ಮೈಸೂರು: ಸತತ ನಷ್ಟದ ಕಾರಣದಿಂದ ಸ್ಥಗಿತಗೊಂಡಿರುವ ಕೆ.ಆರ್.ನಗರ ತಾಲೂಕು ಚುಂಚನಕಟ್ಟೆಯ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಪುನಾರಂಭಿಸಲು ಸದ್ಯದಲ್ಲಿಯೇ ಟೆಂಡರ್ ಕರೆಯಲಾಗುವುದು ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ. ಮಹೇಶ್ ತಿಳಿಸಿದರು.
ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಪುನಾರಂಭ ಸಂಬಂಧ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಹಕಾರ ಇಲಾಖೆಯಲ್ಲಿ ಹೆಗ್ಗಣಗಳು ಸೇರಿಕೊಂಡಿರುವುದರಿಂದ ಸಹಕಾರ ಸಕ್ಕರೆ ಕಾರ್ಖಾನೆಗಳು ಪುನರುಜ್ಜೀವನವಾಗುತ್ತಿಲ್ಲ.
ಮಂಡ್ಯದ ಮೈಷುಗರ್ ಸಕ್ಕರೆ ಕಾರ್ಖಾನೆ, ಪಾಂಡವಪುರದ ಪಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಯದ್ದೂ ಇದೇ ಕತೆಯಾಗಿದೆ. ಹೀಗಾಗಿ ರೈತರ ಹಿತದೃಷ್ಟಿಯಿಂದ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು 40 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲು ನಿರ್ಧರಿಸಲಾಗಿದೆ ಎಂದರು.
ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ 215 ಮಂದಿ ಈಗ ನಿವೃತ್ತರಾಗಿದ್ದಾರೆ. ಕಾರ್ಖಾನೆಗೆ ಕಬ್ಬು ಪೂರೈಸಿದ್ದ ಬೆಳೆಗಾರರಿಗೆ ಬರಬೇಕಾಗಿದ್ದ ಬಾಕಿ ಹಣದಲ್ಲಿ 3.5 ಕೋಟಿ ರೂ. ಪಾವತಿಸಲಾಗಿದೆ. ಸರ್ಕಾರವೇ ಕಾರ್ಖಾನೆ ನಡೆಸಿದಲ್ಲಿ ರೈತರಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ.
ಹೀಗಾಗಿ ಖಾಸಗಿಯವರಿಗೆ ಗುತ್ತಿಗೆ ನೀಡಲು ನಿರ್ಧರಿಸಲಾಗಿದೆ. 1250 ಟನ್ ಕಬ್ಬು ಅರೆಯುವ ಸಾಮರ್ಥಯವನ್ನು ಹೊಂದಿರುವ ಈ ಕಾರ್ಖಾನೆ ವ್ಯಾಪ್ತಿಗೆ ಕೆ.ಆರ್.ನಗರ, ಹುಣಸೂರು, ಪಿರಿಯಾಪಟ್ಟಣ ಹಾಗೂ ಎಚ್.ಡಿ. ಕೋಟೆ ತಾಲೂಕುಗಳು ಬರುತ್ತದೆ ಎಂದು ಸಚಿವರು ಹೇಳಿದರು. ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.