ಕುಂದಾಪುರ: ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಜನ್ಮದಿನಾಚರಣೆಯನ್ನು ವಿಶಿಷ್ಟ ಹಾಗೂ ವಿಭಿನ್ನವಾಗಿ ಆಚರಿಸಲಾಯಿತು.
ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಜತೆಗೂಡಿ ಗಾಂಧೀಜಿಯವರ 72*45 ಅಡಿ ವಿಸ್ತೀರ್ಣವುಳ್ಳ ಭಾವಚಿತ್ರವನ್ನು ರಂಗೋಲಿಯಲ್ಲಿ ಬಿಡಿಸಿದರು. ಕೊರೊನಾ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ 4 ಮಂಗಗಳ ಚಿತ್ರ ಬಿಡಿಸಿ ವ್ಯಾಕ್ಸಿನೇಷನ್, ಮಾಸ್ಕ್, ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರದ ಅಗತ್ಯತೆಯ ಸಂದೇಶ ಸಾರಲಾಯಿತು.
ಗಾಂಧೀಜಿಯವರ ಸರ್ವಧರ್ಮ ಸಮನ್ವಯತೆಯ ತತ್ವದಡಿ ಬಣ್ಣಬಣ್ಣದ ಹೂವುಗಳನ್ನು ಅಚ್ಚುಕಟ್ಟಾಗಿ ಜೋಡಿಸಿ, ಈ ರಂಗೋಲಿಯನ್ನು ಸಿಂಗರಿಸಲಾಯಿತು. ಹೂಗಳ ಸಂಗ್ರಹಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಹಿರಿದಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯು ಸಹ ತಮ್ಮ ಮನೆಯ ಪರಿಸರದಲ್ಲಿ ಬೆಳೆಯುವ ಬಗೆ – ಬಗೆಯ ಹೂವುಗಳನ್ನು ತಂದಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ:40 ದಿನಗಳಲ್ಲೇ ಎರಡು ಪದವಿ ಸೆಮಿಸ್ಟರ್ ಪರೀಕ್ಷೆ!
ಸಂಸ್ಥೆಯ ಚಿತ್ರಕಲಾ ಶಿಕ್ಷಕರಾದ ಬೇಬಿ ಎಸ್. ನಾಯಕ್ ಮತ್ತು ರಮೇಶ್ ಆರ್. ಅವರ ಪರಿಶ್ರಮವನ್ನು ಸಂಸ್ಥೆಯ ಪ್ರಾಂಶುಪಾಲ ಶರಣ ಕುಮಾರ ಶ್ಲಾಘಿಸಿದರು.