ಉಡುಪಿ: ಉಡುಪಿ ಅಷ್ಟಮಠಗಳೊಳಗೆ ಉಂಟಾಗಿರುವ ಹೊಸ ಬೆಳವಣಿಗೆಯಲ್ಲಿ ಶೀರೂರು ಮಠಕ್ಕೆ ಉತ್ತರಾಧಿಕಾರಿ ನೇಮಿಸಲು ಇತರ ಏಳು ಮಠಾಧೀಶರು ಆಗ್ರಹಿಸಿದ್ದು, ಇಲ್ಲವಾದರೆ ಶೀರೂರು ಮಠದ ಪಟ್ಟದ ದೇವರನ್ನು ಹಿಂದಿರುಗಿಸಲಾಗದು ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಶೀರೂರು ಶ್ರೀಗಳ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ, ಹೇಳಿಕೆಯ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಅಷ್ಟಮಠಗಳ ಕೆಲವೊಂದು ನಿಯಮಕ್ಕೆ ಒಳಪಟ್ಟು ಶೀರೂರು ಶ್ರೀಗಳನ್ನು ಹೊರತುಪಡಿಸಿ ಇತರ ಏಳು ಮಠಾಧೀಶರೂ ಹಲವು ಸಭೆ ನಡೆಸಿದ್ದರು. ಕೆಲವು ಸಭೆಗಳಲ್ಲಿ ವಿದೇಶದಲ್ಲಿದ್ದ ಪುತ್ತಿಗೆ ಸ್ವಾಮೀಜಿ, ಸಂಚಾರದಲ್ಲಿದ್ದ ಪೇಜಾವರ ಸ್ವಾಮೀಜಿ, ಶೀರೂರು ಸ್ವಾಮೀಜಿಯವರೂ ಪಾಲ್ಗೊಂಡಿದ್ದರು. ಒಬ್ಬರು ಸ್ವಾಮೀಜಿಯವರು ಈ ಬಗ್ಗೆ ಶೀರೂರು ಶ್ರೀ ಜತೆಗೆ ಮಾತುಕತೆ ನಡೆಸಿ ಬಗೆಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದ ಕಾರಣ ಇತರ ಮಠಾಧೀಶರು ಮಾಧ್ಯಮಗಳಿಗೆ ನೇರ ಹೇಳಿಕೆ ನೀಡುವುದನ್ನು ನಿಲ್ಲಿಸಿದ್ದರು. ಆದರೆ ಇದಾವುದೂ ಫಲಕಾರಿಯಾಗಿಲ್ಲ ಎನ್ನಲಾಗಿದೆ. ಇತ್ತೀಚೆಗಿನ ಸಭೆ ರವಿವಾರ ನಡೆದಿದೆ.
ಅಷ್ಟ ಮಠಗಳ ನಿಯಮಾನುಸಾರ ಆಯಾ ಮಠದ ಪಟ್ಟದ ದೇವರ ಪೂಜೆಯನ್ನು ಅದೇ ಮಠದ ಸ್ವಾಮೀಜಿ ನಡೆಸಬೇಕು. ಇಲ್ಲವಾದರೆ ಇತರ ಮಠಗಳಲ್ಲಿ ಒಬ್ಬರು ಮಾಡಬೇಕು. ಸ್ವಲ್ಪ ಸಮಯದಿಂದ ಶೀರೂರು ಮಠದ ಪಟ್ಟದ ದೇವರು ಶ್ರೀಕೃಷ್ಣ ಮಠದಲ್ಲಿ ಇತರ ಮಠಾಧೀಶರಿಂದ ಪೂಜೆಗೊಳ್ಳುತ್ತಿದೆ. ಈಗ ಜವಾಬ್ದಾರಿಯುತ ಕಿರಿಯ ಸ್ವಾಮೀಜಿಯವರನ್ನು ಪೀಠಕ್ಕೆ ನೇಮಿಸುವುದಾದರೆ ಮಾತ್ರ ಪಟ್ಟದ ದೇವರನ್ನು ಕೊಡುವುದಾಗಿ ಇತರ ಮಠಾಧೀಶರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪೇಜಾವರ ಹಿರಿಯ ಶ್ರೀಪಾದರು ‘ನಾವು ಉಡುಪಿಯಲ್ಲಿ ಸದಾ ಕಾಲ ಇರುವುದಿಲ್ಲ. ಆದ್ದರಿಂದ ಇದರ ಬಗ್ಗೆ ಇತರ ಸ್ವಾಮೀಜಿಯವರು ನೋಡಿಕೊಳ್ಳುತ್ತಾರೆ’ ಎಂದು ಪ್ರತಿಕ್ರಿಯೆ ನೀಡಿದರು.
ಉತ್ತರಾಧಿಕಾರಿಯನ್ನು ನೇಮಿಸುವುದಾದರೂ ದ್ವಂದ್ವ ಮಠವಾದ ಸೋದೆ ಮಠಾಧೀಶರು ನೇಮಿಸಬೇಕು. ಆದರೆ ಇದಕ್ಕೆ ಶೀರೂರು ಸ್ವಾಮೀಜಿ ಒಪ್ಪುತ್ತಿಲ್ಲ ಎನ್ನಲಾಗಿದೆ. ಪರ್ಯಾಯ ಪಲಿಮಾರು ಸ್ವಾಮೀಜಿಯವರು ನೇಮಿಸಿದರೆ ಒಪ್ಪಬಹುದೆಂದು ಹೇಳಲಾಗುತ್ತಿದೆ. ‘ನಮ್ಮೊಳಗೆ ಬಗೆಹರಿಸಿಕೊಳ್ಳುತ್ತೇವೆ. ಇಲ್ಲವಾದರೆ ಕಾನೂನಿನ ಮೊರೆ ಹೋಗುತ್ತೇವೆ’ ಎಂದು ಸುದ್ದಿಗಾರರಿಗೆ ಶೀರೂರು ಸ್ವಾಮೀಜಿ ತಿಳಿಸಿದರು.
ಮಂಗಳವಾರ ಬೇರೆ ಪತ್ರಿಕಾಗೋಷ್ಠಿಯ ಸಂದರ್ಭ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಪರ್ಯಾಯ ಶ್ರೀ ಪಲಿಮಾರು ಮಠಾಧೀಶರು, ‘ಶೀರೂರು ಮಠದ ಪಟ್ಟದ ದೇವರಿಗೆ ನಾವು ಪೂಜೆ ಮಾಡುತ್ತಿದ್ದೇವೆ. ಮುಂದೆ ಏನು ಮಾಡಬೇಕೆಂದು ನಿರ್ಧಾರವಾಗಿಲ್ಲ. ಪೇಜಾವರ ಶ್ರೀಗಳೊಂದಿಗೆ ಚರ್ಚಿಸಿ ನಿರ್ಣಯ ತಳೆಯುತ್ತೇವೆ’ ಎಂದರು. ಪುತ್ತಿಗೆ ಶ್ರೀಗಳ ವಿಚಾರ ಕೇಳಿದಾಗ ‘ಅದು ಬೇರೆ ತೆರನಾದ ವಿಷಯ’ ಎಂದರು.