ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಅವರ ಆಪ್ತೆ ಎಂದು ನಂಬಿಸಿ ಜ್ಯುವೆಲ್ಲರಿ ಮಾಲಿಕನಿಗೆ ವಂಚಿಸಿದ ಆರೋಪದಡಿ ಬಂಧನವಾಗಿರುವ ಶ್ವೇತಾಗೌಡ ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರಗತಿ ಜ್ಯುವೆಲ್ಲರಿ ಶಾಪ್ ಮಾಲಿಕನಿಗೂ 20.75 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿರುವ ಆರೋಪ ಕೇಳಿ ಬಂದಿದ್ದು, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮಾಲಿಕ ಬಾಲರಾಜ್ ಶೇಟ್ ನೀಡಿದ ದೂರಿನನ್ವಯ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರಿನ ನವರತ್ನ ಜ್ಯುವೆಲ್ಲರಿ ಶಾಪ್‌ನ ಮಾಲಿಕ ಸಂಜಯ್ ಬಪ್ನ ಎಂಬುವವರ ಮೂಲಕ 6 ತಿಂಗಳ ಹಿಂದೆ ಶ್ವೇತಾಳ ಪರಿಚಯವಾಗಿತ್ತು. ನಂತರ 15 ದಿನಗಳ ಬಳಿಕ ಬೆಂಗಳೂರು ನಗರದ ಯುಬಿ ಸಿಟಿಯ ಬಳಿ ಇರುವ ಕಾಫಿ ಡೇಯಲ್ಲಿ ಭೇಟಿಯಾಗಿದ್ದಳು. ಅಲ್ಲಿ ಸಂಜಯ್ ಬಳಿ ಕೋಟಿಗಟ್ಟಲೆ ವ್ಯವಹಾರ ಇದೆ. ನಾನು ಹಳೆಯ ಆಂಟಿಕ್ ಜ್ಯುವೆಲ್ಲರಿ ಖರೀದಿಸುತ್ತೇನೆ ಎಂದು ಹೇಳಿದ್ದಳು. ಜೊತೆಗೆ ವಜ್ರದ ಆಭರಣಗಳನ್ನು ಖರೀದಿಸುವುದಾಗಿ ಹೇಳಿ ಬಾಲರಾಜ್‌ಗೆ 250 ಗ್ರಾಂ ತೂಕದ ಆಂಟಿಕ್ ಆಭರಣ ತಯಾರಿಸಲು ಹೇಳಿದ್ದಳು. ನಂತರ ಬಾಲರಾಜ ಶೇಟ್‌ರನ್ನು ಸಂಪರ್ಕಿಸಿರಲಿಲ್ಲ. ಡಿ.11ರಂದು ಬಾಲರಾಜ್ ಸಹೋದರ ನಾಗರಾಜ್ ಬಳಿ 285 ಗ್ರಾಂ ತೂಕದ ಹಳೆಯ ಒಡವೆಗಳನ್ನು ವ್ಯಾಪಾರಕ್ಕಾಗಿ ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದರು. ಆದರೆ, ವ್ಯಾಪಾರಿ ಸಿಗದ ಕಾರಣ ಅವರಿಗೆ ಪರಿಚಯವಿರುವ ಶ್ವೇತಾ ನೆನಪಾಗಿ ಅವರಿಗೆ ವ್ಯಾಟ್ಸ್‌ಆಪ್ ಮೂಲಕ ಆಭರಣಗಳ ಪೋಟೋ ಕಳುಹಿಸಿದ್ದರು. ಆಗ ಶ್ವೇತಾಗೌಡ ಈ ಒಡವೆಗಳು ನನಗೆ ಬೇಕು ಎಂದು ಕೇಳಿದ್ದಳು.
ಅಮಾನ್ಯಗೊಂಡ ಚೆಕ್: ಇದಾದ ನಂತರ ಬಾಲರಾಜ್ ತಮ್ಮ ಸಹೋದರನಿಗೆ ಶ್ವೇತಾ ಮೊಬೈಲ್ ನಂಬರ್ ಕೊಟ್ಟು ಭೇಟಿಯಾಗಲು ತಿಳಿಸಿದ್ದರು. ಅದೇ ದಿನ ರಾತ್ರಿ 8.30ಕ್ಕೆ ಯುಬಿ ಸಿಟಿ ಬಳಿ ನಾಗರಾಜ್‌ನನ್ನು ಕರೆಸಿಕೊಂಡ ಶ್ವೇತಾ, 20.75 ಲಕ್ಷ ರೂ. ಮೌಲ್ಯದ 285 ಗ್ರಾಂ ಆಭರಣ ಪಡೆದುಕೊಂಡು ಚೆಕ್ ಮೂಲಕ ವ್ಯವಹರಿಸುವುದಾಗಿ ಹೇಳಿದ್ದಳು. ನಂತರ 5 ಲಕ್ಷ ರೂ.ಗಳ 2 ಚೆಕ್ ಮತ್ತು. 6 ಲಕ್ಷದ 1 ಚೆಕ್ ನೀಡಿ, ಉಳಿದ 4.75 ಲಕ್ಷ ರೂ. ರೂ. ಅನ್ನು ಆರ್‌ಟಿಜಿಎಸ್ ಮಾಡುವುದಾಗಿ ಹೇಳಿ, ಡಿ.12ರಂದು ಚೆಕ್ ಗಳನ್ನು ಬ್ಯಾಂಕ್‌ಗೆ ಜಮಾ ಮಾಡುವಂತೆ ಹೇಳಿ ಕಳುಹಿಸಿಕೊಟ್ಟಿದ್ದಳು. ಬಾಲರಾಜ್ ಬ್ಯಾಂಕ್‌ಗೆ ಹೋಗಿ ಚೆಕ್ ಹಾಕಿದಾಗ ಡಿ.13ರಂದು ಚೆಕ್‌ಗಳು ಅಮಾನ್ಯಗೊಂಡಿರುವುದು ಕಂಡು ಬಂದಿದೆ.
ಇದಲ್ಲದೆ ಉಳಿದ 4.75 ಲಕ್ಷ ರೂ. ಅನ್ನು ಸಹ ಆರ್‌ಟಿಜಿಎಸ್ ಮಾಡಿರಲಿಲ್ಲ. ನಂತರ ಬಾಲರಾಜ್ ಶ್ವೇತಾಗೆ ಕರೆ ಮಾಡಿ ವಿಚಾರಿಸಿದಾಗ ಬ್ಯಾಂಕ್ ನಲ್ಲಿ ಸಮಸ್ಯೆಯಾಗಿದೆ ಎಂದು ಹೇಳಿದ್ದಳು. ನಂತರ ಶ್ವೇತಾಗೌಡ ಪೋನ್ ಸ್ವಿಚ್ಡ್ ಆಫ್ ಆಗಿದೆ. ಈ ಬಗ್ಗೆ ಬಾಲರಾಜ್‌ಗೆ ಅನುಮಾನ ಬಂದು ಸಂಜಯ್ ಅವರಿಗೆ ಕರೆ ಮಾಡಿದಾಗ, ನಾನು ಶ್ವೇತಾಗೌಡ ವಿರುದ್ಧ ದೂರು ನೀಡಿದ್ದು, ಅವರು ಠಾಣೆಯಲ್ಲಿ ಇರುವುದಾಗಿ ತಿಳಿಸಿದ್ದರು ಎಂದು ದೂರಿನಲ್ಲಿ ಬಾಲರಾಜ್ ಆರೋಪಿಸಿದ್ದಾರೆ.