Advertisement

Lord Ram: ನನ್ನ ಆಡಳಿತಕ್ಕೆ ಶ್ರೀರಾಮನೇ ಪ್ರೇರಣೆ: ಪ್ರಧಾನಿ ಮೋದಿ

12:29 AM Jan 20, 2024 | Team Udayavani |

ಸೋಲಾಪುರ/ಚೆನ್ನೈ: “ಪ್ರಭು ಶ್ರೀರಾಮನ ಆಡಳಿತದ ತತ್ವವನ್ನೇ ನಾನು ಅಳವಡಿಸಿಕೊಂಡಿದ್ದೇನೆ. ನಮ್ಮದು ಪ್ರಾಮಾಣಿಕ ಆಡಳಿತವಾಗಿದೆ. ಮೋದಿಯ ಗ್ಯಾರಂಟಿ ಎಂದರೆ ಗ್ಯಾರಂಟಿಯು ಈಡೇರುವ ಗ್ಯಾರಂಟಿ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಶುಕ್ರವಾರ ಮಹಾರಾಷ್ಟ್ರದ ಸೋಲಾಪುರದಲ್ಲಿ 2 ಸಾವಿರ ಕೋಟಿ ರೂ. ಮೌಲ್ಯದ 8 ಅಮೃತ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿ, ಪ್ರಧಾನಮಂತ್ರಿ ಆವಾಸ ಯೋಜನೆಯಡಿ ನಿರ್ಮಾಣಗೊಂಡ 90 ಸಾವಿರ ಮನೆಗಳನ್ನು ಫ‌ಲಾನುಭವಿಗಳಿಗೆ ಹಸ್ತಾಂತರಿಸಿದ ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ.

“ನಮ್ಮ ಸರಕಾರದ ಮೂರನೇ ಅವಧಿಯ ಆಡಳಿತದಲ್ಲಿ ನಾನು ಭಾರತವನ್ನು ಜಗತ್ತಿನ ಟಾಪ್‌ 3ನೇ ಆರ್ಥಿಕತೆಯನ್ನಾಗಿ ಅಭಿವೃದ್ಧಿಪಡಿಸುತ್ತೇನೆ. ಇದಕ್ಕೆ ನಿಮ್ಮೆಲ್ಲರ ಬೆಂಬಲ ಅಗತ್ಯವಿದೆ. ಇದು ಮೋದಿಯ ಗ್ಯಾರಂಟಿಯಾಗಿದೆ’ ಎಂದೂ ಹೇಳುವ ಮೂಲಕ ಅವರು, ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೇರುವುದು ಖಚಿತ ಎಂಬ ಸಂದೇಶ ಸಾರಿದ್ದಾರೆ.

ಆವಾಸ್‌ಯೋಜನೆಯಡಿ ನಿರ್ಮಾಣವಾದ ಮನೆಗಳ ಬಗ್ಗೆ ಮಾತನಾಡುವ ವೇಳೆ ಭಾವುಕರಾದ ಮೋದಿ, ನಾನು ಯುವಕನಾಗಿದ್ದಾಗ ಇಂತಹ ಮನೆಯಲ್ಲಿ ವಾಸಿಸುವಂಥ ಅವಕಾಶ ಸಿಗಬೇಕೆಂದು ಕಾಯುತ್ತಿದ್ದೆ ಎಂದರು.

ತಮಿಳುನಾಡಿನಲ್ಲಿ ಮೋದಿ ರೋಡ್‌ಶೋ: ಶುಕ್ರವಾರ ಮಹಾರಾಷ್ಟ್ರ, ಕರ್ನಾಟಕ ಪ್ರವಾಸ ಮುಗಿಸಿ ತಮಿಳುನಾಡಿಗೆ ತೆರಳಿದ ಪ್ರಧಾನಿ ಮೋದಿ, ಚೆನ್ನೈಯಲ್ಲಿ ಖೇಲೋ ಇಂಡಿಯೂ ಯೂತ್‌ ಗೇಮ್ಸ್‌ ಉದ್ಘಾಟನೆಗೂ ಮುನ್ನ 4 ಕಿ.ಮೀ. ರೋಡ್‌ ಶೋ ನಡೆಸಿದರು.

Advertisement

ಇದೇ ವೇಳೆ ಪ್ರಸಾರ ಕ್ಷೇತ್ರಕ್ಕೆ ಸಂಬಂಧಿಸಿದ 250 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಪ್ರಧಾನಿ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ಅಲ್ಲದೇ ದೂರದರ್ಶನ ಪ್ರಾದೇಶಿಕ ಭಾಷೆಯ ಚಾನಲ್‌ “ಡಿಡಿ ಪೊಡಿಗೈ’ನ ಪರಿಷ್ಕೃತ ಆವೃತ್ತಿಯಾದ “ಡಿಡಿ ತಮಿಳ್‌’ಗೆ ಚಾಲನೆ ನೀಡಿದರು.

 ಇಂದು 3 ದೇಗುಲಗಳಿಗೆ ಭೇಟಿ

ಸೋಮವಾರದ ಪ್ರಾಣ ಪ್ರತಿಷ್ಠೆಗೂ ಮುನ್ನ ಪ್ರಧಾನಿ ಮೋದಿ, ತಮಿಳುನಾಡಿನ ಮೂರು ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಶನಿವಾರ ಮತ್ತು ರವಿವಾರ ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇಗುಲ, ಶ್ರೀ ಅರುಳ್‌ಮಿಗು ರಾಮನಾಥಸ್ವಾಮಿ ದೇಗುಲ ಮತ್ತು ಧನುಷ್ಕೋಡಿಯ ಕೋದಂಡರಾಮಸ್ವಾಮಿ ದೇವಾಲಯಕ್ಕೆ ಮೋದಿ ಭೇಟಿ ನೀಡಲಿದ್ದಾರೆ. ಕಂಬ ರಾಮಾಯಣದ ಸ್ತೋತ್ರಗಳನ್ನೂ ಅವರು ಆಲಿಸಲಿದ್ದಾರೆ. ಧನುಷ್ಕೋಡಿಯಲ್ಲಿ ರಾಮಸೇತುವಿದೆ ಎಂದು ಹೇಳಲಾದ ಅರಿಚಲ್‌ ಮುನೈಗೂ ಭೇಟಿ ನೀಡಲಿದ್ದಾರೆ. ಕಳೆದೊಂದು ವಾರದಿಂದ ಮೋದಿಯವರು ರಾಮಾಯಣದೊಂದಿಗೆ ಒಂದಿಲ್ಲೊಂದು ರೀತಿ ಸಂಬಂಧ ಹೊಂದಿರುವ ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next