Advertisement
ಸಾಮಾನ್ಯ ಹೆಣ್ಣಿಗೂ, ನಾಲ್ಕಾರು ಜನರ ಕಣ್ಣಿಗೆ “ತಾರೆ’ ಎನಿಸಿಕೊಂಡ ಹೆಣ್ಣಿಗೂ “ಪ್ರಗ್ನೆನ್ಸಿ’ ಎನ್ನುವುದು ಭಿನ್ನ ಅನುಭವವನ್ನೇನೂ ಕೊಡುವುದಿಲ್ಲ. ನಾಲ್ಕು ಗೋಡೆಯ ಮಧ್ಯೆ, ಪರಿಚಿತರ ನಡುವೆಯಷ್ಟೇ ಸಾಮಾನ್ಯ ಗರ್ಭಿಣಿಯ ಓಡಾಟ, ಆಕೆಯ ಸಂಭ್ರಮಗಳು ಹಬ್ಬಿಕೊಳ್ಳುತ್ತವೆ. ಆದರೆ, ಈಗೀಗ ಸೆಲೆಬ್ರಿಟಿ ಎನಿಸಿಕೊಂಡ ಹೆಣ್ಣು ಆ ಚೌಕಟ್ಟಿನ ಆಚೆಗೆ ಪ್ರಗ್ನೆನ್ಸಿಯ ಸಂಭ್ರಮವನ್ನು ತೆರೆದಿಡುತ್ತಿದ್ದಾಳೆ. ಅಲ್ಲೆಲ್ಲೋ ನಟಿ ಕರೀನಾ ಕಪೂರ್ ಗರ್ಭಿಣಿ ಆಗಿದ್ದಾಗಲೇ ಚಿತ್ರದಲ್ಲಿ ನಟಿಸಿದರೆ, ದೂರದಲ್ಲೆಲ್ಲೋ ಆಟಗಾತಿ ಸೆರೇನಾ ವಿಲಿಯಮ್ಸ್, ನಟಿ ಸೆಲಿನಾ ಜೇಟ್ಲಿ, ತುಂಬು ಹೊಟ್ಟೆಯನ್ನು ತೋರಿಸಿ, ಫೋಟೋ ತೆಗೆಸಿ, ಟ್ವಿಟ್ಟರಿನ ಬುಟ್ಟಿಗೆ ಹಾಕುತ್ತಾರೆ. ಕನ್ನಡದ ನಟಿ ಶ್ವೇತಾ ಶ್ರೀವಾಸ್ತವ್ ಸಂಭ್ರಮವೂ ಅಂಥದ್ದೇ. ಹೊಟ್ಟೆ ಮೇಲೆ ಬೆಲ್ಲಿ ಪೇಂಟಿಂಗ್ ಮೂಡಿಸಿಕೊಂಡು ಸುದ್ದಿಯಲ್ಲಿರುವ ಶ್ವೇತಾಗೆ ತಾಯ್ತನ ಅಪರೂಪದ ಪುಳಕ ನೀಡುತ್ತಿದೆಯಂತೆ. ಓವರ್ ಟು ಶ್ವೇತಾ…
ನನಗೆ ಏನು ಇಷ್ಟವಾಗುತ್ತೋ, ಅದನ್ನೇ ಮಾಡುವವಳು ನಾನು. ಮಗು ಮಾಡಿಕೊಳ್ಳುವ ವಿಚಾರದಲ್ಲೂ ಅಷ್ಟೇ. ಮನೆಯಿಂದ ಹಲವು ಒತ್ತಡಗಳು ಬಂದವು. ಆದರೆ, ನಾನು ನನಗಿಷ್ಟವಾದಾಗ ಇದಕ್ಕೆ ಒಪ್ಪಿಕೊಂಡೆ. ತಾಯ್ತನ ಎನ್ನುವುದು ಪ್ರತಿ ಹೆಣ್ಣಿಗೂ ಖುಷಿ ನೀಡುವ ಸಂಗತಿ. ಈ 9 ತಿಂಗಳ ಅನುಭವ ಸಿಗುವುದು ಅಪರೂಪವೆಂದು ಭಾವಿಸಿ, ಏನಾದರೂ ಹೊಸತನ್ನು ಮಾಡಬೇಕೆಂದು ಗಂಡ ಅಮಿತ್ ಅವರಲ್ಲಿ ಚರ್ಚಿಸಿದ್ದೆ. ಅದರ ಫಲಶ್ರುತಿಯೇ ಬೆಲ್ಲಿ ಪೇಂಟಿಂಗ್. ಇದನ್ನು ಬಿಡಿಸಲು 6-7 ತಾಸು ಬೇಕು! ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರು ತುಂಬಾ ಸೊಗಸಾಗಿ ಚಿತ್ರ ಬಿಡಿಸಿದರು. ಅವರಿಗೆ ಥ್ಯಾಂಕ್ಸ್. ಮಗು ಮೇಲೆ ದೃಷ್ಟಿ ಬೀಳ್ಳೋದು ಸುಳ್ಳು!
ಸಾಮಾನ್ಯವಾಗಿ ಗರ್ಭಿಣಿ ತನ್ನ ಉಬ್ಬಿದ ಹೊಟ್ಟೆ ನೋಡುಗರ ಕಣ್ಣಿಗೆ ಬಿದ್ದು, ಮಗುವಿಗೆ ದೃಷ್ಟಿಯಾಗಬಾರದೆಂದು ಅದರ ಮೇಲೆ ಬಟ್ಟೆ ಮುಚ್ಚಿಕೊಂಡೇ ಓಡಾಡುತ್ತಾಳೆ. ಇದು ನನ್ನ ಪ್ರಕಾರ ಮೂಢನಂಬಿಕೆ. ಅದನ್ನು ಮೀರುವ ಪ್ರಯತ್ನ ಮಾಡಿದ್ದೇನೆ. ನಾನೊಬ್ಬಳು ಪ್ರಕೃತಿಯ ಭಕ್ತೆ. ನನ್ನ ದೇವರು ಕೂಡ ಪ್ರಕೃತಿಯೇ. ನಾವು ಒಳ್ಳೆಯದೆಂದುಕೊಂಡರೆ ಒಳ್ಳೆಯದೇ ಆಗುತ್ತದೆ. ಒಳ್ಳೆಯ ಮನಸ್ಸೊಂದಿದ್ದರೆ, ದೇವರು ಎಲ್ಲವನ್ನೂ ಒಳ್ಳೆಯದೇ ಮಾಡುತ್ತಾನೆ. ನಾನೊಬ್ಬಳು ಕಲಾವಿದೆ. ಕಲೆಯನ್ನು ನನ್ನ ಮಗುವಿಗೆ ತೋರಿಸಬಾರದೇ? ಅದಕ್ಕಾಗಿ ನಾನು ಹೊಟ್ಟೆಯ ಮೇಲೆ ಚಿತ್ರ ಬಿಡಿಸಿಕೊಂಡಿರುವೆ. ಗಂಡನಲ್ಲದೆ ಬೇರೆಯವರು ಸನಿಹದಿಂದ ಗರ್ಭ ನೋಡುವಾಗ ಅಂಜಿಕೆ ಆಗುತ್ತದೆಂಬುದೂ ನನ್ನ ಪಾಲಿಗೆ ಸುಳ್ಳೇ ಆಯಿತು. ಕಲೆಯ ವಿಚಾರದಲ್ಲಿ ಮುಜುಗರ ಪಡುವ ಅಗತ್ಯವಿಲ್ಲ.
Related Articles
ಗರ್ಭಿಣಿಯ ಸುತ್ತ ಅನೇಕ ನಂಬಿಕೆಗಳು, ಮಿಥ್‌ಗಳು ಮುತ್ತಿಕೊಳ್ಳುತ್ತವೆ. ಅದನ್ನು ಮಾಡಬಾರದು, ಇದನ್ನು ಮಾಡಬಾರದು ಎನ್ನುವ ನಿರ್ಬಂಧಗಳೇ ಅನೇಕ ಇರುತ್ತವೆ. ನನ್ನ ಕಿವಿಗೂ ಇಂಥ ಸುಳ್ಳುಗಳು ಬಿದ್ದಿವೆ. ಆದರೆ, ನಾನು ಅವಕ್ಕೆಲ್ಲ ಬೆಲೆ ಕೊಡಲು ಹೋಗಲಿಲ್ಲ. ಅವಕ್ಕೆ ಕಿವಿಗೊಟ್ಟರೆ ನನ್ನತನಕ್ಕೆ ಬೆಲೆ ಎಲ್ಲಿ? ಕೆಲವರಂತೂ “ದೈಹಿಕವಾಗಿ ಹೆತ್ತರೆ ಮಾತ್ರ ತಾಯಿ ಆಗಲು ಸಾಧ್ಯವಾ? ದತ್ತು ತೆಗೆದುಕೊಂಡರೆ ತಾಯಿ ಎನಿಸಲು ಸಾಧ್ಯವಿಲ್ಲವಾ?’- ಹೀಗೆ ಏನೇನೋ ಪ್ರಶ್ನಿಸುತ್ತಾರೆ. ಹೆಣ್ಣುಮಕ್ಕಳು ತಡವಾಗಿ ಹೆತ್ತರೆ, ಸಮಾಜ ಬೇರೆ ದೃಷ್ಟಿಯಿಂದಲೇ ನೋಡುತ್ತದೆ. ಹೆಣ್ಣು ಮಕ್ಕಳಿಗೆ ಸ್ವತಂತ್ರವಾಗಿರುವ ಧೈರ್ಯ ನೀಡಬೇಕು. ತಾಯ್ತನ ಅವಳ ಸ್ವಂತ ನಿರ್ಧಾರ ಆಗಿರಬೇಕು. ಅವಳಿಗೆ ತಾಯಿಯಾಗುವುದರ ಕುರಿತು ಶಿಕ್ಷಣ ನೀಡುವುದು ಉತ್ತಮ.
Advertisement
ಸಿಂಪಲ್ಲಾಗ್ ಒಂದ್ ಇಂಟರ್‌ವ್ಯೂ1. ಡಯೆಟ್ ಹೇಗಿದೆ?
ಸಮತೋಲನ ಆಹಾರಕ್ಕೆ ಮೊದಲ ಪ್ರಾಧಾನ್ಯತೆ ನೀಡುತ್ತಿದ್ದೇನೆ. ನನ್ನ ಇಷ್ಟದ ಸಿಹಿ ತಿಂಡಿಗಳನ್ನು ಹೆಚ್ಚಾಗಿಯೇ ಸೇವಿಸುತ್ತೇನೆ. ಚಾಕ್ಲೆಟ್, ಐಸ್‌ಕ್ರೀಮ್, ಕೇಕ್‌ಗಳನ್ನೂ ನಾನು ತಿನ್ನುವುದು ಬಿಟ್ಟಿಲ್ಲ. 2. ಈಗ್ಲೂ ಯೋಗ ಮಾಡ್ತೀರಾ?
ಮೊದಲು ಯೋಗ ಮಾಡುತ್ತಿದ್ದೆ. ಈಗ ಧ್ಯಾನ ಮಾಡುತ್ತೇನೆ. 3. ಗರ್ಭಿಣಿಗೆ ಜಾಸ್ತಿ ಬಯಕೆಗಳಂತೆ. ನಿಮಗೇನು ಆಸೆಯಾಗುತ್ತಿದೆ?
ಬೇರೆ ಸಮಯದಲ್ಲಿ ಇಲ್ಲದ ಬಯಕೆಗಳು, ಈ ವೇಳೆ ಹೆಚ್ಚೆಚ್ಚು ಕಾಡುವುದು ನಿಜ. ಮೈಸೂರು ಪಾಕ್, ಕಜ್ಜಾಯ, ಹೋಳಿಗೆ ಅಂದ್ರೆ ಬಾಯಿಯಲ್ಲಿ ನೀರು ಬರುತ್ತೆ. 4. ನಿಮ್ಮ ಮಗುವಿಗಾಗಿ ಮಾಡಿರುವ 3 ನೆನಪಿನಲ್ಲಿ ಉಳಿಯುವಂಥ ಕೆಲಸಗಳು?
ನಾಲ್ಕನೇ ತಿಂಗಳಿನಲ್ಲಿ ನನಗೆ ವಿದೇಶದಲ್ಲಿ ಸನ್ಮಾನ ಮಾಡಿದರು, ಎಂಟನೇ ತಿಂಗಳಿನಲ್ಲಿ ಫೋಟೋಶೂಟ್ ಮಾಡಿಸಿಕೊಂಡೆ, ಈಗ ಬೆಲ್ಲಿ ಪೇಂಟಿಂಗ್ ಅನ್ನು ಚಿತ್ರಿಸಿಕೊಂಡೆ. 5. ಒಬ್ಬ ಸೆಲೆಬ್ರಿಟಿಯಾಗಿ ನೀವು ಸಾಮಾನ್ಯ ಗರ್ಭಿಣಿಯರಿಗೆ ಏನು ಟಿಪ್ಸ್ ಕೊಡ್ತೀರಾ?
ಸದಾ ಚಟುವಟಿಕೆಯಿಂದ ಇರಿ. ತೂಕದ ಬಗ್ಗೆ ತಲೆ ಕೆಡಿಸಿಕೊಳ್ಳದಿರಿ. ಯೋಗ, ಧ್ಯಾನ ಮಾಡಿ. ಖುಷಿ ಖುಷಿಯಿಂದಿರಿ. ಸೌಮ್ಯಶ್ರೀ ಎನ್.