Advertisement

ಸಿದ್ಧಗಂಗಾ ಶ್ರೀಗೆ “ಭಾರತರತ್ನ’ಆಮಿಷ

07:55 AM Sep 14, 2017 | Team Udayavani |

ಬಾಗಲಕೋಟೆ: ವೀರಶೈವ ಮತ್ತು ಲಿಂಗಾಯತ ಒಂದೇ ಎಂಬ ಪತ್ರಿಕಾ ಹೇಳಿಕೆ ಕೊಡಿಸಲು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಮಾಜಿ ಸಚಿವ ವಿ. ಸೋಮಣ್ಣ ಮುಂತಾದವರು ತುಮಕೂರು ಸಿದ್ಧಗಂಗಾ ಶ್ರೀಗಳಿಗೆ “ಭಾರತ ರತ್ನ’ ಕೊಡಿಸುವುದಾಗಿ ಕಿರಿಯ ಶ್ರೀಗಳಿಗೆ ಆಮಿಷವೊಡ್ಡಿದ್ದಾರೆ ಎಂದು ಕೂಡಲಸಂಗಮ ಬಸವಧರ್ಮ ಪೀಠದ ಜಗದ್ಗುರು ಮಾತೆ ಮಹಾದೇವಿ ಗಂಭೀರ ಆರೋಪ ಮಾಡಿದ್ದಾರೆ.

Advertisement

ನಗರದಲ್ಲಿ ಬುಧವಾರ ಈ ಬಗ್ಗೆ ಲಿಖೀತ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಪ್ರಶಸ್ತಿಗಳಿಗಿಂತ ಧರ್ಮ-ಸಂಸ್ಕೃತಿ ದೊಡ್ಡದು ಎಂಬುದನ್ನು ಸಿದ್ಧಗಂಗಾ ಮಠದ ಕಿರಿಯ ಶ್ರೀಗಳು ಮನಗಾಣಬೇಕು ಎಂದರು.

ಸಿದ್ಧಗಂಗಾ ಶ್ರೀಗಳ ಬಳಿಗೆ ಹೋಗಿದ್ದ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲರು ಶ್ರೀಗಳು ಹೇಳಿದ್ದನ್ನೇ ಹೇಳಿದ್ದಾರೆ. ಶ್ರೀಗಳ ಹೇಳಿಕೆಯನ್ನು ತಿರುಚಿ ಹೇಳಿದ್ದೇ ಆಗಿದ್ದರೆ ಅಷ್ಟೊಂದು ಧೈರ್ಯವಾಗಿ ಆಣೆ ಪ್ರಮಾಣ ಮಾಡುವುದಾಗಿ ಸಚಿವರು ಹೇಳುತ್ತಿರಲಿಲ್ಲ. ಆದರೆ, ಶ್ರೀಗಳು ಸಚಿವರ ಬಳಿ ಹೇಳಿದ್ದನ್ನು ಸಹಿಸಿಕೊಳ್ಳಲಾಗದ, ಶ್ರೀಗಳೊಂದಿಗಿರುವ ಪುರೋಹಿತಶಾಹಿ ಮತ್ತು ಕೆಲ ವೀರಶೈವರು ಗಾಬರಿಗೊಂಡು ಶ್ರೀಗಳ ಮೇಲೆ ಒತ್ತಡ ಹಾಕಿ ಪತ್ರಿಕಾ ಹೇಳಿಕೆ ಕೊಡಿಸಿದ್ದಾರೆ. ಸಿದ್ಧಗಂಗಾ ಮಠವು ಶ್ರೀ ಸಿದ್ಧಲಿಂಗೇಶ್ವರ ಸಂಪ್ರದಾಯ ಮಠವಾಗಿದೆ.

ಶ್ರೀ ಸಿದ್ದೇಶ್ವರರು ಬಸವ ಧರ್ಮವನ್ನು ಪುನರುತ್ಥಾನ ಮಾಡಿ ದಕ್ಷಿಣ ಕರ್ನಾಟಕದಲ್ಲಿ ಅದನ್ನು ಬೆಳೆಸಿದ ಮಹಾಮಹಿಮರು. ಅಂದಾಗ ಸಿದಟಛಿಗಂಗಾ ಶ್ರೀಗಳು ಲಿಂಗಾಯತ ಧರ್ಮದ ಹೊರತು ಬೇರೆ ಪ್ರಸ್ತಾಪಿಸಲು ಹೇಗೆ ಸಾಧ್ಯ ಎಂದರು.

ಸಿದ್ಧಗಂಗಾ ಶ್ರೀಗಳಿಗೆ ವಯೋಧರ್ಮಕ್ಕೆ ಅನುಸಾರವಾಗಿ ಈಗ ನೆನಪಿನ ಶಕ್ತಿ ಕಡಿಮೆ. ಅದನ್ನು ದುರುಪಯೋಗಪಡಿಸಿಕೊಂಡು ಅವರ ಸುತ್ತಲೂ ಇರುವ ವೀರಶೈವವಾದಿಗಳು ತಾವೇ ಪತ್ರ ಸಿದ್ಧಪಡಿಸಿ, ಶ್ರೀಗಳ ಸಹಿ ಪಡೆದಿರಬಹುದೆಂಬ ಅನುಮಾನ ಕಾಡುತ್ತಿದೆ. ಇದರಲ್ಲಿ ಲಿಂಗಾಯತ ಸಮಾಜ ಹಿಂದೂ ಧರ್ಮ ಬಿಟ್ಟು ಹೋಗಬಾರದೆಂಬ ಅಭಿಪ್ರಾಯ ಹೊಂದಿರುವ ಯಡಿಯೂರಪ್ಪ, ವಿ. ಸೋಮಣ್ಣ, ಜಿ.ಎಸ್‌. ಬಸವರಾಜು ಮುಂತಾದವರ ಒತ್ತಡವೂ ಸೇರಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದರು.

Advertisement

ಪಾಟೀಲರಿಗೆ ಬೆಂಬಲ:
ಲಿಂಗಾಯತ ಧರ್ಮಕ್ಕಾಗಿ ಹೋರಾಟ ನಡೆಸುತ್ತಿರುವ ಸಚಿವ ಪಾಟೀಲರನ್ನು ನಾವು ಸಂಪೂರ್ಣ ಹಾರೈಸುತ್ತೇವೆ.ಅವರೊಂದಿಗೆ ನಾವಿದ್ದೇವೆ. ವಿಶ್ವಗುರು ಬಸವಣ್ಣನವರ ಕಾಲದಿಂದಲೂ ಸಂಪ್ರದಾಯವಾದಿಗಳು ಮತ್ತು ಪುರೋಹಿತಶಾಹಿಗಳ ಕಿರುಕುಳ, ಷಡ್ಯಂತ್ರ ಇದ್ದದ್ದೇ. ಆದ್ದರಿಂದ ಸಚಿವ ಪಾಟೀಲ ಮತ್ತು ಇತರರು ಧೈರ್ಯದಿಂದ ಮುನ್ನಡೆಯಬೇಕು ಎಂಬುದೇ ನಮ್ಮ ಆಶಯ ಎಂದು ಹೇಳಿದರು.

ಮೋದಿ-ಸಿದ್ದರಾಮಯ್ಯ ಭೇಟಿ: ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಈಗಾಗಲೇ ಹೋರಾಟ ನಡೆದಿದೆ. ಸೆ.24ರಂದು ಕಲಬುರಗಿಯಲ್ಲಿ ಬೃಹತ್‌ ರ್ಯಾಲಿ ನಡೆಯಲಿದೆ. ನವ್ಹೆಂಬರ್‌ನಲ್ಲಿ ಹೈದ್ರಾಬಾದ್‌ ನಲ್ಲಿ ರ್ಯಾಲಿ ನಡೆಸಿ, ಅಲ್ಲಿನ ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಲಾಗುವುದು. ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಪ್ರತ್ಯೇಕ ಧರ್ಮ ಮಾನ್ಯತೆ ನೀಡಲು ಹಕ್ಕೊತ್ತಾಯ ಮಾಡುವುದಾಗಿ ಮಾತೆ ಮಹಾದೇವಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next