ಲಕ್ನೋ : ‘ದೇಶದಲ್ಲಿನ ಎಲ್ಲ ಮದ್ರಸಗಳನ್ನು ಮುಚ್ಚಿಬಿಡಿ; ಈ ಮದ್ರಸಗಳಲ್ಲಿ ಐಸಿಸ್ ಸಿದ್ಧಾಂತಗಳನ್ನು ಮಕ್ಕಳ ಮನಸ್ಸಿನಲ್ಲಿ ತುಂಬಲಾಗುತ್ತಿದೆ’ ಎಂದು ಉತ್ತರ ಪ್ರದೇಶ ಶಿಯಾ ವಕ್‌ಫ್ ಮಂಡಳಿ ಅಧ್ಯಕ್ಷ ವಸೀಂ ರಿಜ್ವಿ ಅವರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪತ್ರ ಮೂಲಕ ಆಗ್ರಹಿಸಿದ್ದಾರೆ.
ರಿಜ್ವಿ ಅವರ ಈ ಮಾತುಗಳು ಮುಸ್ಲಿಂ ಮತ ಪಂಡಿತ, ಮುಲ್ಲಾಗಳನ್ನು ತೀವ್ರವಾಗಿ ಕೆರಳಿಸುವುದು ನಿಶ್ಚಿತವೆಂದು ತಿಳಿಯಲಾಗಿದೆ.
‘ಒಂದು ವೇಳೆ ದೇಶದಲ್ಲಿನ ಮದ್ರಸಗಳನ್ನು ಮುಚ್ಚದಿದ್ದಲ್ಲಿ ಮುಂದಿನ 15 ವರ್ಷಗಳಲ್ಲಿ ದೇಶದ ಮುಸ್ಲಿಂ ಜನಸಂಖ್ಯೆಯ ಅರ್ಧಾಂಶಕ್ಕೂ ಹೆಚ್ಚು ಮಂದಿ ಐಸಿಸ್ ಬೆಂಬಲಿಗರಾಗುವುದು ನಿಶ್ಚಿತ. ಯಾವುದೇ ಸಿದ್ಧಾಂತ, ಅಭಿಯಾನಗಳನ್ನು ಹರಡಲು ಮಕ್ಕಳನ್ನೇ ಗುರಿ ಇರಿಸುವುದು ವಿಶ್ವಾದ್ಯಂತ ಕಂಡು ಬರುತ್ತಿದೆ. ಅಂತೆಯೇ ವಿಶ್ವಾದ್ಯಂತ ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಐಸಿಸ್ ತನ್ನ ಭದ್ರಕೋಟೆಯನ್ನು ನಿರ್ಮಿಸುವುದನ್ನು ಕೂಡ ಕಾಣಬಹುದಾಗಿದೆ’ ಎಂದು ರಿಜ್ವಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
‘ಮದ್ರಸಕ್ಕೆ ಹೋಗುವ ಮುಸ್ಲಿಂ ಮಕ್ಕಳು ಸಮಾಜದ ಮುಖ್ಯ ವಾಹಿನಿಯಿಂದ ಬೇರ್ಪಡುತ್ತಾರೆ. ಅವರನ್ನು ಔಪಚಾರಿಕ ಶಿಕ್ಷಣದಿಂದ ದೂರ ಇರಿಸಲಾಗುತ್ತದೆ. ಇತರ ಧರ್ಮಗಳಿಂದಲೂ ಅವರು ದೂರವಾಗುತ್ತಾರೆ. ಇಸ್ಲಾಮಿಕ್ ಶಿಕ್ಷಣದ ನೆಪದಲ್ಲಿ ಮುಸ್ಲಿಂ ಮಕ್ಕಳ ಮನಸ್ಸಿನಲ್ಲಿ ಉಗ್ರವಾದವನ್ನು ತುಂಬಲಾಗುತ್ತಿದೆ; ಇದು ನಮ್ಮ ಮುಸ್ಲಿಂ ಮಕ್ಕಳಿಗೂ ದೇಶಕ್ಕೂ ಮಾರಕವಾಗಿರುತ್ತದೆ’ ಎಂದು ರಿಜ್ವಿ ತಮ್ಮ ಪತ್ರದಲ್ಲಿ ಎಚ್ಚರಿಸಿದ್ದಾರೆ.
‘ಆದುದರಿಂದ ಮದ್ರಸಗಳನ್ನು ಪ್ರಾಥಮಿಕ ಮಟ್ಟದಲ್ಲೇ ಮುಚ್ಚಬೇಕು. ಶಾಲೆಗಳಲ್ಲಿ ಔಪಚಾರಿಕ ಶಿಕ್ಷಣ ಪಡೆದು ಹೊರಬಂದ ಬಳಿಕ ಮುಸ್ಲಿಂ ತರುಣರು ತಮ್ಮ ಧರ್ಮ, ಸಂಸ್ಕೃತಿಯಯ ಬಗ್ಗೆ ಹೆಚ್ಚಿನದನ್ನು ತಿಳಿಯುವ ಬಯಕೆ ಹೊಂದಿದರೆ ಆಗ ಅವರು ಮದ್ರಸಗಳನ್ನು ಸೇರಬಹುದು’ ಎಂದು ರಿಜ್ವಿ ಹೇಳಿದ್ದಾರೆ.