ಕನ್ನಡ ಸಾಹಿತ್ಯ ಲೋಕದಲ್ಲಿ ಕಡಲ ತೀರದ ಭಾರ್ಗವ ಎಂದರೆ ಮೊದಲು ನೆನಪಾಗುವುದೇ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತರ ಹೆಸರು. ಕನ್ನಡ ಸಾರಸ್ವತ ಲೋಕದಲ್ಲಿ ಕಾರಂತರ ಅನ್ವರ್ಥಕ ನಾಮದಂತಿರುವ ಕಡಲ ತೀರದ ಭಾರ್ಗವ ಎಂಬ ಹೆಸರು ಈಗ ಚಿತ್ರವಾಗಿ ತೆರೆಮೇಲೆ ಬರುತ್ತಿದೆ.
ಹೌದು, “ಕಡಲ ತೀರದ ಭಾರ್ಗವ’ ಹೆಸರಿನಲ್ಲಿ ಕನ್ನಡದಲ್ಲಿ ಚಿತ್ರವೊಂದು ತೆರೆಗೆ ಬರಲು ತಯರಾಗುತ್ತಿದೆ. ಸುಮಾರು ಒಂದೂವರೆ ವರ್ಷಗಳಿಂದ ಪ್ರೀ-ಪ್ರೊಡಕ್ಷನ್ ಕೆಲಸಗಳಲ್ಲಿದ್ದ ಚಿತ್ರ, ಇದೇ ಯುಗಾದಿ ಹಬ್ಬದ ಸಂದರ್ಭದಲ್ಲಿ ಸರಳವಾಗಿ ಸೆಟ್ಟೇರಿದೆ.
ಅಂದಹಾಗೆ, ಕಡಲ ತೀರದ ಭಾರ್ಗವ ಎನ್ನುವ ಹೆಸರಿದ್ದರೂ, ಈ ಚಿತ್ರಕ್ಕೂ ಸಾಹಿತಿ ಶಿವರಾಮ ಕಾರಂತರ ಜೀವನ ಅಥವಾ ಅವರ ಬರಹಗಳಿಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತದೆ ಚಿತ್ರತಂಡ. ಭರತ್ ಮತ್ತು ಭಾರ್ಗವ ಎಂಬ ಇಬ್ಬರು ಸ್ನೇಹಿತರ ಜೀವನ ಕಥೆ ಚಿತ್ರದಲ್ಲಿದ್ದು,
ಚಿತ್ರದ ಕಥೆ ಕಡಲ ತೀರದಲ್ಲೇ ಆರಂಭವಾಗಿ, ಅಲ್ಲೇ ಅಂತ್ಯವಾಗುವುದರಿಂದ ಕಥೆಗೆ ಹೊಂದಿಕೆಯಾಗುತ್ತದೆ ಎನ್ನುವ ಕರಣಕ್ಕೆ ಚಿತ್ರತಂಡ “ಕಡಲ ತೀರದ ಭಾರ್ಗವ’ ಟೈಟಲ್ ಇಟ್ಟುಕೊಂಡಿದೆಯಂತೆ. ಸುಮಾರು ಐದು ಪ್ರಮುಖ ಪಾತ್ರಗಳ ಸುತ್ತ ಚಿತ್ರದ ಕಥೆ ನಡೆಯಲಿದ್ದು,
ನಾಲ್ಕು ವರ್ಷದಿಂದ ಹಲವು ಧಾರಾವಾಹಿ, ಶಾರ್ಟ್‌ಫಿಲಂಗಳನ್ನು ನಿರ್ದೇಶಿಸಿರುವ ಪನ್ನಗ ಸೋಮಶೇಖರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಭರತ್ ಗೌಡ, ವರುಣ್ ರಾಜ್ ಇಬ್ಬರು ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದು, ಶೃತಿ ಪ್ರಕಾಶ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಉಳಿದಂತೆ ಕೆ.ಪಿ ಶ್ರೀಧರ್, ಹಿರಿಯ ನಟ ಶ್ರೀಧರ್ ಮೊದಲಾದ ಕಲಾವಿದರು ಚಿತ್ರದ ಇತರ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದು, ಅನಿಲ್ ಸಿ.ಜೆ. ಸಂಗೀತ ಸಂಯೋಜನೆಯಿದ್ದು, ಡಾ.ವಿ ನಾಗೇಂದ್ರ ಪ್ರಸಾದ್, ಸಾಯಿ ನವೀನ್ ಮೊದಲಾದವರು ಹಾಡುಗಳಿಗೆ ಸಾಹಿತ್ಯ ಒದಗಿಸುತ್ತಿದ್ದಾರೆ.
ಚಿತ್ರಕ್ಕೆ ಕೀರ್ತನ್ ಪೂಜಾರಿ ಛಾಯಾಗ್ರಹಣ, ಆಶಿಕ್ ಸಂಕಲನ ಕಾರ್ಯವಿದೆ. ಇವಕಲಾ ಸ್ಟುಡಿಯೋಸ್ ಬ್ಯಾನರ್ ಮೂಲಕ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಇದೇ ಏಪ್ರಿಲ್ 25ರಿಂದ ಬೆಂಗಳೂರು, ಚಿಕ್ಕಮಗಳೂರು, ಕುಮಟಾ, ಗೋಕರ್ಣ ಸುತ್ತಮುತ್ತ ಚಿತ್ರದ ಶೂಟಿಂಗ್‌ಗೆ ತಯಾರಿ ಮಾಡಿಕೊಂಡಿದೆ.