ಸಿಂಧನೂರು: ಬೆಳ್ಳಂ ಬೆಳಗ್ಗೆ ಎಂದಿನಂತೆ ಕರ್ತವ್ಯ ನಿರತವಾಗಿದ್ದ ಸಿಬ್ಬಂದಿಗೆ ಶುಕ್ರವಾರ ಬೆಳಗ್ಗೆ ಶಾಕ್ ಕಾದಿತ್ತು. ಸ್ವತಃ ಸಾರಿಗೆ ಸಚಿವರೇ ಸರ್ಕಾರಿ ಬಸ್ ತಡೆದು, ಅಹವಾಲು ಕೇಳಿದ ಪ್ರಸಂಗ ನಡೆಯಿತು. ತಾಲೂಕಿನ ಅರಗಿನಮರ ಕ್ಯಾಂಪ್‌ನಲ್ಲಿರುವ ಉದ್ಯಮಿ ಮಲ್ಲಿಕಾರ್ಜುನ ಎನ್ನುವವರ ಮನೆಯಲ್ಲಿ ತಂಗಿದ್ದ ಸಾರಿಗೆ ಸಚಿವ ಬಿ. ಶ್ರೀರಾಮುಲು ಬೆಳಗ್ಗೆ ವಾಯು ವಿಹಾರಕ್ಕೆ ತೆರಳಿದ್ದರು. ಈ ವೇಳೆ ಬರ್ಮಾ ಕ್ಯಾಂಪ್‌ನಿಂದ ಸಿಂಧನೂರು ನಗರದ ಕಡೆಗೆ ಬರುತ್ತಿದ್ದ ಸಾರಿಗೆ ಬಸ್‌ಗಳನ್ನು ತಾವೇ ಮುಂದೆ ಹೋಗಿ ತಡೆದು ಕುಶಲೋಪರಿ ವಿಚಾರಿಸಿದರು. ವಿಶೇಷ ಎಂದರೆ ಚಾಲಕ ಹಾಗೂ ನಿರ್ವಾಹಕರು ಬಸ್ ಇಳಿದು ಕೆಳಗೆ ಬರಲು ಮುಂದಾದಾಗ ಬೇಡ ಎಂದರು. ತಮ್ಮ ಸೇವೆಯನ್ನು ಮುಂದುವರಿಸುವಂತೆ ಉತ್ತೇಜಿಸಿದರು. ಬೆಳ್ಳಂಬೆಳಗ್ಗೆ ಹಳ್ಳಿ ರಸ್ತೆಯಲ್ಲಿ ಸಾರಿಗೆ ಸಚಿವರೇ ಬಸ್‌ನತ್ತ ಕೈ ಮಾಡಿ ನಿಲ್ಲಿಸಿದ್ದನ್ನು ಕಂಡು ಸಾರಿಗೆ ಬಸ್ ಚಾಲಕ, ನಿರ್ವಾಹಕರು ಪುಳಕಿತಗೊಂಡರು. ಈ ವೇಳೆ ಭದ್ರತಾ ಸಿಬ್ಬಂದಿ ಹೊರತುಪಡಿಸಿ ರಾಜಕೀಯ ಮುಖಂಡರ ಗದ್ದಲ ಇರಲಿಲ್ಲ. ಜಾಗಿಂಗ್ ಪ್ಯಾಂಟ್, ಕಪ್ಪು ಟೀ ಶರ್ಟ್ ಧರಿಸಿದ್ದ ಅವರನ್ನು ಸುಲಭವಾಗಿ ಗುರುತಿಸುವಂತೆಯೂ ಇರಲಿಲ್ಲ.