ದಾವಣಗೆರೆ: ತುಮಕೂರಿನ ಸಿದ್ಧಗಂಗೆಯ ಪೀಠಾಧಿಪತಿ ಡಾ| ಶಿವಕುಮಾರ ಸ್ವಾಮೀಜಿಯವರು ಕಾವಿಕುಲಕ್ಕೆ ಆದರ್ಶಪ್ರಾಯರಾಗಿದ್ದವರು ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದ್ದಾರೆ.
ಮಂಗಳವಾರ ಸಂಜೆ ಜಾಲಿನಗರದಲ್ಲಿ ಶ್ರೀ ವಿನಾಯಕ ಯುವಕ ಸಂಘದವರು ಏರ್ಪಡಿಸಿದ್ದ ಡಾ| ಶಿವಕುಮಾರ ಸ್ವಾಮೀಜಿಯವರ ಶ್ರದ್ಧಾಂಜಲಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಶತಾಯುಷಿ ಡಾ| ಶಿವಕುಮಾರ ಸ್ವಾಮೀಜಿಯವರು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಕ್ಕೆ ನೀಡಿರುವ ಅವರಿಗೆ ಮರಣೋತ್ತರವಾಗಿ ಭಾರತರತ್ನ.. ಪ್ರಶಸ್ತಿ ನೀಡುವ ಮೂಲಕ ಪ್ರಶಸ್ತಿ ಗೌರವವನ್ನ ಹೆಚ್ಚಿಸಬೇಕು ಎಂದರು.
ಡಾ| ಶಿವಕುಮಾರ ಸ್ವಾಮೀಜಿಯವರು ಮತ್ತು ಚಿತ್ರದುರ್ಗ ಮುರುಘಾ ಮಠದ ಅವಿನಾಭಾವ ಸಂಬಂಧ ಹೊಂದಿದ್ದರು. ಒಳ್ಳೆಯ ಕೆಲಸ ಮಾಡಿದಂತಹವರಿಗೆ ಹೆಚ್ಚು ಆಯುಷ್ಯ ಇರುತ್ತದೆ ಎಂಬುದಕ್ಕೆ ಡಾ| ಶಿವಕುಮಾರ ಸ್ವಾಮೀಜಿಯವರೇ ಸಾಕ್ಷಿಯಾಗಿದ್ದರು ಎಂದು ಸ್ಮರಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಬಿ. ವೀರಣ್ಣ ಮಾತನಾಡಿ, ಮಹಾನಗರ ಪಾಲಿಕೆಯವರು ಯಾವುದಾದರೂ ರಸ್ತೆಗೆ ಡಾ| ಶಿವಕುಮಾರ ಸ್ವಾಮೀಜಿಯವರ ಹೆಸರಿಡುವ ಮೂಲಕ ಗೌರವ ಸಲ್ಲಿಸಬೇಕು ಎಂದರು.
ಮಹಾನಗರ ಪಾಲಿಕೆ ಸದಸ್ಯೆ ಲಕ್ಷ್ಮೀದೇವಿ ಬಿ. ವೀರಣ್ಣ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ವೀರಪ್ಪ ಎಂ. ಭಾವಿ, ಮಂಜುನಾಥ್, ಸೊಸೈಟಿ ಮಂಜಣ್ಣ, ಶೇಖಪ್ಪ, ವೃಷಭೇಂದ್ರಪ್ಪ ಇತರರು ಇದ್ದರು. ಒಂದು ನಿಮಿಷ ಮೌನಾಚರಣೆಯ ಮೂಲಕ ಡಾ| ಶಿವಕುಮಾರ ಸ್ವಾಮೀಜಿಯವರಿಗೆ ಗೌರವ ಸಲ್ಲಿಸಲಾಯಿತು.