿದ್ದ ತುಮಕೂರಿನ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ| ಶಿವಕುಮಾರ ಸ್ವಾಮೀಜಿಯವರು ಮಾನವ ಕುಲಕ್ಕೆ ಶ್ರೇಷ್ಠ ಮಾರ್ಗದರ್ಶಕರಾಗಿದ್ದು, ಹೈದ್ರಾಬಾದ್‌- ಕರ್ನಾಟಕ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯೊಂದಕ್ಕೆ ಶ್ರೀಗಳ ಹೆಸರಿಡಲಾಗುವುದು ಎಂದು ಸಂಸ್ಥೆ ಅಧ್ಯಕ್ಷ ಡಾ| ಭೀಮಶಂಕರ ಬಿಲಗುಂದಿ ಹೇಳಿದರು.

Advertisement

ಎಚ್ಕೆಇ ಸಂಸ್ಥೆಯ ಆಡಳಿತ ಮಂಡಳಿ ವತಿಯಿಂದ ಮಂಗಳವಾರ ನಗರದ ಐವಾನ್‌-ಇ-ಶಾಹಿ ರಸ್ತೆಯಲ್ಲಿರುವ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಲಿಂಗೈಕ್ಯ ಡಾ| ಶಿವಕುಮಾರ ಸ್ವಾಮೀಜಿಗಳಿಗೆ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಸಿದ್ದಗಂಗಾ ಶ್ರೀಗಳು ನಡೆದಾಡುವ ದೇವರು, ತ್ರಿವಿಧ ದಾಸೋಹಿಗಳೆಂದೇ ಪ್ರಸಿದ್ಧಿ ಪಡೆದಿದ್ದರು. ಜಾತಿ, ಮತ, ಪಂಥಗಳನ್ನು ಮೀರಿ ಎಲ್ಲ ಜನಾಂಗದ ಮಕ್ಕಳನ್ನು ಸಮಾನವಾಗಿ ಪ್ರೀತಿಸಿ ಅವರಿಗೆ ಅನ್ನ ದಾಸೋಹ, ವಿದ್ಯಾ ದಾಸೋಹವನ್ನು ಒದಗಿಸಿದ ಕೀರ್ತಿ ಪೂಜ್ಯರಿಗೆ ಸಲುತ್ತದೆ ಎಂದರು.

ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡುತ್ತಿದ್ದ ಸಿದ್ದಗಂಗಾ ಶ್ರೀಗಳ ಹೆಸರನ್ನು ಎಚ್.ಕೆ.ಇ ಸಂಸ್ಥೆಯ ಅಂಗ ಸಂಸ್ಥೆಗೆ ಇಡಬೇಕೆಂಬುದು ನನ್ನ ಭಾವನೆಯಾಗಿದೆ. ಈ ಕುರಿತು ಜ. 30ರಂದು ಆಡಳಿತ ಮಂಡಳಿಯ ಮಾಸಿಕ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಶ್ರದ್ಧಾಂಜಲಿ ಸಭೆಯಲ್ಲಿ ಎಚ್ಕೆಇ ಸಂಸ್ಥೆಯ ಆಡಳಿತ ಮಂಡಳಿ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದು, ಶ್ರೀಗಳಿಗೆ ಗೌರವ ನಮನ ಸಲ್ಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next