ಗದಗ : ಖಾಕಿ ಧರಿಸುವ ಅವಕಾಶ ಪ್ರತಿಯೊಬ್ಬರಿಗೂ ದೊರೆಯುವುದಿಲ್ಲ. ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಣೆ ಮೂಲಕ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ನಿವೃತ್ತ ಪೊಲೀಸ್ ಇನ್ಸಪೆಕ್ಟರ್ ನಾಗರಾಜ ಎಚ್.ಮೈಲಾರ ಕರೆ ನೀಡಿದರು.
ಜಿಲ್ಲಾ ಪೊಲೀಸ್ ಇಲಾಖೆಯಿಂದ ಬೆಟಗೇರಿಯ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು. ಸರಕಾರದ ಬೇರೆ ಇಲಾಖೆಗಳಿಗಿಂತ ಪೊಲೀಸ್ ಇಲಾಖೆಯಲ್ಲಿ ಹೆಸರು ಮಾಡಲು ಸಾಕಷ್ಟು ಅವಕಾಶಗಳಿವೆ. ಮಾಹಿತಿ ಸಂವಹನಕ್ಕಾಗಿ ಪೊಲೀಸ್ ಇಲಾಖೆಯಿಂದ ಅನೇಕ ಆಧುನಿಕ ಉಪಕರಣಗಳ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಈ ಕುರಿತು ಇಲಾಖೆ ವತಿಯಿಂದ ಜರುಗುವ ತರಬೇತಿಗಳನ್ನು ಪಡೆಯುವ ಮನೋಭಾವ ಬೆಳೆಸಿಕೊಳ್ಳಬೇಕು. ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಹಾಗೂ ಸಿಬ್ಬಂದಿ ಕೆಲಸಕ್ಕೆ ನೀಡುವಷ್ಟು ಪ್ರಾಮುಖ್ಯತೆಯನ್ನು ತಮ್ಮ ಕುಟುಂಬ ಸದಸ್ಯರಿಗೂ ನೀಡಿ ಅವರೊಂದಿಗೂ ಹೆಚ್ಚಿನ ಸಮಯ ಕಳೆಯಬೇಕೆಂದು ಸಲಹೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಮಾತನಾಡಿ, ಸಮಾಜದಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡಲು ಹಗಲು, ಇರುಳು ಎನ್ನದೇ ಪೊಲೀಸರು ದುಡಿಯುತ್ತಿದ್ದಾರೆ.
ಹಬ್ಬ-ಹರಿದಿನಗಳ ಸಂದರ್ಭದಲ್ಲಿ ತಮ್ಮ ಕುಟುಂಬವನ್ನೂ ಬದಿಗೊತ್ತಿ ಸಮಾಜದ ಶಾಂತಿ, ಕಾನೂನು ಸುವ್ಯಸ್ಥೆ ಕಾಪಾಡುತ್ತಿದ್ದಾರೆ. ಯಾವುದೇ ರೀತಿಯ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಪೊಲೀಸ್ ಇಲಾಖೆಯಿಂದ ಆಗುತ್ತಿದೆ. ದೇಶದ ರಕ್ಷಣೆಗಾಗಿ ಗಡಿ ಕಾಯುವ ಸೈನಿಕರಂತೆ ಸಮಾಜದಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳನ್ನು ತಡೆಯುವಂತಹ ಮಹತ್ವದ ಕಾರ್ಯವನ್ನು ಪೊಲೀಸ್ ಇಲಾಖೆ ನಿರ್ವಹಿಸುತ್ತಿದೆ ಎಂದು ಹೇಳಿದರು.
ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅ ಧಿಕಾರಿ ಹಾಗೂ ಸಿಬ್ಬಂದಿಯನ್ನು ಈ ಸಮಯದಲ್ಲಿ ಸ್ಮರಿಸಿಕೊಳ್ಳುವ ಉದ್ದೇಶದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ವರ್ಷ ಧ್ವಜ ದಿನಾಚರಣೆ ಸಂದರ್ಭದಲ್ಲಿ ಪೊಲೀಸ್ ಧ್ವಜ ಮಾರಾಟ ಮಾಡಿ ಬಂದಂತಹ ಹಣದಲ್ಲಿ ಶೇ.50ರಷ್ಟು ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಗೆ, ಶೇ.25ರಷ್ಟು ಘಟಕದ ಪೊಲೀಸ್ ಕಲ್ಯಾಣ ನಿಧಿಗೆ ಹಾಗೂ ಶೇ.25ರಷ್ಟು ಹಣವನ್ನು ಕೇಂದ್ರ ಕಲ್ಯಾಣ ನಿಧಿ ಗೆ ಜಮೆ ಮಾಡಲಾಗುತ್ತದೆ. ಜಮೆಯಾದ ಈ ನಿ ಧಿಯಿಂದ ಸೇವೆಯಲ್ಲಿರುವ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿ ಆರೋಗ್ಯ ಮತ್ತು ಮಕ್ಕಳ ವಿದ್ಯಾಭ್ಯಾಸ ಹಾಗೂ ಪೊಲೀಸ್ ಮಕ್ಕಳ ಕಲ್ಯಾಣ ಕಾರ್ಯಕ್ರಮಗಳಿಗಾಗಿ ವಿನಿಯೋಗಿಸಲಾಗುತ್ತದೆ ಎಂದರು.
ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲೆಯ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮ ನಿಧಿ ಸಮಿತಿ ಸಭೆ ಜರುಗಿಸಿ ನಿವೃತ್ತ ಪೊಲೀಸ್ ಅ ಧಿಕಾರಿಗಳ ಕುಂದು ಕೊರತೆಗಳನ್ನು ಆಲಿಸಿ, ಅವುಗಳನ್ನು ನಿವಾರಿಸಲು ಸೂಕ್ತ ಕ್ರಮ ಜರುಗಿಸಲಾಗುತ್ತಿದೆ. ಪ್ರಸಕ್ತ ವರ್ಷ ಏಪ್ರಿಲ್ 2020 ರಿಂದ ಈವರೆಗೆ 31 ಜನ ಪೊಲೀಸ್ ಅ ಧಿಕಾರಿ, ಸಿಬ್ಬಂದಿಗೆ ನಿವೃತ್ತ ಪೊಲೀಸ್ ಅ ಧಿಕಾರಿಗಳ ಕ್ಷೇಮ ನಿಧಿಯಿಂದ 1.27 ಲಕ್ಷ ರೂ. ವೈದ್ಯಕೀಯ ಧನ ಸಹಾಯ ಹಾಗೂ ಮರಣ ಹೊಂದಿದ 9 ಜನ ನಿವೃತ್ತ ಪೊಲೀಸ್ ಅಧಿ ಕಾರಿಗಳ ಅಂತ್ಯ ಸಂಸ್ಕಾರಕ್ಕೆ 85 ಸಾವಿರ ರೂ. ಪಾವತಿಸಲಾಗಿದೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಡಿಸಿಆರ್‌ಬಿ ಡಿಎಸ್‌ಪಿ ವಿದ್ಯಾನಂದ ನಾಯಕ ಅವರ ನೇತೃತ್ವದಲ್ಲಿ ಪಥ ಸಂಚಲನ ನಡೆಯಿತು. ಸಮಾರಂಭದಲ್ಲಿ ಜಿಲ್ಲೆಯ ಹಿರಿಯ ಪೊಲೀಸ್ ಅ ಧಿಕಾರಿಗಳು, ಸಿಬ್ಬಂದಿ, ನಿವೃತ್ತ ಪೊಲೀಸ್ ಅಧಿ ಕಾರಿಗಳು, ಸಿಬ್ಬಂದಿ, ಗಣ್ಯರು ಭಾಗವಹಿಸಿದ್ದರು.