Advertisement
ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರ ಹೇಳಿಕೆ ಸಮರ್ಥಿಸಲು ಬೆಂಗಳೂರಿನ ಖಾಸಗಿ ಹೊಟೆಲ್‌ನಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ, ಸಚಿವ ವಿನಯ್ ಕುಲಕರ್ಣಿ, ಶಾಸಕ ಬಿ.ಆರ್. ಪಾಟೀಲ್, ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ. ಜಾಮದಾರ, ಡಾ. ಜಯಣ್ಣ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಈ ನಾಯಕರು ಸಿದ್ದಗಂಗಾ ಶ್ರೀಗಳ ಪತ್ರಿಕಾ ಹೇಳಿಕೆಯನ್ನು ಸಂಪೂರ್ಣ ವಿರೋಧಿಸಲಿಕ್ಕಾಗದೇ, ಎಂ.ಬಿ. ಪಾಟೀಲರ ಹೇಳಿಕೆಯನ್ನು ಅಲ್ಲಗಳೆಯಲಾಗದೇ ಸಂದಿಗ್ಧ ಪರಿಸ್ಥಿತಿ ಎದುರಿಸುವಂತಾಯಿತು.
Related Articles
Advertisement
ಒಂಬೈನೂರು ವರ್ಷಗಳ ಹಿಂದೆಯೇ ಕೊಂಡಿ ಮಂಚಣ್ಣರು ಬಸವಣ್ಣನನ್ನು ನೆಮ್ಮದಿಯಾಗಿರಲು ಬಿಟ್ಟಿರಲಿಲ್ಲ. ಈಗ ಎಂ.ಬಿ. ಪಾಟೀಲ್ ಯಾವ ಮರದ ಎಲೆ. ಆದರೆ, ಷಡ್ಯಂತ್ರ ಮಾಡುವವರ ವಿರುದ್ಧ ಲಕ್ಷಾಂತರ ಎಂ.ಬಿ. ಪಾಟೀಲರಿದ್ದೇವೆ. ಎಂ.ಬಿ. ಪಾಟೀಲರ ಬಗ್ಗೆ ಮಾತನಾಡುವ ಸೋಮಣ್ಣ ಶಾಸಕ ಆಗುವ ಮೊದಲು ಏನಾಗಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಸಮಾಜದ ದಾರಿ ತಪ್ಪಿಸುವ ಷಡ್ಯಂತ್ರ ರೂಪಿಸಿರುವ ಸೋಮಣ್ಣ ಈ ಸಮಾಜಕ್ಕೆ ದ್ರೋಹ ಮಾಡಿದಂತೆ ಎಂದು ವಾಗ್ಧಾಳಿ ನಡೆಸಿದರು.
ಬಸವರಾಜ್ ಹೊರಟ್ಟಿ ಕೂಡ, ಎಂ.ಬಿ. ಪಾಟೀಲರ ಹೇಳಿಕೆಯನ್ನು ಬೆಂಬಲಿಸಿ, ಸಿದ್ದಗಂಗಾ ಮಠದಿಂದ ಒಂದೇ ದಿನ ಎರಡು ಪತ್ರಿಕಾ ಪ್ರಕಟಣೆಗಳು ಬಂದಿದ್ದು, ಎರಡನೇ ಪತ್ರಿಕಾ ಪ್ರಕಟಣೆಯಲ್ಲಿ ಸ್ವಾಮೀಜಿಯ ಹೇಳಿಕೆಯನ್ನು ತಿರುಚಿದ್ದಾರೆ ಎಂದು ಆರೋಪಿಸಿದರು. ಹೇಳಿಕೆ ಬರೆದಿರುವುದರ ಹಿಂದೆ ಬೇರೆಯವರ ಕೈವಾಡ ಇದೆ.
ಸ್ವಾಮೀಜಿಯ ಹೇಳಿಕೆ ಮತ್ತು ಪತ್ರಿಕಾ ಪ್ರಕಟಣೆ ಎರಡನ್ನೂ ನಾವು ಅಲ್ಲಗಳೆಯುವುದಿಲ್ಲ. ಅವರ ಹೆಸರನ್ನು ದುರುಪಯೋಗಪಡಿಕೊಂಡು ದಾರಿ ತಪ್ಪಿಸುವ ಪ್ರಯತ್ನ ನಡೆದಿದೆ. ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಯಾರೂ ಸ್ವಾಮೀಜಿಯನ್ನು ಎಳೆದು ತರುವ ಪ್ರಯತ್ನ ಮಾಡಬಾರದು ಎಂದು ಮನವಿ ಮಾಡಿಕೊಂಡರು.
ಕ್ಷಮೆ ಕೇಳಿದ ಹೊರಟ್ಟಿ: ಸ್ವಾಮೀಜಿಯ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ಶಿವ ಕುಮಾರ ಅವರು ಆಡಳಿತಾಧಿಕಾರಿ ಎಂದು ಪತ್ರಿಕಾಗೋಷ್ಠಿ ನಡೆಸುವವರು ಸಮರ್ಥಿಸಿಕೊಂಡಿದ್ದರು. ಆದರೆ, ಅವರು ಅಟೆಂಡರ್ ಎಂಬ ಮಾತು ಕೇಳಿ ಬಂದಾಗ ಅವರು ಯಾರಾದರೇನು ನಮಗೆ ಅವರ ಹೇಳಿಕೆ ಮುಖ್ಯವೆಂದು ನಾಯಕರು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದರು. ಅಟೆಂಡರ್ ಹೇಳಿಕೆಯನ್ನು ಸಮರ್ಥಿಸುವ ನೀವು ಸ್ವಾಮೀಜಿಯ ಹೇಳಿಕೆ ಬಗ್ಗೆ ವಿರೋಧಿಸುತ್ತಿದ್ದೇರೇಕೆ ಎಂಬ ಪ್ರಶ್ನೆಗೆ ಎಲ್ಲರೂ ಗೊಂದಲಕ್ಕೊಳಗಾದರು. ಆ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡ ಶಾಸಕ ಬಿ.ಆರ್.ಪಾಟೀಲ್ ನಿಮ್ಮ ಎಲ್ಲ ಪ್ರಶ್ನೆಗೂ ಉತ್ತರ ಕೊಡಬೇಕಾಗಿಲ್ಲ ಎಂದು ಹೇಳಿದರು. ಅವರ ಹೇಳಿಕೆಯಿಂದ ಪತ್ರಕರ್ತರು ಅವರ ಮಾತನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದರು. ನಂತರ ಬಸವರಾಜ್ ಹೊರಟ್ಟಿ ಕ್ಷಮೆ ಯಾಚಿಸಿ, ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಯಾರೂ ಸಿದ್ದಗಂಗಾ ಶ್ರೀಗಳನ್ನು ಎಳೆದು ತರುವುದು ಬೇಡ ಎಂದು ಮನವಿ ಮಾಡಿಕೊಂಡರು.
ಡಾ. ಜಯಣ್ಣ ಎಂ.ಬಿ ಪಾಟೀಲ್ ಆಪ್ತ ಹೇಳಿದ್ದು:ಸೆಪ್ಟಂಬರ್ 10 ರಂದು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರು ತುಮಕೂರಿನಲ್ಲಿ ನಡೆದ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಬೆಂಗಳೂರಿಗೆ ಬರುವಾಗ ನಾನೂ ಅವರೊಂದಿಗೆ ಇದ್ದೆ. ಶ್ರೀಮಠದಿಂದ ಕರೆ ಮಾಡಿ, ಸ್ವಾಮೀಜಿ ಭೇಟಿ ಮಾಡಿ ಪ್ರಸಾದ ತೆಗೆದುಕೊಂಡು ಹೋಗಬೇಕೆಂದು ಹೇಳಿದ್ದಾರೆ. ತಕ್ಷಣ ಪಾಟೀಲರು ಮಠಕ್ಕೆ ತೆರಳಿದಾಗ ಸ್ವಾಮೀಜಿ ಪೂಜೆಗೆ ಹೋಗಿದ್ದರು, ಅವರು ಬರುವಷ್ಟರಲ್ಲಿ ಪಾಟೀಲರು ಪ್ರಸಾದ ತೆಗೆದುಕೊಂಡು ಬಂದು ಸ್ವಾಮೀಜಿಯವರು ಜೊತೆಗೆ ಮಾತನಾಡುತ್ತಾರೆ. ಸ್ವಾಮೀಜಿ ಲಿಂಗಾಯತ ಸ್ವತಂತ್ರ ಧರ್ಮ ಆಗಬೇಕೆಂದು ಹೇಳುತ್ತಾರೆ. ಈ ಬಗ್ಗೆ ಸ್ವಾಮೀಜಿಯ ಸೇವಕ ಆರಾಧ್ಯ ಎನ್ನುವವರು, ಸ್ವಾಮೀಜಿ ಅವರು ಲಿಂಗಾಯತ ಪ್ರತ್ಯೇಕ ಆಗಬೇಕು ಅನ್ನುತ್ತಿದ್ದಾರೆ ಎಂದಾಗಲೂ ಲಿಂಗಾಯತ ಧರ್ಮ ಆಗಬೇಕು, ವೀರಶೈವ ಇತ್ತೀಚಿನದು ಎಂದು ಅದೇ ಮಾತನ್ನು ಪುನರುಚ್ಚರಿಸಿದ್ದಾರೆ. ಸ್ವಾಮೀಜಿ ಹೇಳಿಕೆಯನ್ನು ಕೇಳಿ ಎಂ.ಬಿ. ಪಾಟೀಲ್ ಬಾವುಕರಾಗಿ ಸ್ವಾಮೀಜಿ ನಿಮ್ಮ ಆಶೀರ್ವಾದ ಆಯಿತು. ಈಗ ನನ್ನ ಜೀವನ ಪಾವನ ಆಯಿತು. ಇನ್ನು ಮುಂದೆ ನನ್ನ ಜೀವನವನ್ನು ಈ ಹೋರಾಟಕ್ಕೆ ಮೀಸಲಿಡುತ್ತೇನೆ ಎಂದು ಎಂ.ಬಿ. ಪಾಟೀಲ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಶಿವಕುಮಾರ ಸ್ವಾಮೀಜಿ ಯಾವ ನಾಯಕರನ್ನು ಬೆಳೆಸುವ ಅಥವಾ ತುಳಿಯುವ ಕೆಲಸ ಮಾಡಿಲ್ಲ. ರಾಜಕೀಯ ನಾಯಕರು ಮಠವನ್ನು ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಹೇಳಿದರು. ವೀರಶೈವ ಲಿಂಗಾಯತ ಎರಡೂ ಒಂದಾಗಬೇಕೆಂಬ ಮಾತುಕತೆ ಆರಂಭವಾಗಿದೆ. ಅವರು ನಮ್ಮ ಮಾತುಗಳಿಗೆ ಬೆಲೆ ಕೊಟ್ಟರೆ, ಹೊಂದಿಕೊಂಡು ಹೋಗುತ್ತೇವೆ ಇಲ್ಲದಿದ್ದರೆ, ನಮ್ಮ ಹೋರಾಟ ಪ್ರತ್ಯೇಕವಾಗಿ ಮುಂದುವರೆಯುತ್ತದೆ.
– ಬಸವರಾಜ ಹೊರಟ್ಟಿ, ಹಿರಿಯ ವಿಧಾನ ಪರಿಷತ್ ಸದಸ್ಯ ಎಂ.ಬಿ. ಪಾಟೀಲ್ ಹೇಳಿಕೆ ನೂರಕ್ಕೆ ನೂರು ಸತ್ಯ. ಸ್ವಾಮೀಜಿ ಬೆಂಬಲದಿಂದ ಸಂಘ ಪರಿವಾರದವರು ಆತಂಕಕ್ಕೊಳಗಾಗಿದ್ದಾರೆ. ಅದು ದೆಹಲಿಗೆ ಮುಟ್ಟಿಸಿ ತಕ್ಷಣ ಶ್ರೀಗಳ ಸಂದೇಶ ಬದಲಾಯಿಸುವಂತೆ ಒತ್ತಡ ತಂದಿದ್ದಾರೆ. ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸಿದವರೇ ಈ ಷಡ್ಯಂತ್ರ ನಡೆಸಿದ್ದಾರೆ. ಎಂ.ಬಿ ಪಾಟೀಲ್ ಸ್ವಂತಕ್ಕಾಗಿ ಈ ಹೋರಾಟ ನಡೆಸುತ್ತಿಲ್ಲ. ಈ ಬೆಳವಣಿಗೆಯಿಂದ ಅವರ ಕುಟುಂಬ ಸಾಕಷ್ಟು ನೊಂದಿದೆ. ನಾವೆಲ್ಲ ಅವರೊಂದಿಗಿದ್ದೇವೆ.
– ಬಿ.ಆರ್. ಪಾಟೀಲ್, ಶಾಸಕ ನಮ್ಮ ಹೋರಾಟವನ್ನು ಹತ್ತಿಕ್ಕಲು ನಮ್ಮ ತಂಡದ ನಾಯಕರನ್ನು ಬೇರ್ಪಡಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಎಂ.ಬಿ. ಪಾಟೀಲರನ್ನು ದೂರ ಮಾಡಿದರೆ ನಮ್ಮ ಹೋರಾಟ ನಿಂತು ಬಿಡುತ್ತದೆ ಎಂಬ ಭ್ರಮೆಯಲ್ಲಿ ಅವರಿದ್ದಾರೆ. ಈ ಘಟನೆಯಿಂದ ಎಂ.ಬಿ. ಪಾಟೀಲರ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ನಮ್ಮ ಈ ಹೋರಾಟ ನಿಲ್ಲುವುದಿಲ್ಲ.
– ಎಸ್.ಎಂ. ಜಾಮದಾರ, ನಿವೃತ್ತ ಐಎಎಸ್ ಅಧಿಕಾರಿ.