Advertisement

ಪುರಾತನ ಕಾಶಿಗೆ ನವೀನ ಮನೋಹರ ರೂಪ…ಹಳೆಯ ಸ್ಥಿತಿ ಹೇಗಿತ್ತು

02:33 PM Dec 14, 2021 | Team Udayavani |

ಹಿಂದಿನ ಕಾಶಿಯನ್ನು ಅಮೆರಿಕದ ಖ್ಯಾತ ಕಾದಂಬರಿಕಾರ ಮಾರ್ಕ್‌ ಟ್ವೈನ್, “ಬನಾರಸ್‌ ಇತಿಹಾಸಕ್ಕಿಂತಲೂ ಬಹಳ ಹಳತು, ಸಂಪ್ರದಾಯಗಳಿಗಿಂತ ಪುರಾತನವಾದದ್ದು, ದಂತಕಥೆಗಳನ್ನೂ ಮೀರಿಸುವಷ್ಟು ಗತಕಾಲದ್ದು, ಅದು ಹೇಗಿದೆಯೆಂದರೆ ಎಲ್ಲ ಪುರಾತನಗಳನ್ನು ಒಟ್ಟಾಗಿಟ್ಟರೆ ಎಷ್ಟು ಪುರಾತನವಾಗಿ ಕಾಣುವುದೋ, ಅದರ ದುಪ್ಪಟ್ಟು ಪುರಾತನವಾಗಿದೆ..’ ಎಂದು ಬಹಳ ಸುಂದರವಾಗಿ ವರ್ಣಿಸಿದ್ದಾರೆ. ಇಂತಹ ಕಾಶಿ ಈಗ ನವೀನವಾಗಿದೆ. ಅಕ್ಷರಶಃ ಚಿನ್ನದಂತೆ ಹೊಳೆಯುತ್ತ ಹೆಸರಿಗೆ ತಕ್ಕಂತೆ ಬದಲಾಗಿದೆ. ಅದರ ಹಳೆಯ ಸ್ಥಿತಿ ಹೇಗಿತ್ತು, ಈಗಿನ ಬದಲಾವಣೆಗಳೇನು? ಇಲ್ಲಿದೆ ವಿವರಣೆ.

Advertisement

ಗಿಜಿಗುಡುವುದಿಲ್ಲ, ಬಿಡಿಬಿಡಿಯಾಗಿದೆ
ಹೇಗಿತ್ತು?: ಕಾಶಿಯೆಂದರೆ ವಿಪರೀತ ಕಟ್ಟಡಗಳು, ಸಣ್ಣಪುಟ್ಟ ರಸ್ತೆಗಳು, ಜನರಿಂದ ಸದಾ ತುಂಬಿ ಗಿಜಿಗುಡುವ ನಗರ ಎಂಬ ಅರ್ಥವನ್ನೇ ಪಡೆದಿತ್ತು. ಅಷ್ಟು ಮಾತ್ರವಲ್ಲ ಬಹಳ ಕೊಳಕಾಗಿ, ಭಕ್ತರಿಗೆ ಕಿರಿಕಿರಿಯುಂಟು ಮಾಡುತ್ತಿತ್ತು. ಸಣ್ಣ, ಇಕ್ಕಟ್ಟಾದ ಮನೆಗಳಿದ್ದವು. ಅಲ್ಲೇ ಸಾವಿರಾರು ಮಂದಿ ವಾಸಿಸುತ್ತಿದ್ದರು. ಚರಂಡಿಗಳು ತುಂಬಿ ಹರಿಯುತ್ತಿದ್ದವು. ಶತಮಾನಗಳ ಹಿಂದಿನ ರಸ್ತೆಗಳಲ್ಲಿ ಬೀಡಾಡಿ ಹಸುಗಳು ತುಂಬಿಕೊಂಡು ಎಲ್ಲೆಂದರಲ್ಲಿ ಓಡಾಡುತ್ತಿದ್ದವು. ಇಡೀ ಪ್ರದೇಶಕ್ಕೆ ಅತ್ಯಮೂಲ್ಯ ಐತಿಹಾಸಿಕ ಮಹತ್ವವಿದ್ದರೂ ಕಟ್ಟಡಗಳು ದುರ್ಬಲವಾಗಿದ್ದವು. ಎಲ್ಲೆಂದರಲ್ಲಿ ಒತ್ತುವರಿಗಳ ದೃಶ್ಯ, ನಾಗರಿಕರಿಗೆ ಬೇಕಾಗಿರುವ ಮೂಲ ಸೌಲಭ್ಯಗಳಂತೂ ಬಹಳ ಕಳಪೆಯಾಗಿದ್ದವು.

ಹೇಗಾಗಿದೆ?: ದೇವಸ್ಥಾನದ ಅಕ್ಕಪಕ್ಕದಲ್ಲಿದ್ದ 1,400 ಅಂಗಡಿಗಳು, ಬಾಡಿಗೆದಾರರು, ಮನೆಗಳ ಮಾಲಕರನ್ನು ಒಪ್ಪಿಗೆಯಿಂದಲೇ ಜಾಗ ಖಾಲಿ ಮಾಡಿಸಲಾಗಿದೆ. ಹೆಚ್ಚಾಕಡಿಮೆ 300 ಆಸ್ತಿಗಳನ್ನು ವಶ ಮಾಡಿಕೊಳ್ಳಲಾಗಿದೆ. ಅವರಿಗೆ ಪರಿಹಾರವನ್ನೂ ನೀಡಲಾಗಿದೆ. ಪುನ ರ್ವಸತಿ ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ. ಒಂದನೇ ಹಂತದ ನಿರ್ಮಾಣದಲ್ಲಿ ಹೊಸತಾಗಿ 23 ಕಟ್ಟಡಗಳನ್ನು ನಿರ್ಮಿಸಲಾಗಿದೆ.

ವಿಶ್ವನಾಥ ವಿಸ್ತಾರವಾಗಿದ್ದಾನೆ
ಹೇಗಿತ್ತು?: ಹಿಂದೆ ದೇವಸ್ಥಾನದ ಆವರಣದ ಮೂರೂ ಮೂಲೆಗಳಲ್ಲಿ ಕಟ್ಟಡಗಳು ತುಂಬಿಕೊಂಡಿದ್ದವು. ಈ ಸಂಕೀರ್ಣದ ದಕ್ಷಿಣ ಭಾಗದಲ್ಲಿ ಒಂದು ದೊಡ್ಡ ಬಾಗಿಲಿತ್ತು. ಅಲ್ಲಿಂದಲೇ ಭಕ್ತರು ಪ್ರವೇಶ ಮಾಡಬೇಕಿತ್ತು. ಸ್ವತಃ ವಿಶ್ವನಾಥ 4 ಗೋಡೆಗಳ ನಡುವೆ ಬಂಧಿಯಾದಂತೆ ಕಂಡುಬರುತ್ತಿದ್ದ.

ಹೇಗಾಗಿದೆ?: ಈಗ ದೇವಸ್ಥಾನಕ್ಕೆ ನಿಕಟವಾಗಿದ್ದ ಕಟ್ಟಡಗಳನ್ನು ಕೆಡವ ಲಾಗಿದೆ. ಒತ್ತುವರಿಗಳ ಲೆಕ್ಕಾಚಾರಗಳನ್ನು ನಿರ್ನಾಮ ಮಾಡಲಾಗಿದೆ. ಚುನಾರ್‌ ಕಲ್ಲಿನಲ್ಲಿ 7 ದ್ವಾರಗಳನ್ನು ನಿರ್ಮಿಸಲಾಗಿದೆ. ಅದರಲ್ಲೊಂದು ಬೃಹತ್‌ ದ್ವಾರ ಗಂಗಾ ಘಟ್ಟಕ್ಕೆ ನೇರಪ್ರವೇಶ ನೀಡುತ್ತದೆ. ಹಾಗೆಯೇ ದೋಣಿಯ ಮೂಲಕ ಸಾಗಿ ದೇವಸ್ಥಾನವನ್ನು ಪ್ರವೇಶಿಸಲೆಂದೇ ಇನ್ನೊಂದು ದ್ವಾರ ನಿರ್ಮಿಸಲಾಗಿದೆ!

Advertisement

ಇದನ್ನೂ ಓದಿ:ಕಾಶಿ ವಿಶ್ವನಾಥ ಕಾರಿಡಾರ್‌ ಲೋಕಾರ್ಪಣೆ: ಹೂಮಳೆ.. ಹೂಮಳೆ.. ಹೂಗಳ ಸುರಿಮಳೆ!

ಕಾಶಿ ವಿಶ್ವನಾಥಪಥದ ವೈಶಿಷ್ಟ್ಯಗಳು
ಮಂದಿರದಿಂದ ಘಟ್ಟಕ್ಕೆ ನೇರಸಂಪರ್ಕ
ಗಂಗಾನದಿಯ ತಟದಲ್ಲಿ ವಿಶ್ವನಾಥ ಮಂದಿರವಿದೆ. ಅಲ್ಲಿ ವಿವಿಧ ಘಟ್ಟಗಳಿವೆ. ಈ ಗಂಗಾ ಘಟ್ಟಗಳಿಗೂ ವಿಶ್ವನಾಥನ ಮಂದಿರಕ್ಕೂ ನೇರ ಸಂಪರ್ಕ ವ್ಯವಸ್ಥೆ ಮಾಡಲಾಗಿದೆ.

ಭಕ್ತರ ನಿರಾತಂಕ ಓಡಾಟಕ್ಕೆ ದಾರಿ
ಈ ಹಿಂದೆ ಭಕ್ತರು, ಯಾತ್ರಿಕರು ಗಂಗಾಘಟ್ಟ ಗಳಲ್ಲಿ, ದೇವಸ್ಥಾನದಲ್ಲಿ ಒತ್ತೂತ್ತಾಗಿ ಓಡಾಡ ಬೇಕಿತ್ತು. ರಸ್ತೆಗಳು ಸಣ್ಣದಾಗಿದ್ದವು. ಈಗವರು ಆರಾಮಾಗಿ, ನಿರಾತಂಕವಾಗಿ ಸುತ್ತಬಹುದು.

ಭಾರತ ಮಾತೆ,ಶಂಕರಾಚಾರ್ಯರ ವಿಗ್ರಹ
ವಿಶ್ವನಾಥ ಧಾಮದಲ್ಲಿ ಕಲ್ಲಿನಲ್ಲಿ ಕೆತ್ತಿರುವ ಭಾರತಮಾತೆಯ ವಿಗ್ರಹವನ್ನು ನಿಲ್ಲಿಸಲಾಗಿದೆ. ಅದರ ಹಿಂಭಾಗದಲ್ಲಿ ಭಾರತದ ಹಿನ್ನೆಲೆಯನ್ನು ತೋರಿಸಲಾಗಿದೆ. ಹಾಗೆಯೇ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್‌, ಮಹಾನ್‌ ದಾರ್ಶನಿಕ ಶಂಕರಾಚಾರ್ಯರ ವಿಗ್ರಹಗಳನ್ನೂ ಸ್ಥಾಪಿಸಲಾಗಿದೆ.

3,000 ಚದರಡಿಯಿಂದ 5.50 ಲಕ್ಷ ಚದರಡಿಗೆ
ಹಿಂದೆ ಕಾಶಿ ದೇವಸ್ಥಾನವಿದ್ದದ್ದು ಕೇವಲ 3,000 ಚದರಡಿ ಜಾಗದಲ್ಲಿ. ಅಲ್ಲಿ ನವೀಕರಣ ಕಾರ್ಯವನ್ನು ಶುರು ಮಾಡಿದ ಅನಂತರ ಒಟ್ಟಾರೆ ವಿಸ್ತೀರ್ಣವನ್ನು 5.50 ಲಕ್ಷ ಚದರಡಿಗೆ ವಿಸ್ತರಿಸಲಾಗಿದೆ. ಒಟ್ಟು 23 ನೂತನ ಕಟ್ಟಡಗಳಿವೆ. ದೊಡ್ಡ ಮಾರಾಟಕೇಂದ್ರ, ಸಂಗ್ರಹಾಲಯ, ಬೃಹತ್‌ ಅಡುಗೆ ಮನೆ, ವೇದಗಳಿಂದ ತುಂಬಿರುವ ಗ್ರಂಥಾಲಯ, ಪ್ರಾಚೀನ ಗ್ರಂಥಗಳನ್ನಿಡುವ ಕೇಂದ್ರ, ನಗರ ಗ್ಯಾಲರಿ, ಅನ್ನ ಕೇಂದ್ರವನ್ನು ನಿರ್ಮಿಸಲಾಗಿದೆ.

ಸಪ್ತ ಮೋಕ್ಷನಗರಿಗಳಲ್ಲೊಂದು: ಉತ್ತರಪ್ರದೇಶದಲ್ಲಿರುವ ಕಾಶಿಯನ್ನು ಭಾರತದ ಪುರಾಣಗಳು ಏಳು ಮೋಕ್ಷನಗರಿಗಳಲ್ಲಿ ಒಂದು ಎಂದು ಬಣ್ಣಿಸುತ್ತವೆ.

300- ಪುನರ್ನಿರ್ಮಾಣದ ವೇಳೆ 300 ವರ್ಷಗಳ ಇತಿಹಾಸವಿರುವ, ಭೂಮಿಯೊಳಗೆ ಹುದುಗಿ ಹೋಗಿದ್ದ 41 ದೇವಸ್ಥಾನಗಳು ಸಿಕ್ಕಿದ್ದವು. ಇವನ್ನೆಲ್ಲ ಸಂರಕ್ಷಿಸಿಡಲಾಗಿದೆ.

339-
ಒಂದನೇ ಹಂತ ನಿರ್ಮಾಣಗಳಿಗಾಗಿ 339 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಒಟ್ಟಾರೆ ನಿರ್ಮಾಣ ಮುಗಿಯುವಾಗ 800 ಕೋಟಿ ರೂ. ವೆಚ್ಚವಾಗುತ್ತದೆ.

1,200- ಕಾಶಿಯ ರೂಪ ಬದಲಾವಣೆ ಮಾಡಲು ಇಷ್ಟು ಮಂದಿ ಕಾರ್ಮಿಕರು ಹಗಲೂರಾತ್ರಿ ದುಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next