Advertisement

ಪುತ್ತಿಗೆ ಶ್ರೀಗಳಿಗೆ ಇಂದು ಅಭಿನಂದನೆ

07:30 AM Jul 22, 2017 | Team Udayavani |

ಉಡುಪಿ: ವಿದೇಶಗಳಲ್ಲಿ ಹಲವು ಧಾರ್ಮಿಕ ಕೇಂದ್ರಗಳನ್ನು ತೆರೆದ ಉಡುಪಿಯ ಮೊದಲ ಯತಿ ಶ್ರೀ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರನ್ನು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜು. 22 ಸಂಜೆ 5ಕ್ಕೆ ನಾಗರಿಕರ ವತಿಯಿಂದ ಸಮ್ಮಾನಿಸಲಾಗುತ್ತಿದೆ. 

Advertisement

ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಶ್ರೀಬೇಲಿ ಮಠದ ಶ್ರೀ ಶಿವರುದ್ರ ಸ್ವಾಮೀಜಿ, ಧರ್ಮ ಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ, ಸಚಿವ ಪ್ರಮೋದ್‌ ಮಧ್ವರಾಜ್‌ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜೋಡುಕಟ್ಟೆ ಯಿಂದ 4 ಗಂಟೆಗೆ ಶೋಭಾಯಾತ್ರೆಯಲ್ಲಿ ಶ್ರೀಪಾದ ರನ್ನು ಬರಮಾಡಿಕೊಳ್ಳಲಾಗುತ್ತದೆ.

ಶ್ರೀಪಾದರು ಅಮೆರಿಕ, ಕೆನಡ, ಇಂಗ್ಲೆಂಡ್‌, ಆಸ್ಟ್ರೇಲಿಯ ಮೊದಲಾದ ದೇಶಗಳಿಗೆ ಭೇಟಿ ನೀಡಿದಾಗ ಅಲ್ಲಿನ ಭಾರತೀಯ ಮೂಲದವರು ತಮ್ಮ ಧಾರ್ಮಿಕ ಆಚರಣೆಗಳಿಗೆ ಅಗತ್ಯದ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಬೇಡಿಕೆ ಇಟ್ಟರು. ಇದರ ಪರಿಣಾಮವೇ ಒಂದೊಂದಾಗಿ ಅಸ್ತಿತ್ವಕ್ಕೆ ಬರುತ್ತಿರುವ ಶ್ರದ್ಧಾ ಕೇಂದ್ರಗಳು. ಅಲ್ಲಿನ ಕಾನೂನು, ಹಣಕಾಸು ವ್ಯವಸ್ಥೆ, ಕಾಲಮಾನ ಎಲ್ಲವೂ ಭಾರತಕ್ಕಿಂತ ಸಂಪೂರ್ಣ ಭಿನ್ನವಾಗಿದ್ದರೂ, ಇಲ್ಲಿನ ಧಾರ್ಮಿಕ ನಿಯಮಗಳನ್ನೂ ಉಳಿಸಿಕೊಂಡು ಆ ವ್ಯವಸ್ಥೆಯಲ್ಲಿ ಕೇಂದ್ರಗಳನ್ನು ತೆರೆದುದು ಶ್ರೀಪಾದರ ಸಾಗರೋತ್ತರ ಸಾಧನೆಯಾಗಿದೆ. 

ಮೊದಲು ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ತಾತ್ಕಾಲಿಕ ಕೇಂದ್ರಗಳನ್ನು ತೆರೆದ ಶ್ರೀಪಾದರು ವ್ಯವಸ್ಥೆಗಳನ್ನು ಕ್ರೋಡೀಕರಿಸಿಕೊಂಡು ವಿಗ್ರಹಗಳ ಪ್ರತಿಷ್ಠಾಪನೆ ಮಾಡಿದರು. ಇದಕ್ಕಾಗಿ ಕೋಟ್ಯಂತರ ರೂ. ವೆಚ್ಚವಾಗುತ್ತಿದೆ.
  
ಗಜಪೃಷ್ಠ- ಬ್ರಹ್ಮರಥ ಶೈಲಿ
ಎಂಟು ವರ್ಷಗಳ ಹಿಂದೆ ಅಮೆರಿಕದ ಎಡಿಸನ್‌ ನಗರದಲ್ಲಿ ಜಾಗವನ್ನು ಖರೀದಿಸಿ “ಕೃಷ್ಣ ವೃಂದಾವನ’ ಕ್ಷೇತ್ರವೆಂದು ಹೆಸರಿಸಿದ್ದ ಶ್ರೀಪಾದರು ಇತ್ತೀಚೆಗೆ ಅಲ್ಲಿ ಉಡುಪಿ ಶ್ರೀಕೃಷ್ಣನನ್ನು ಹೋಲುವ ಕೃಷ್ಣ ವಿಗ್ರಹದ ಪ್ರತಿಷ್ಠೆ ನಡೆಸಿದರು. 
ದೇವಸ್ಥಾನವನ್ನು ಉಡುಪಿ ಅನಂತೇಶ್ವರ ದೇವಸ್ಥಾನದ ಗಜಪೃಷ್ಠ ಆಯದಲ್ಲಿ, ಶ್ರೀಕೃಷ್ಣ ಮಠದ ಬ್ರಹ್ಮರಥದ ಮಾದರಿಯಲ್ಲಿ ನಿರ್ಮಿಸಲಾಗಿದೆ. ಒಟ್ಟು ವಿಸ್ತೀರ್ಣ ಸುಮಾರು 3.5 ಎಕ್ರೆ. ಪೂಜಾಗೃಹ, ಭೋಜನಾಲಯ, ಸಿಬಂದಿ ವಸತಿಗೃಹ, ಸುಮಾರು 300 ಜನರು ಸೇರಬಹುದಾದ ಸಮುದಾಯ ಸಭಾಂಗಣವಿದೆ. ದಾರುಶಿಲ್ಪ ವೈಭವ, ವಾಸ್ತುಶಿಲ್ಪದ ಸಮ್ಮಿಲನಗಳು ಇದರ ವೈಶಿಷ್ಟé. 

ಕುಶಲಕರ್ಮಿಗಳು
ವಿಗ್ರಹದ ಪಾಣಿಪೀಠ (ಕಲ್ಲು), ಮರದ ಕೆತ್ತನೆಗಳನ್ನು ಮೂಡಬಿದಿರೆಯ ಹರೀಶ ಆಚಾರ್ಯರ ನೇತೃತ್ವದಲ್ಲಿ ನಿರ್ಮಿಸಿ ಸಮುದ್ರದ ಮಾರ್ಗದ ಮೂಲಕ ಎಡಿಸನ್‌ಗೆ ಸಾಗಿಸಿ ಜೋಡಿಸಲಾಗಿದೆ. ಎಡಿಸನ್‌ನಲ್ಲಿ ಮರದ ಕೆತ್ತನೆಗಳನ್ನುಹರೀಶ ಆಚಾರ್ಯರ ಕುಶಲಕರ್ಮಿಗಳು ಜೋಡಿಸಿ ದರು. ಇದರ ಸಾಗಾಟದ ಖರ್ಚೇ ಸುಮಾರು 50 ಲ.ರೂ.  ಕೃಷ್ಣ ವಿಗ್ರಹವನ್ನು ಸಾಲಿಗ್ರಾಮ ಶಿಲೆಯಿಂದ ರಚಿಸಲಾಗಿದೆ. ನೇಪಾಲದ ಗಂಡಕಿ ನದಿಯಲ್ಲಿ ಸಿಗುವ ಸಾಲಿಗ್ರಾಮದ ಶಿಲೆಯಲ್ಲಿ  ವಿಗ್ರಹವನ್ನು ನೇಪಾಲದಲ್ಲಿ ನಿಂತು ಸುಮಾರು ಆರು ತಿಂಗಳ ಪರಿಶ್ರಮದಲ್ಲಿ ಕಡೆದವರು ಶಿರಸಿಯ ಹರೀಶ ಆಚಾರ್ಯರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next