ಶೃಂಗೇರಿ: ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಆರಾಧ್ಯ ದೇವತೆ ಶ್ರೀ ಶಾರದಾಂಬಾ ಮಹಾರಥೋತ್ಸವವು ಮಂಗಳವಾರ ಶ್ರದ್ಧಾಭಕ್ತಿಯಿಂದ ನಡೆಯಿತು.
ರಥೋತ್ಸವದ ಅಂಗವಾಗಿ ಮಾಘ ಕೃಷ್ಣ ತದಿಗೆ ದಿನವಾದ ಮಂಗಳವಾರ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ಬೆಳಗ್ಗೆ ಶ್ರೀಮಠಕ್ಕೆ ಆಗಮಿಸಿ ಶ್ರೀಮಠದ ಹೊರ ಮತ್ತು ಒಳ ಪ್ರಾಂಗಣದ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಶ್ರೀ ಶಾರದಾಂಬಾ ರಥೋತ್ಸವದ ಅಂಗವಾಗಿ ಶ್ರೀ ಶಾರದಾಂಬೆಯ ಉತ್ಸವ ಮೂರ್ತಿಯನ್ನು ಶ್ರೀ ಶಾರದಾ ಪೀಠದಿಂದ ವಾದ್ಯಮೇಳದೊಂದಿಗೆ ರಥ ಬಳಿ ತಂದು, ರಥಕ್ಕೆ ಮೂರು ಪ್ರದಕ್ಷಿಣೆ ಹಾಕಿ ನಂತರ ವಿಶೇಷವಾಗಿ ಅಲಂಕರಿಸಲಾಗಿದ್ದ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ಬಳಿಕ ರಥಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಆನೆ, ಅಶ್ವ, ತಟ್ಟಿರಾಯ, ಸ್ತಬ್ಧಚಿತ್ರ, ಭಜನಾ ತಂಡಗಳು ಉತ್ಸವದ ಮೆರಗು ಹೆಚ್ಚಿಸಿದವು. ರಥ ಸಾಗುವ ದಾರಿಯಲ್ಲಿ ತಳಿರು ತೋರಣ, ರಂಗೋಲಿಗಳಿಂದ ಅಲಂಕರಿಸಲಾಗಿತ್ತು. ಶ್ರೀಮಠದ ಶ್ರೀ ಸದ್ವಿದ್ಯಾ ಸಂಜೀವಿನಿ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳ ವೇದಘೋಷ, ಭಕ್ತಾದಿಗಳ ಜಯಘೋಷದೊಂದಿಗೆ ರಥ ಎಳೆಯಲಾಯಿತು. ಭಾರತಿ ಚೌಕದಲ್ಲಿರುವ ಕಟ್ಟೆಬಾಗಿಲಿನ ಶ್ರೀ ಗಣಪತಿಗೆ ಪೂಜೆ ಸಲ್ಲಿಸಲಾಯಿತು. ರಥದ ಎದುರು ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಕಾಲ್ನಡಿಗೆಯಲ್ಲಿ ಸಾಗಿದರು. ಶ್ರೀಮಠದ ಅಧಿ ಕಾರಿಗಳಾದ ಡಾ| ವಿ.ಆರ್. ಗೌರಿಶಂಕರ್, ಶಿವಶಂಕರ ಭಟ್, ರಾಮಕೃಷ್ಣಯ್ಯ, ಶ್ರೀಪಾದ ರಾವ್ ಮತ್ತಿತರರು ಇದ್ದರು.
ಮಹಾರಥೋತ್ಸವದ ಅಂಗವಾಗಿ ಲೋಕ ಕಲ್ಯಾಣಾರ್ಥ ಶ್ರೀ ಮಠದಲ್ಲಿ ಶತಚಂಡಿ ಮಹಾಯಾಗ ಏರ್ಪಡಿಸಲಾಗಿದ್ದು, ಮಾ.3ರಂದು ಜಗದ್ಗುರುಗಳ ಉಪಸ್ಥಿತಿಯಲ್ಲಿ ಸುಸಂಪನ್ನಗೊಳ್ಳಲಿದೆ. ಬುಧವಾರ ಸಂಜೆ ತುಂಗಾ ನದಿಯಲ್ಲಿ ತೆಪ್ಪೋತ್ಸವ ನಡೆಯಲಿದೆ.