ಪಣಂಬೂರು: ಮಂಗಳೂರು ಸಮುದ್ರದಲ್ಲಿ ಲಂಗರು ಹಾಕಿದ್ದ ಸೈಬೀರಿಯಾದ ತೈಲ ಸಾಗಾಟ ನೌಕೆಯಲ್ಲಿ ಕುಸಿದುಬಿದ್ದ ಸಿಬಂದಿಯನ್ನು ಕೋಸ್ಟ್ಗಾರ್ಡ್ ತಂಡ ರಕ್ಷಿಸಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿದೆ.
ನವಮಂಗಳೂರು ಬಂದರಿನಿಂದ 9.5 ನಾಟಿಕಲ್ ಮೈಲ್ ದೂರದ ಸಮುದ್ರದಲ್ಲಿ ಮಂಗಳವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ.
ಎಂ.ಟಿ. ಐವರಿ ರೇ ಹೆಸರಿನ ತೈಲ ನೌಕೆಯಲ್ಲಿದ್ದ ಸಿಬಂದಿ ರಾತ್ರಿ ಏಕಾಏಕಿ ಕುಸಿದುಬಿದ್ದಿದ್ದರು. ಈ ಬಗ್ಗೆ ಕೋಸ್ಟ್ಗಾರ್ಡ್ಗೆ ಮಧ್ಯರಾತ್ರಿ 12.30ರ ಸುಮಾರಿಗೆ ತುರ್ತು ಕರೆ ಬಂದಿತ್ತು. ಕೋಸ್ಟ್ ಗಾರ್ಡ್ ಸಿಬಂದಿ ಇಂಟರ್ಸೆಪ್ಟರ್ ಬೋಟ್ನಲ್ಲಿ ವೈದ್ಯರ ಸಹಿತ ತೈಲ ನೌಕೆ ಬಳಿಗೆ ತೆರಳಿದ್ದಾರೆ.
ನಸುಕಿನ 2.10ರ ವೇಳೆಗೆ ನೌಕೆಯನ್ನು ತಲುಪಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಿಬಂದಿಗೆ ತುರ್ತು ಚಿಕಿತ್ಸೆ ನೀಡಿತು. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
13 ದಿನಗಳ ಹಿಂದೆ ಈ ನೌಕೆ ದಕ್ಷಿಣ ಆಫ್ರಿಕಾದ ಲೈಬೇರಿಯಾದಿಂದ ಕೆಂಪು ಸಮುದ್ರ ಮೂಲಕ ಮಂಗಳೂರಿಗೆ ಆಗಮಿಸಿತ್ತು. ಈ ನೌಕೆ ತೈಲ ಮತ್ತು ಕೆಮಿಕಲ್ ಸರಕು ಹೊತ್ತೂಯ್ಯುವ ಸಾಮರ್ಥ್ಯ ಪಡೆದಿದೆ. ಎನ್ಎಂಪಿಎ ಒಳಗೆ ಪ್ರವೇಶಿಸಲು ಸಿಗ್ನಲ್ ಸಿಗದೇ ಇದ್ದುದರಿಂದ ಸಮುದ್ರ ಮಧ್ಯೆ ಲಂಗರು ಹಾಕಿತ್ತು.