Advertisement

ಪೊದೆ, ಮಣ್ಣು ತುಂಬಿ ಅಪಾಯಕ್ಕೆ ಆಹ್ವಾನ

09:44 AM May 11, 2022 | Team Udayavani |

ಬೆಳ್ತಂಗಡಿ: ಕರಾವಳಿಯಲ್ಲಿ ಈ ಬಾರಿ ಆಗಾಗ ಮಳೆ ಸುರಿಯುತ್ತಿದೆ. ಸಣ್ಣಪುಟ್ಟ ಮಳೆಗೆ ಹೆದ್ದಾರಿ ಚರಂಡಿಗಳು ತುಂಬಿ ರಸ್ತೆಯಲ್ಲೇ ನೀರು ಹರಿಯುತ್ತಿದೆ. ಮಳೆಗಾಲ ಬೇಗನೆ ಆರಂಭವಾಗುವ ಲಕ್ಷಣ ಕಂಡು ಬರುತ್ತಿದೆ. ಮಳೆಗಾಲ ಕಾಲಿಡುವ ಮೊದಲು ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿ ವ್ಯಾಪ್ತಿಯ ರಸ್ತೆಗಳ ಚರಂಡಿ ದುರಸ್ತಿ ಕಾಮಗಾರಿ ನಡೆಯಬೇಕಾದುದು ಅನಿವಾರ್ಯವಾಗಿದೆ.

Advertisement

ಅತೀ ಹೆಚ್ಚು ವಾಹನ ದಟ್ಟಣೆ ಇರುವ ಅಗಲ ಕಿರಿದಾದ ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 73ರ ಚರಂಡಿಗಳಲ್ಲಿ ಮಳೆ ನೀರು ಹರಿಯಲು ಸಾಧ್ಯವಾಗದೆ ರಸ್ತೆಗಳಲ್ಲೆ ನೀರು ಹರಿಯುತ್ತಿದೆ. ಜತೆಗೆ ರಸ್ತೆ ಅಂಚಿನಲ್ಲಿ ಪೊದೆಗಳು ಬೆಳೆದಿವೆ. ಉಜಿರೆ ಸೇರಿದಂತೆ ಕೆಲವು ಪೇಟೆಗಳಲ್ಲಿ ಕೊಳಚೆ ನೀರು ಚರಂಡಿಯಲ್ಲೇ ಹರಿಯುವಂತಾಗಿದೆ. ಕಳೆದ ವರ್ಷವೂ ಈ ಭಾಗದಲ್ಲಿ ಸರಿಯಾದ ಚರಂಡಿ ನಿರ್ವಹಣೆಯಾಗದೆ ಸಂಚಾರ ಸಮಸ್ಯೆಗಳು ಎದುರಾಗಿದ್ದವು.

ವಾಹನ ಸವಾರರಿಗೆ ತೊಂದರೆ

ರಾಜ್ಯ ಹೆದ್ದಾರಿ ಗುರುವಾಯನಕೆರೆ- ಉಪ್ಪಿ ನಂಗಡಿ ರಸ್ತೆಯೂ ಇದೇ ಸ್ಥಿತಿಯಲ್ಲಿದೆ. ಬೆಳ್ತಂಗಡಿ ನಾರಾವಿ ರಸ್ತೆ ಬದಿಯ ಚರಂಡಿ ಅವ್ಯವಸ್ಥೆಯಿಂದ ಕೂಡಿದೆ. ಪ್ರಸಕ್ತ ಅಗಲೀಕರಣ ನಡೆಯುತ್ತಿದ್ದು, ಮುಂದಿನ ವರ್ಷ ಸುಸಜ್ಜಿತ ರಸ್ತೆ ನಿರೀಕ್ಷೆಯಿದೆ. ಕೊಕ್ಕಡ ಹೆದ್ದಾರಿ, ಗುರುವಾಯನಕೆರೆಯಿಂದ ಪೂಂಜಾಲಕಟ್ಟೆ ಸಾಗುವ ರಸ್ತೆ ಚರಂಡಿಗಳಲ್ಲೂ ಇದೇ ಸ್ಥಿತಿ. ಪ್ರಸಕ್ತ ಪೂಂಜಾಲಕಟ್ಟೆ-ಚಾರ್ಮಾಡಿ ದ್ವಿಪಥ ರಸ್ತೆಗೆ ಅನುದಾನ ಲಭಿಸಿದ್ದರೂ ಶಿಲಾನ್ಯಾಸ ನವೆಂಬರ್‌ನಲ್ಲಿ ಈಡೇರುವ ಸಾಧ್ಯತೆ ಇದೆ. ಅದಕ್ಕಿಂತ ಮುನ್ನ ಜೂನ್‌ ಅವಧಿಯಲ್ಲೆ ಮಳೆ ಆರಂಭವಾಗುವುದರಿಂದ ಸವಾರರಿಗೆ ಗಂಡಾಂತರ ಎದುರಾಗಲಿದೆ.

Advertisement

ಕೆಲವೆಡೆ ಚರಂಡಿಯೇ ಇಲ್ಲ

ರಾಷ್ಟ್ರೀಯ ಹೆದ್ದಾರಿಯ ಹಲವು ಅಗತ್ಯ ಸ್ಥಳಗಳಲ್ಲಿ ಚರಂಡಿಗಳನ್ನೆ ನಿರ್ಮಿಸಲಾಗಿಲ್ಲ. ಇನ್ನು ಕೆಲವೆಡೆ ರಸ್ತೆಯ ಒಂದು ಭಾಗದಲ್ಲಿ ಮಾತ್ರ ಚರಂಡಿ ಇದೆ ಇದರಿಂದ ಮಳೆನೀರು ರಸ್ತೆಯ ಮೂಲಕವೇ ಹರಿದು ಹೋಗುತ್ತಿದೆ. ಚರಂಡಿ ಇಲ್ಲದ ಕಾರಣ ರಸ್ತೆಬದಿ ನಿಲ್ಲುವ ನೀರು ಪಾದಚಾರಿ ಹಾಗೂ ವಾಹನ ಸವಾರರಿಗೆ ಕೆಸರಿನ ಸಿಂಚನವನ್ನು ಉಂಟು ಮಾಡುತ್ತಿದೆ. ಇನ್ನು ಕೆಲವು ಪ್ರದೇಶಗಳಲ್ಲಿ ಸಂಪರ್ಕ ರಸ್ತೆಯನ್ನು ನಿರ್ಮಿಸುವ ಭರದಲ್ಲಿ ಚರಂಡಿಗಳನ್ನು ಸಂಪೂರ್ಣ ಮುಚ್ಚಲಾಗಿದೆ. ಚರಂಡಿಗಳಿಗೆ ಹಾಕಿರುವ ಮೋರಿಗಳಲ್ಲಿ ಹೂಳು ತುಂಬಿ ನೀರು ಹರಿಯಲು ಜಾಗ ವಿಲ್ಲದಾಗಿದೆ. ಹೆದ್ದಾರಿ ವ್ಯಾಪ್ತಿಯ ಮುಖ್ಯಪೇಟೆಯಲ್ಲಿ ಚರಂಡಿಗಳೇ ಮಾಯವಾಗಿವೆ.

ನಿರ್ವಹಣೆ ಅಗತ್ಯ

ಸಮಸ್ಯೆ ನೀಡುವ ಚರಂಡಿಗಳ ದುರಸ್ತಿಯನ್ನು ಮಳೆಗಾಲ ಆರಂಭವಾಗುವುದರೊಳಗೆ ನಿರ್ವಹಿಸಿದರೆ ಪ್ರಯೋಜನವಾದೀತು. ಮಳೆ ನೀರು ಸರಿಯಾಗಿ ಹರಿಯದಿದ್ದರೆ ರಸ್ತೆ ಹೊಂಡಗಳು ನಿರ್ಮಾಣವಾಗಿ ಸಮಸ್ಯೆ ಉಂಟಾಗುವುದು ಖಚಿತ.

ಉಜಿರೆ ಪೇಟೆಯ ವ್ಯಥೆ

ಉಜಿರೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಚರಂಡಿಗಳು ಸರಿಯಾಗಿ ದುರಸ್ತಿಯಾಗದ ಕಾರಣ ಕಳೆದ ಮಳೆಗಾಲದಲ್ಲಿ ಹಲವಾರು ಸಂಕಟಗಳು ಉಂಟಾಗಿದ್ದವು. ಸ್ಥಿತಿ ಇದೇ ರೀತಿ ಉಳಿದರೆ ಈ ಬಾರಿಯೂ ಅಪಾಯ ತಪ್ಪಿದ್ದಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next