Advertisement

ದೇಸಿ ಗೋವುಗಳಿಗೆ ಆಸರೆಯಾದ ಶ್ರೀ ಸುಬ್ರಹ್ಮಣ್ಯ ಮಠ

11:32 PM Jul 09, 2019 | mahesh |

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಶ್ರೀ ಸಂಪುಟ ನರಸಿಂಹಸ್ವಾಮೀ ಮಠಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಮಠದ ಯತಿ ಶ್ರೀ ವಿದ್ಯಾಪ್ರಸನ್ನತೀರ್ಥರು ಸಂತಶ್ರೇಷ್ಠರು ಮಾತ್ರವಲ್ಲ, ರೈತರ ಮೆಚ್ಚಿದ ಗುರು ಕೂಡ ಆಗಿದ್ದಾರೆ. ಮಠದಲ್ಲಿ ಗೋ ಸಂರಕ್ಷಣೆಯ ಶ್ರೇಷ್ಠ ಕಾರ್ಯವನ್ನು ಹಲವು ವರ್ಷಗಳಿಂದ ಯತಿಗಳು ನಡೆಸುತ್ತ ಬರುತ್ತಿದ್ದಾರೆ.

Advertisement

ಸಂಪುಟ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮಠದಲ್ಲಿ ದೇಸಿ ಗೋವಿನ ಪ್ರಪಂಚವಿದೆ. ಗೋವಿನ ಸಾಮ್ರಾಜ್ಯವೇ ಇಲ್ಲಿದೆ. ಶ್ರೀಪಾದರಿಗೆ ಗೋವುಗಳ ಮೇಲೆ ಅಗಾಧ ಪ್ರೀತಿ. ಅವುಗಳ ರಕ್ಷಣೆಯಾಗಬೇಕೆನ್ನುವುದು ಅವರ ಹಂಬಲ ಮತ್ತು ಉದ್ದೇಶ. ಇದೇ ಕಾರಣಕ್ಕೆ ಮಠದಲ್ಲಿ ಗೋ-ಪೋಷಣೆಗೆ ಒತ್ತು ನೀಡಿದ್ದಾರೆ.

180ಕ್ಕೂ ಅಧಿಕ ಗೋವು
ಮಠದ ವತಿಯಿಂದ ಮೂರು ಕಡೆ ಗೋ ಕೇಂದ್ರಗಳನ್ನು ತೆರೆದಿದ್ದಾರೆ. ಸಕಲೇಶಪುರದ ಆಲೂರು ತಾ| ಹೊಸಕೋಟೆ ಹೋಬಳಿ ಕೇಂದ್ರದ ಬಾಳ್ಳುಪೇಟೆಯ ಗೋಶಾಲೆಯಲ್ಲಿ 30, ಕಡಬ ತಾ| ಮರ್ದಾಳ ಗೋ ಕೇಂದ್ರದ ಹಟ್ಟಿಯಲ್ಲಿ 55, ಸುಬ್ರಹ್ಮಣ್ಯ ಶ್ರೀ ಮಠದ ಹಟ್ಟಿಯಲ್ಲಿ 95 ಹೀಗೆ 180ಕ್ಕೂ ಅಧಿಕ ಗೋವುಗಳನ್ನು ಮಠದ ವತಿಯಿಂದ ಸಾಕಲಾಗುತ್ತಿದೆ. ಕಸಾಯಿಖಾನೆ ಸೇರುವ ರಾಸುಗಳನ್ನು ರಕ್ಷಿಸಿ ತಂದು ಸಾಕುತ್ತಾರೆ. ಸಾಕಲು ಸಾಧ್ಯವಾಗದೆ ಮಠಕ್ಕೆ ಕೊಡುವ ಜಾನುವಾರುಗಳೂ ಇಲ್ಲಿ ನೆಮ್ಮದಿಯ ನೆಲೆ ಕಂಡಿವೆ. ಹಸುಗಳು, ಹೋರಿಗಳು ಹಾಗೂ ಕರುಗಳೂ ಇಲ್ಲಿವೆ.

ಜರ್ಸಿ ದೇಸಿ ತಳಿಗಳು
ಮಠದಲ್ಲಿ 15 ವರ್ಷಗಳಿಂದ ಗೋಂಸಂತತಿ ರಕ್ಷಣೆ ಕಾರ್ಯವನ್ನು ಮಾಡಲಾಗುತ್ತಿದೆ. ಜರ್ಸಿ ದೇಸಿ ತಳಿಗಳನ್ನು ಮಠದಲ್ಲಿ ಸಾಕುತ್ತಿದ್ದಾರೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಾರಣ ಹೆಚ್ಚಾಗಿ ದೇಶಿಯ ತಳಿಗಳೇ ಮಠದ ಹಟ್ಟಿಯಲ್ಲಿವೆ. ಈಗ ಗೋ ಸಾಕಾಣೆಗೆ 16 ವರ್ಷ. ಹಟ್ಟಿಯಲ್ಲಿ 180ಕ್ಕೂ ಹೆಚ್ಚು ಗೋವುಗಳಿವೆ. ಅವುಗಳಲ್ಲಿ ಕಪಿಲ, ಗಿರ್‌, ರೆಡ್‌ಸಿಂಧಿ, ಜವಾರಿ, ಅಮೃತ ಮಹಲ್, ಹಳ್ಳಿಕಾರ್‌, ಥರ್ಪರ್‌ಕರ್‌, ಒಂಗೋಲೆ, ಕಾಸರಗೋಡು ಗಿಡ್ಡ, ಮಲೆನಾಡ ಗಿಡ್ಡ, ಬೆಚುರ್‌ ಕಾಂಕ್ರಜ್‌ ತಳಿಗಳು ಪ್ರಮುಖವಾದವುಗಳು. ವಿಶೇಷವಾಗಿ 60 ಹೋರಿಗಳು ಮಠದ ಹಟ್ಟಿಯಲ್ಲಿವೆ.

ಸಾಕಷ್ಟು ಆಹಾರ
ಮಠಕ್ಕೆ ಸೇರಿದ ಗೋಶಾಲೆ, ಹಟ್ಟಿಗಳಲ್ಲಿರುವ ಗೋವುಗಳು ಸ್ವತಂತ್ರವಾಗಿ ಲವಲವಿಕೆಯಿಂದ ಓಡಾಡುತ್ತಿರುತ್ತವೆ. ಯಾವುದೇ ಮೂಗುದಾರವಿಲ್ಲ. ಹೊಟ್ಟೆ ತುಂಬ ಮೇಯಲು ಹಸಿ ಹುಲ್ಲು ಹಿಂಡಿ ಮತ್ತೆ ಸಾಕಷ್ಟು ನೀರು ಇತ್ಯಾದಿ ಆಹಾರಗಳನ್ನು ಒದಗಿಸಲಾಗುತ್ತಿದೆ. ವಿಶಾಲವಾದ ಪ್ರದೇಶದಲ್ಲಿ ಗೋವಿಗಳಿಗೆಂದೇ ಹುಲ್ಲನ್ನು ಬೆಳೆಸಲಾಗುತ್ತಿದೆ. ಕಸಾಯಿಖಾನೆಯ ಕಟುಕರಿಗೆ ಬಲಿಯಾಗಬೇಕಿದ್ದ ಅದೆಷ್ಟೋ ಹೋರಿ, ದನ, ಕರುಗಳು ಮಠದ ಕೊಟ್ಟಿಗೆಯಲ್ಲಿ ನೆಮ್ಮದಿಯ ಬದುಕು ಕಂಡುಕೊಂಡಿವೆ.

Advertisement

ಅನ್ಯ ರಾಜ್ಯದ ಕಾರ್ಮಿಕರು
ಹಟ್ಟಿ ನೋಡಿಕೊಳ್ಳಲು ಗೋವುಗಳ ಆರೈಕೆಗೆ ಅನ್ಯ ರಾಜ್ಯಗಳ 10 ಹಿಂದಿ ಭಾಷಿಕ ಕಾರ್ಮಿಕರಿದ್ದಾರೆ. ಕಾರ್ಮಿಕರ ವೇತನ‌, ಗೋವುಗಳಿಗೆ ಆಹಾರ ಎಲ್ಲವು ಸೇರಿದಾಗ ದಿನವೊಂದಕ್ಕೆ 50,000 ರೂ. ಖರ್ಚಾಗುತ್ತಿದೆ. ಮಠದ ಗೋಶಾಲೆ ಹಾಗೂ ಹಟ್ಟಿಯಲ್ಲಿರುವ ದನಗಳಿಂದ ಗಂಜಳ, ಗೋಮೂತ್ರ ಸೆಗಣಿ ಸಾಕಷ್ಟು ದೊರೆಯುತ್ತದೆ. ಅವುಗಳನ್ನು ಮಠ ಹೊಂದಿರುವ ಕೃಷಿ ತೋಟಗಳಲ್ಲಿ ಸಾವಯವ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ.

ಶ್ರೀಗಳಿಗೆ ಆಕಳ ಪ್ರೀತಿ
ಅಕ್ಷರ, ಆಸರೆ, ಶಿಕ್ಷಣ, ಕಲೆಗಳ ಪುನರುಜ್ಜೀವನ, ಸಂಶೋಧನೆ, ಸಾಮಾಜಿಕ, ಪರಿಸರ ಕಾಳಜಿ ಹೊಂದಿರುವ ಶ್ರೀ ಮಠವು ಪುಣ್ಯಕೋಟಿ ಉಳಿಸುವ ಕೆಲಸಕ್ಕೆ 15 ವರ್ಷಗಳ ಹಿಂದೆಯೇ ಕೈ ಹಾಕಿದೆ. ಮಠದ ಗೋಶಾಲೆಯಲ್ಲಿ 2 ಲಕ್ಷ ರೂ. ಹೆಚ್ಚು ಬೆಲೆಬಾಳುವ ಪುಲ್ಲನೂರು ತಳಿಯ ಜತೆ ದುಬಾರಿ ಬೆಲೆಯ ಗೋವುಗಳೂ ಇವೆ. ಇವುಗಳನ್ನು ಮುದ್ದಿನಿಂದ ಸಾಕುತ್ತಿದ್ದಾರೆ. ಶ್ರೀ ಮಠದ ಯತಿಗಳು ಸಮಯವಿದ್ದಾಗಲೆಲ್ಲ ಆಕಳುಗಳ ಜತೆ ಕಾಲ ಕಳೆಯುತ್ತಾರೆ.

ಗೋವುಗಳನ್ನು ಮುದ್ದಿಸಿ ಪ್ರೀತಿ ಯನ್ನು ವ್ಯಕ್ತಪಡಿಸುತ್ತಾರೆ. ಮಠದ ಗೋ ಸಾಕಣೆಯ ಕೇಂದ್ರಗಳು ನಂದಗೋಕುಲವನ್ನು ನೆನಪಿಸುವಂತಿದೆ.

ದನಗಳನ್ನು ಸಾಕಿ ಸಂಪಾದನೆ ಮಾಡುವ ಉದ್ದೇಶ ಮಠಕ್ಕಿಲ್ಲ. ಆಕಳು, ಹೋರಿಗಳನ್ನು ಮಾರುವುದಿಲ್ಲ. ಸಾಕಲು ಅಸಾಧ್ಯವಾಗಿ ಮಠಕ್ಕೆ ಉಚಿತವಾಗಿ ನೀಡಿದರೆ ಸ್ವೀಕರಿಸುತ್ತಾರೆ. ಕೆಲವೊಮ್ಮೆ ಖರೀದಿಸಿ ತಂದು ಸಾಕುತ್ತಾರೆ. ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಎರಡು ಹೊತ್ತು ಹಾಲು ಕರೆಯುತ್ತಾರೆ. ನಿತ್ಯ 40ರಿಂದ 50 ಲೀ.ನಷ್ಟು ಹಾಲು ದೊರೆಯುತ್ತದೆ. ಇದನ್ನು ಮಠದಲ್ಲಿ ಅಭಿಷೇಕ, ಪೂಜೆ ಕೈಂಕರ್ಯಗಳಿಗೆ ಹಾಗೂ ಮಠದ ನಿತ್ಯದ ಕಾರ್ಯಗಳಿಗೆ ಬಳಸುತ್ತಾರೆ. ಬಾಳ್ಳುಪೇಟೆಯಲ್ಲಿ ಗೋಶಾಲೆಯಲ್ಲಿ ದೊರಕುವ ಹಾಲನ್ನು ಅಲ್ಲಿ ಬಳಸಿ ಉಳಿದುದನ್ನು ಡೇರಿಗೆ ನೀಡುತ್ತಾರೆ.

ನಿತ್ಯ 40-50 ಲೀ. ಹಾಲು ಸಂಗ್ರಹ
ದನಗಳನ್ನು ಸಾಕಿ ಸಂಪಾದನೆ ಮಾಡುವ ಉದ್ದೇಶ ಮಠಕ್ಕಿಲ್ಲ. ಆಕಳು, ಹೋರಿಗಳನ್ನು ಮಾರುವುದಿಲ್ಲ. ಸಾಕಲು ಅಸಾಧ್ಯವಾಗಿ ಮಠಕ್ಕೆ ಉಚಿತವಾಗಿ ನೀಡಿದರೆ ಸ್ವೀಕರಿಸುತ್ತಾರೆ. ಕೆಲವೊಮ್ಮೆ ಖರೀದಿಸಿ ತಂದು ಸಾಕುತ್ತಾರೆ. ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಎರಡು ಹೊತ್ತು ಹಾಲು ಕರೆಯುತ್ತಾರೆ. ನಿತ್ಯ 40ರಿಂದ 50 ಲೀ.ನಷ್ಟು ಹಾಲು ದೊರೆಯುತ್ತದೆ. ಇದನ್ನು ಮಠದಲ್ಲಿ ಅಭಿಷೇಕ, ಪೂಜೆ ಕೈಂಕರ್ಯಗಳಿಗೆ ಹಾಗೂ ಮಠದ ನಿತ್ಯದ ಕಾರ್ಯಗಳಿಗೆ ಬಳಸುತ್ತಾರೆ. ಬಾಳ್ಳುಪೇಟೆಯಲ್ಲಿ ಗೋಶಾಲೆಯಲ್ಲಿ ದೊರಕುವ ಹಾಲನ್ನು ಅಲ್ಲಿ ಬಳಸಿ ಉಳಿದುದನ್ನು ಡೇರಿಗೆ ನೀಡುತ್ತಾರೆ.

ಗೋಸಂರಕ್ಷಣೆ ಯೋಜನೆ

ಭಾರತೀಯರಿಗೆ ಅತ್ಯಂತ ಪವಿತ್ರವಾದ ಜೀವ ಎಂದರೆ ಗೋವು. ನಾವೆಲ್ಲ ಅದನ್ನು ಮಾತೃಸಮಾನ ಎಂದು ಒಪ್ಪಿಕೊಂಡಿದ್ದೇವೆ. ಗೋವುಗಳು ಮತ್ತು ವೃಷಭಗಳನ್ನು ಸಂರಕ್ಷಣೆ ಮಾಡುವಂತದ್ದು ನಮ್ಮ ಕರ್ತವ್ಯ. ಮನೆಮನೆಗಳಲ್ಲಿ ಪ್ರಾತಃಕಾಲ ತುಳಸಿ ಪೂಜೆ ಅನಂತರ ಗೋವಿಗೆ ನಮಸ್ಕಾರ ಮಾಡಬೇಕೆನ್ನುವ ಸಂಸ್ಕಾರ ನಮ್ಮ ದೇಶದ್ದು. ಪ್ರತಿಯೊಬ್ಬರೂ ಗೋಸಾಕಾಣೆ ಮಾಡುವುದು ಈ ಕಾಲದಲ್ಲಿ ಕಷ್ಟ. ಧಾರ್ಮಿಕ ಕೇಂದ್ರಗಳು ಈ ಕೆಲಸವನ್ನು ಮಾಡದೇ ಇದ್ದಲ್ಲಿ ಕರ್ತವ್ಯ ಲೋಪವಾಗುತ್ತದೆ. ಈ ಕಾರಣಕ್ಕೆ ಕೃಷಿ ಸಂಸ್ಕೃತಿ ಉಳಿಸಲು ಮಠದ ವತಿಯಿಂದ ಗೋ ಸಂರಕ್ಷಣೆ ಯೋಜನೆಯನ್ನು ಜಾರಿಗೆ ತಂದಿದ್ದೇವೆ.
– ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮಠ
Advertisement

Udayavani is now on Telegram. Click here to join our channel and stay updated with the latest news.

Next