Advertisement

ಅರ್ಜುನ್‌ ಸರ್ಜಾ ವಿರುದ್ಧ ಶ್ರುತಿ ಹರಿಹರನ್‌ ಮೀಟೂ ಆರೋಪ

11:35 AM Oct 21, 2018 | |

ಬಾಲಿವುಡ್‌ನಿಂದ ಆರಂಭವಾದ ಮೀಟೂ ಅಭಿಯಾನ ಈಗ ಎಲ್ಲಾ ಕ್ಷೇತ್ರಗಳಲ್ಲೂ ಜೋರು ಸದ್ದು ಮಾಡುತ್ತಿದೆ. ಈಗ ಸ್ಯಾಂಡಲ್‌ವುಡ್‌ನ‌ಲ್ಲೂ ಮೀಟೂ ಅಭಿಯಾನ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಮೊನ್ನೆಯಷ್ಟೇ ನಟಿ ಸಂಗೀತಾ ಭಟ್‌ ತಮಗೆ ಚಿತ್ರರಂಗದಿಂದ ಆದ ಕೆಟ್ಟ ಅನುಭವದ ಬಗ್ಗೆ ಹೇಳಿಕೊಂಡಿದ್ದರು. ಈಗ ಮತ್ತೂಬ್ಬ ನಟಿಯ ಸರದಿ. ಅದು ಶ್ರುತಿ ಹರಿಹರನ್‌.

Advertisement

ಶ್ರುತಿ ಹರಿಹರನ್‌, ನಟ ಅರ್ಜುನ್‌ ಸರ್ಜಾ ಅವರ ವಿರುದ್ಧ ಮೀಟೂ ಆರೋಪ ಮಾಡಿದ್ದು, ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಶ್ರುತಿ ಹರಿಹರನ್‌ ಹಾಗೂ ಅರ್ಜುನ್‌ ಸರ್ಜಾ “ವಿಸ್ಮಯ’ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದು, ಈ ಸಿನಿಮಾದ ಚಿತ್ರೀಕರಣದ ವೇಳೆ ಅರ್ಜುನ್‌ ಸರ್ಜಾ ತಮ್ಮ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾರೆಂದು ಶ್ರುತಿ ಹರಿಹರನ್‌ ಆರೋಪಿಸಿದ್ದಾರೆ. ದೃಶ್ಯಗಳ ರಿಹರ್ಸಲ್‌ ವೇಳೆ ತಮ್ಮ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಲ್ಲದೇ, ರೆಸಾರ್ಟ್‌ಗೆ ಕರೆದಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.

ಶ್ರುತಿ ಹರಿಹರನ್‌ ಹೇಳಿದ್ದು: “ಕಳೆದ ವರ್ಷ ಬಿಡುಗಡೆಯಾದ “ವಿಸ್ಮಯ’ ಚಿತ್ರದಲ್ಲಿ ನಾನು ಅರ್ಜುನ್‌ ಸರ್ಜಾ ಅವರ ಹೆಂಡತಿಯಾಗಿ ನಟಿಸಿದ್ದೆ. ಚಿತ್ರದ ರೊಮ್ಯಾಂಟಿಕ್‌ ದೃಶ್ಯದ ರಿಹರ್ಸಲ್‌ ಮಾಡುವಾಗ ಇನ್ನೊಂದಷ್ಟು ರಿಹರ್ಸಲ್‌ ಮಾಡಬಹುದಲ್ವಾ ಎನ್ನುತ್ತಾ ಜೋರಾಗಿ ತಬ್ಬಿಕೊಂಡರು. ಅವರ ಆ ವರ್ತನೆಯಿಂದ ನಾನು  ತಬ್ಬಿಬ್ಟಾದೆ. ಜೊತೆಗೆ ಮುಂದೆ ನಾನು ರಿಹರ್ಸಲ್‌ಗೆ ಬರೋದಿಲ್ಲ ಎಂದು ನೇರವಾಗಿ ಹೇಳಿದೆ. ನನ್ನ ಕೋಪ, ಪ್ರತಿಭಟನೆಯಿಂದ ಅರ್ಜುನ್‌ ಸರ್ಜಾ ವಿಚಲಿತರಾದಂತೆ ಕಾಣಲಿಲ್ಲ. ಅವರ ಭಾಷೆ ಕೂಡಾ ಸಭ್ಯವಾಗಿರಲಿಲ್ಲ. ಊಟಕ್ಕೆಂದು ರೆಸಾರ್ಟ್‌ಗೆ ಕರೆಯುತ್ತಿದ್ದರು ಎಂದು ಶ್ರುತಿ ಆರೋಪಿಸಿದ್ದಾರೆ.

ಕಾನೂನು ಮೂಲಕ ಉತ್ತರಿಸುತ್ತೇನೆ- ಅರ್ಜುನ್‌ ಸರ್ಜಾ: ಶ್ರುತಿ ಹರಿಹರನ್‌ ಆರೋಪಕ್ಕೆ ನಟ ಅರ್ಜುನ್‌ ಸರ್ಜಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಆಕೆಯ ಆರೋಪಗಳಿಗೆ ಕಾನೂನಿನ ಮೂಲಕವೇ ಉತ್ತರ ಕೊಡುತ್ತೇನೆ ಎಂದಿದ್ದಾರೆ. “ಎರಡು ವರ್ಷಗಳ ಹಿಂದೆ “ವಿಸ್ಮಯ’ ಸಿನಿಮಾ ಮಾಡಿದ್ದೆ.  ಈಗ ಇಂಥದ್ದೊಂದು ಆರೋಪ ಯಾಕೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಆಕೆಯನ್ನು ತಬ್ಬಿಕೊಳ್ಳಬೇಕು ಎಂಬ ಅಗತ್ಯವೂ ನನಗಿಲ್ಲ.

ಮಹಿಳೆಯರನ್ನು ಗೌರವಿಸಬೇಕು ಎಂಬುದು ನಾನು ಚಿಕ್ಕಂದಿನಿಂದಲೇ ಮನೆಯಲ್ಲಿ ಕಲಿತ ಸಂಸ್ಕಾರ. ನನಗೂ ಮನೆಯಲ್ಲಿ ಹೆಣ್ಣು ಮಕ್ಕಳಿದ್ದಾರೆ. ಇಲ್ಲಿಯವರೆಗೆ ಯಾವ ಹೆಣ್ಣಿನ ಜೊತೆಯೂ ಕೆಟ್ಟದಾಗಿ ನಡೆದುಕೊಂಡಿಲ್ಲ. “ಮೀಟೂ’ ವನ್ನು  ಸದುದ್ದೇಶಕ್ಕೆ ಬಳಸಬೇಕು, ಅದು ಬಿಟ್ಟು ವಿನಾಕಾರಣ ಆರೋಪ ಮಾಡಿದರೆ ಅದು ಹಾದಿ ತಪ್ಪುತ್ತದೆ. ಶ್ರುತಿ ಹರಿಹರನ್‌ ಮಾಡುತ್ತಿರುವ ಆರೋಪ ಕೂಡ ನನಗೆ ಹಾಗೆ ಅನಿಸುತ್ತಿದೆ.

Advertisement

ನನ್ನ ಚಿತ್ರ ಬದುಕಿನಲ್ಲಿ ಸುಮಾರು ನೂರೈವತ್ತು ಸಿನಿಮಾಗಳಲ್ಲಿ ಎಪ್ಪತ್ತಕ್ಕೂ ಹೆಚ್ಚು ನಾಯಕಿಯರ ಜೊತೆ ಕೆಲಸ ಮಾಡಿದ್ದೇನೆ. ಯಾರೂ ಇಂತಹ ಆರೋಪ ಮಾಡಿರಲಿಲ್ಲ. ಇನ್ನು “ವಿಸ್ಮಯ’ ಸಿನಿಮಾದ ಶೂಟಿಂಗ್‌ನಲ್ಲಿ ಪ್ರತಿಯೊಂದು ದೃಶ್ಯಗಳನ್ನು ಅವರಿಗೆ ವಿವರಿಸಿಯೇ ಚಿತ್ರೀಕರಿಸಲಾಗುತ್ತಿತ್ತು. ಆ ವೇಳೆ ಅವರು ಬೇಡವೆಂದಿದ್ದರೆ, ಚಿತ್ರದಲ್ಲಿ ಅಂತಹ ದೃಶ್ಯಗಳನ್ನು ಚಿತ್ರೀಕರಿಸುತ್ತಲೇ ಇರಲಿಲ್ಲ.

ಅಲ್ಲದೆ ಶೂಟಿಂಗ್‌ನಲ್ಲೂ  ಪತಿ-ಪತ್ನಿಯ ರೊಮ್ಯಾಂಟಿಕ್‌ ದೃಶ್ಯಗಳನ್ನು ವಿಜೃಂಭಿಸದೆ, ಆದಷ್ಟು ಸಹಜವಾಗಿಯೇ ತೋರಿಸುವಂತೆ ನಿರ್ದೇಶಕರಿಗೆ ಹೇಳಿದ್ದೆ. ಆ ಸಿನಿಮಾ ಮುಗಿದ ಮೇಲೂ ಕೂಡ ನಿಮ್ಮ ಜೊತೆ ಇನ್ನೊಂದು ಸಿನಿಮಾ ಮಾಡಬೇಕೆ ಎಂದಿದ್ದರು. ಅದಕ್ಕೆ ಖಂಡಿತಾ ಮಾಡೋಣ ಎಂದಿದ್ದೆ.  ಶೂಟಿಂಗ್‌ ಸೆಟ್‌ನಲ್ಲಿ ರಿಹರ್ಸಲ್‌ ಮಾಡುವಾಗ ಸಾಕಷ್ಟು ಜನರಿರುತ್ತಿದ್ದರು. ಅವರೆದುರು ಹೀಗೆ ಮಾಡಲು ಸಾಧ್ಯವೇ? ನನಗೆ ಮಾಡಲು ಬಿಡುವಿಲ್ಲದಷ್ಟು ಕೆಲಸಗಳು ಇರುವಾಗ ನಾನೇಕೆ ಆಕೆಯನ್ನು ರೆಸಾರ್ಟ್‌ಗೆ ಕರೆಯಲಿ?’ ಎಂದಿದ್ದಾರೆ ಅರ್ಜುನ್‌ ಸರ್ಜಾ.

ಶ್ರುತಿ ಆರೋಪಕ್ಕೆ ಚಿತ್ರರಂಗದ ಅನೇಕರು ಗರಂ: ಬಾಲನಟನಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟು, ತನ್ನ ಪ್ರತಿಭೆಯಿಂದ ಬೆಳೆದ ಅರ್ಜುನ್‌ ಸರ್ಜಾ ವಿರುದ್ಧ ಶ್ರುತಿ ಹರಿಹರನ್‌ ಮಾಡಿರುವ ಆರೋಪಕ್ಕೆ ಚಿತ್ರರಂಗದ ಅನೇಕರು ಸಿಟ್ಟಾಗಿದ್ದಾರೆ. ಈ ತರಹದ ಸುಳ್ಳು ಆರೋಪಗಳಿಂದ ಅರ್ಜುನ್‌ ಸರ್ಜಾ ಅವರ ಗೌರವಕ್ಕೆ ಚ್ಯುತಿ ತರಬೇಡಿ ಎಂದಿದ್ದಾರೆ. ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು, ಹಿರಿಯ ನಟ, ಅರ್ಜುನ್‌ ಸರ್ಜಾ ಅವರ ಮಾವ ರಾಜೇಶ್‌, ನಟ ಧ್ರುವ ಸರ್ಜಾ ಹಾಗೂ “ವಿಸ್ಮಯ’ ಚಿತ್ರದ ನಿರ್ದೇಶಕ ಅರುಣ್‌ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. 

ಮೊದಲು ಶೃತಿ ಹರಿಹರನ್‌ ನಟನೆ ಕಲಿಯಲಿ: “ಅರ್ಜುನ್‌ ಸರ್ಜಾ ಬಾಲ ಕಲಾವಿದರಾಗಿ ಚಿತ್ರರಂಗ ಪ್ರವೇಶಿಸಿದವರು. ಇಡೀ ದಕ್ಷಿಣ ಭಾರತದಲ್ಲಿಯೇ ತನ್ನದೇ ಆದ ಅಭಿಮಾನಿ ವರ್ಗವನ್ನು ಹೊಂದಿದ್ದಾರೆ. ಇದುವರೆಗೂ ಅವರ ಮೇಲೆ ಎಲ್ಲಿಯೂ ಇಂತಹ ಆರೋಪಗಳು ಕೇಳಿ ಬಂದಿಲ್ಲ. ಶೃತಿ ಹರಿಹರನ್‌ ಮೊದಲು ನಟನೆ ಕಲಿಯಲಿ. ಆನಂತರ ಇಂತಹ ಆರೋಪಗಳನ್ನು ಮಾಡಲಿ.

ಸಾಮಾನ್ಯವಾಗಿ ಶೃತಿ ಅವರ ಸಿನಿಮಾಗಳು ಮಾರ್ನಿಂಗ್‌ ಶೋ ಭರ್ತಿಯಾಗಲ್ಲ. ಅರ್ಜುನ್‌ ಸರ್ಜಾ ಅವರಂತಹ ನಟರ ಜೊತೆ ಮಾಡಿದ್ರೆ ಮೊದಲ ಶೋ ಫ‌ುಲ್‌ ಆಗುತ್ತೆ. ಈ ರೀತಿ ಇಂತಹ ನಟರ ಮೇಲೆ ಆರೋಪ ಮಾಡಿದ್ರೆ ಕ್ರೇಜ್‌ ಹೆಚ್ಚಾಗುತ್ತೆ, ಪ್ರಚಾರ ಸಿಗುತ್ತೆ ಎಂಬ ಕಾರಣಕ್ಕೆ ಹೀಗೆ ಮಾಡುತ್ತಾರೆ. ಒಂದು ವೇಳೆ ಅರ್ಜುನ್‌ ಸರ್ಜಾ ಅಸಭ್ಯವಾಗಿ ನಡೆದುಕೊಂಡಿದ್ದರೆ ಅವತ್ತೇ ಶೂಟಿಂಗ್‌ ಬಿಟ್ಟು ಹೋಗುವ ಅವಕಾಶವಿತ್ತು.

ಅರ್ಜುನ್‌ ಸರ್ಜಾ ಹೀಗೆ ಮಾಡ್ತಿದ್ದಾರೆ ಅಂತ ಹೇಳಬಹುದಿತ್ತು. ಅದೆಲ್ಲದನ್ನು ಬಿಟ್ಟು ಈಗ ವಿನಾ ಕಾರಣ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ. ಇಂತಹದ್ದನ್ನು ಚಿತ್ರರಂಗದಲ್ಲೂ ಪ್ರೋತ್ಸಾಹಿಸಬಾರದು. ಇದೇ ಥರ ಸುಳ್ಳು ಆರೋಪ ಮಾಡುವ ಪ್ರವೃತ್ತಿ ಮುಂದುವರೆದರೆ, ಸಜ್ಜನ ಕಲಾವಿದರು ಮರ್ಯಾದೆಗೆ ಹೆದರಿ ಚಿತ್ರರಂಗದಿಂದಲೇ ದೂರ ಉಳಿಯುತ್ತಾರೆ. ಇಲ್ಲಸಲ್ಲದ ವಿಷಯಕ್ಕೆ ವ್ಯಕ್ತಿಗಳ ಗೌರವಕ್ಕೆ ಚ್ಯುತಿ ತರುವ ಇಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಿಬೇಕು.
-ಮುನಿರತ್ನ, ನಿರ್ಮಾಪಕರ ಸಂಘದ ಅಧ್ಯಕ್ಷ, ಶಾಸಕ   

ನನ್ನ ಅಳಿಯನ ಬಗ್ಗೆ ನನಗೆ ಗೊತ್ತಿದೆ: “ನನಗೆ ಗೊತ್ತಿರುವಂತೆ ಸುಮಾರು ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಅರ್ಜುನ್‌ ಸರ್ಜಾ ಸಿನಿಮಾರಂಗದಲ್ಲಿ ಅದೆಷ್ಟೋ ನಟಿಯರ ಜೊತೆ ಅಭಿನಯಿಸಿದ್ದಾರೆ. ಇಲ್ಲಿಯವರೆಗೆ ಅವರ್ಯಾರಿಂದಲೂ ಬಾರದ ಆರೋಪ ನಿನ್ನೆ, ಮೊನ್ನೆ ಬಂದ ಹುಡುಗಿಯೊಬ್ಬಳು ಮಾಡುತ್ತಿದ್ದಾಳೆ ಎಂದರೆ ನಿಜಕ್ಕೂ ನಂಬಲಾಗುತ್ತಿಲ್ಲ. ಇತ್ತೀಚೆಗೆ ಈ ಥರದ ಆರೋಪ ಮಾಡುವ ರೋಗವೊಂದು ಶುರುವಾಗಿದೆ.

ಎಂದೋ ನಡೆದಿದೆ ಎಂಬ ಘಟನೆಯ ಬಗ್ಗೆ ಮತ್ತೆ ಯಾವಾಗಲೊ ಆರೋಪ ಮಾಡುವುದು ಎಷ್ಟು ಸರಿ. ಆಕೆ ಹೇಳುವುದೆಲ್ಲ ನಿಜವಾಗಿದ್ದರೆ, ಅಂದೇ ಹೇಳಬಹುದಿತ್ತಲ್ಲ. ನಾನು ಅರ್ಜುನ್‌ ಸರ್ಜಾನನ್ನು ನಿಮಗೆಲ್ಲರಿಗಿಂತ ಹತ್ತಿರದಿಂದ ಬಲ್ಲೆ. ಅವನು ನನ್ನ ಮಗಳ ಗಂಡ. ಅವನು ಆ ರೀತಿಯ ಹುಡುಗ ಅಲ್ಲ.  ಅವನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದರೆ ನಾನು ಸುಮ್ಮನಿರಲಾರೆ. ಮಾಡದ ತಪ್ಪಿಗೆ ಅವನ ಜೀವನದಲ್ಲಿ ಕಪ್ಪು ಚುಕ್ಕೆ ಬರಬಾರದು. ಆದ್ದರಿಂದ ಆಕೆಯ ವಿರುದ್ದ ಕಾನೂನು ರೀತಿಯಲ್ಲಿ ಈ ಬಗ್ಗೆ ಹೋರಾಟ ಮಾಡುತ್ತೇವೆ.
-ರಾಜೇಶ್‌, ಹಿರಿಯ ನಟ ಮತ್ತು ಅರ್ಜುನ್‌ ಸರ್ಜಾ ಮಾವ 

“ವಿಸ್ಮಯ’ ಚಿತ್ರದ ಶೂಟಿಂಗ್‌ನಲ್ಲಿ ಹೀಗಾಯ್ತು ಎಂದು ಕೇಳಿ ನನಗೆ ಶಾಕ್‌ ಆಯ್ತು!: “ವಿಸ್ಮಯ’ ಸಿನಿಮಾದ ಶೂಟಿಂಗ್‌ ನಡೆದಿದ್ದು ನನಗಿನ್ನು ಕಣ್ಣಿಗೆ ಕಟ್ಟುವಂತಿದೆ. ಸಿನಿಮಾದ ಶೂಟಿಂಗ್‌ನಲ್ಲಿ ಶೃತಿ ಆರೋಪ ಮಾಡುತ್ತಿರುವ ದೃಶ್ಯದ ಸ್ಕ್ರಿಪ್ಟ್ ಕೂಡ ಮೊದಲೇ ರೆಡಿಯಾಗಿತ್ತು. ಅವು ಚಿತ್ರದಲ್ಲಿ ಗಂಡ-ಹೆಂಡತಿ ನಡುವಿನ ರೊಮ್ಯಾಂಟಿಕ್‌ ದೃಶ್ಯಗಳಾಗಿದ್ದವು. ಆದರೆ ಅರ್ಜುನ್‌ ಸರ್ಜಾ, ನನಗೂ ಹೆಣ್ಣು ಮಕ್ಕಳಿದ್ದಾರೆ.

ಆ ಥರದ ದೃಶ್ಯಗಳನ್ನು ಮಾಡಲಾಗುವುದಿಲ್ಲ ಎಂದು ಮನವಿ ಮಾಡಿದ್ದರು. ಆದರೆ ಆ ದೃಶ್ಯಗಳನ್ನು ತೆಗೆಯುವುದರಿಂದ ಚಿತ್ರಕಥೆಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಆದಷ್ಟು ಅಂತಹ ದೃಶ್ಯಗಳನ್ನು ಕಡಿಮೆ ಮಾಡಿ ಶೂಟಿಂಗ್‌ ಮಾಡಲಾಯಿತು. ಇಡೀ ಸೆಟ್‌ನಲ್ಲಿ ಯಾವುದೇ ತೊಂದರೆಯಾಗದೆ ಶೂಟಿಂಗ್‌ ಮುಗಿದು, ಸಿನಿಮಾ ಕೂಡ ರಿಲೀಸ್‌ ಆಗಿದೆ. ಈಗ ಏಕೆ ಆ ವಿಷಯದಲ್ಲಿ ಅರ್ಜುನ್‌ ಸರ್ಜಾ ವಿರುದ್ದ ಆರೋಪ ಮಾಡುತ್ತಿದ್ದಾರೊ ಗೊತ್ತಿಲ್ಲ. ಸಿನಿಮಾದ ಚಿತ್ರೀಕರಣದ ವೇಳೆ ಅಂತಹ ಯಾವುದೇ ಘಟನೆಗಳು ನಡೆದಿರಲು ಸಾಧ್ಯವೇ ಇಲ್ಲ. 
-ಅರುಣ್‌ ವೈದ್ಯನಾಥನ್‌, “ವಿಸ್ಮಯ’ ಚಿತ್ರದ ನಿರ್ದೇಶಕ  

ಅಸ್ತಿತ್ವ ಕಳೆದುಕೊಂಡು ಹೀಗೆಲ್ಲಾ ಆರೋಪ: ಅರ್ಜುನ್‌ ಸರ್ಜಾ ಮೇಲೆ ಈ ಆರೋಪ ಸರಿಯಲ್ಲ. ಶ್ರುತಿ ಇಂಡಸ್ಟ್ರಿಯಲ್ಲಿ ಅಸ್ತಿತ್ವ ಕಳೆದುಕೊಂಡಿರಬೇಕು. ಹಾಗಾಗಿ ತನ್ನ ಬೇಳೆ ಬೇಯಿಸಿಕೊಳ್ಳಲು ಇಂತಹ ಆರೋಪ ಮಾಡಿದ್ದಾರೆ. ಈ ಹಿಂದೆ ಕೂಡ ನಿರ್ದೇಶಕರೊಬ್ಬರ ಮೇಲೆ ಆರೋಪ ಮಾಡಿದ್ದರು. ಅದು ಹತ್ತು ವರ್ಷದ ಹಿಂದಿನ ಘಟನೆಯಾಗಿತ್ತು. ಆಗಲೇ ನಾನು ಶ್ರುತಿಗೆ ಎಚ್ಚರಿಕೆ ನೀಡಿದ್ದೆ. ಆ ವೇಳೆ ಶ್ರುತಿ ಫೋನ್‌ ಮಾಡಿ ದಯವಿಟ್ಟು ಕೂಲ್‌ ಆಗ ಮಾತನಾಡಿ ಎಂದು ಮನವಿ ಮಾಡಿದ್ದರು. ಬುದ್ಧಿವಾದ ಹೇಳಿದ ಬಳಿಕ ಸುಮ್ಮನಾಗಿದ್ದರು. ಈಗ ಅರ್ಜುನ್‌ ಸರ್ಜಾ ಅವರಿಗೆ ತಮಿಳು ಚಿತ್ರರಂಗದಲ್ಲಿ ದೊಡ್ಡ ಹೆಸರಿದೆ. ಅಂತಹ ನಟನ ವಿರುದ್ಧ ಹೀಗೆಲ್ಲ ಆರೋಪಿಸಿರುವುದು ಸರಿಯಲ್ಲ.
-ಸಾ.ರಾ.ಗೋವಿಂದು,  ಮಾಜಿ ಅಧ್ಯಕ್ಷ ಮಂಡಳಿ

ಬಿಟ್ಟಿ ಪ್ರಚಾರ ಬಿಟ್ಟು, ಸಾಕ್ಷಿ ತೋರಿಸಲಿ: ಮೀಟೂ ವೇದಿಕೆ ಒಳ್ಳೆಯದು. ಅಲ್ಲಿ ಎಷ್ಟು ಪಾಸಿಟಿವ್‌ ಇದೆಯೋ ಅಷ್ಟೇ ನೆಗೆಟಿವ್‌ ಕೂಡ ಇದೆ. ನಾನು ಚಿಕ್ಕಂದಿನಿಂದಲೂ ಅಂಕಲ್‌ನನ್ನು ನೋಡಿಕೊಂಡು ಬಂದಿದ್ದೇನೆ. ಅವರು ಏನು ಅನ್ನೋದು ನನಗೆ ಗೊತ್ತಿದೆ. ಯಾವುದೋ ನಾಯಿ, ನರಿ, ಕ್ರಿಮಿ ಕೀಟಗಳು ಹೇಳಿದ್ದನ್ನು ನಾನು ಕೇಳುವುದಿಲ್ಲ. ಅವರು ಅವತ್ತೇ ಹೇಳಬಹುದಿತ್ತು. ಸಾಕ್ಷಿ ಇದೆ ಅಂದಿದ್ದಾರಲ್ಲ, ಇದ್ದರೆ ತೋರಿಸಲಿ. ಅಯಮ್ಮನ ಹೆಸರೂ ನಂಗೊತ್ತಿರಲಿಲ್ಲ. ಯಾರು ಅಂತಾನೂ ಗೊತ್ತಿಲ್ಲ. ಬಿಟ್ಟಿ ಪ್ರಚಾರಕ್ಕೆ ಈ ರೀತಿ ಮಾಡುತ್ತಿದ್ದಾರೆ. ಪಬ್ಲಿಸಿಟಿ ತೆಗೆದುಕೊಂಡಿದ್ದು ಸಾಕು. ಮುಂದೆ ಬಂದು ಮಾತನಾಡಿ.
-ಧ್ರುವ ಸರ್ಜಾ, ನಟ

Advertisement

Udayavani is now on Telegram. Click here to join our channel and stay updated with the latest news.

Next