ನಾಡಿನೆಲ್ಲೆಡೆ ಈಗ ನವರಾತ್ರಿಯ ಸಂಭ್ರಮ. ಈ ಹಬ್ಬವನ್ನು ದೇಶದೆಲ್ಲೆಡೆ ಅತ್ಯಂತ ವೈಭವ, ಸಡಗರಗಳಿಂದ ಆಚರಿಸಲಾಗುತ್ತಿದೆ. ದೇಶಾದ್ಯಂತ ಇರುವ ದುರ್ಗಾದೇವಿಯ ದೇವಾಲಯಗಳಲ್ಲಿ ಭಕ್ತರು ವಿಶೇಷ ಶ್ರದ್ಧಾಭಕ್ತಿಯಿಂದ ಶಕ್ತಿಮಾತೆಯ ಆರಾಧನೆಯಲ್ಲಿ ತೊಡಗಿದ್ದಾರೆ.
ನವರಾತ್ರಿಯ ಈ ಸಂದರ್ಭದಲ್ಲಿ ದೇಶದ ಒಂಬತ್ತು ಪ್ರಸಿದ್ಧ ದೇವಿ ದೇವಾಲಯಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುವ “ನವರಾತ್ರಿ- ನವದೇವಿ’ ಲೇಖನ ಮಾಲಿಕೆಯಲ್ಲಿ ಈ ದಿನ ಪಂಜಾಬ್‌ನ ಪಟಿಯಾಲಾದ ಶ್ರೀ ಕಾಳಿ ದೇವಿ ದೇಗುಲ.
ಪಂಜಾಬ್‌ನ ಪಟಿಯಾಲದ ಬಾರಾಂದರೀ ಗಾರ್ಡನ್‌ನ ಎದುರುಗಡೆ ಶ್ರೀ ಕಾಳಿ ಮಾತಾ ದೇಗುಲವಿದೆ. ಇಲ್ಲಿನ ಕಾಳಿ ದೇವಿಯೂ ಪಶ್ಚಿಮ ಬಂಗಾಲದ ನಂಟು ಹೊಂದಿರುವುದು ಈ ದೇವಾಲಯದ ವಿಶೇಷ. ಇಂದಿಗೂ ಇಲ್ಲಿನ ಹಿಂದೂ ಬಾಂಧವರು ಕಾಳಿ ಮಾತೆಯನ್ನು ಶ್ರದ್ಧಾಭಕ್ತಿಗಳಿಂದ ಕಾಳಿಯನ್ನು ಆರಾಧಿಸುತ್ತ ಬಂದಿದ್ದಾರೆ.
ಸಿಕ್ಖ್ ಪ್ರಾಂತವಾಗಿದ್ದ ಪಟಿಯಾಲಾದಲ್ಲಿ 1900ರಿಂದ 1938ರ ವರೆಗೆ ಮಹಾರಾಜನಾಗಿದ್ದ ಭೂಪಿಂದರ್ ಸಿಂಗ್ ದೇವಾಲಯಗಳನ್ನು ನಿರ್ಮಿಸುವಲ್ಲಿ ಬಹಳ ಆಸಕ್ತಿ ಹೊಂದಿದ್ದನು. ಅದರಂತೆ ಭೂಪಿಂದರ್ ಸಿಂಗ್ 1936ರಲ್ಲಿ ಪ್ರಾಂತದ ರಾಜಧಾನಿಯಲ್ಲಿ ಈ ಜಾಗವನ್ನು ಗುರುತಿಸಿ ದೇವಿ ದೇಗುಲವನ್ನು ನಿರ್ಮಿಸಿದನು. ಈ ದೇಗುಲದಲ್ಲಿ ಪ್ರತಿಷ್ಠಾಪಿಸಲೆಂದೇ ಮಹಾರಾಜ ಭೂಪಿಂದರ್ ವಿಶೇಷವಾಗಿ ಬಂಗಾಲದಿಂದ ಪಟಿಯಾಲಾಕ್ಕೆ 6 ಅಡಿ ಎತ್ತರದ ಕಾಳಿ ದೇವಿಯ ವಿಗ್ರಹ ಹಾಗೂ ಪಾವನ ಜ್ಯೋತಿಯನ್ನು ತರಿಸಿಕೊಂಡಿದ್ದನು. ಆ ಬಳಿಕ ಕಾಳಿ ಮಾತೆಗೆ ಎಮ್ಮೆಯನ್ನು ಮೊದಲ ಬಲಿಯಾಗಿ ನೀಡಿದ್ದೆನೆಂಬ ಉಲ್ಲೇಖ ಪಂಜಾಬ್‌ನ ಇತಿಹಾಸದಲ್ಲಿ ದಾಖಲಾಗಿದೆ.
ಈ ಪ್ರಾಚೀನ ದೇಗುಲ ಸಂಕೀರ್ಣದ ಕೇಂದ್ರ ಭಾಗದಲ್ಲಿ ಶ್ರೀ ರಾಜ ರಾಜೇಶ್ವರೀ ದೇವಿಯ ಗುಡಿಯೂ ಇದೆ. ವೈಶಿಷ್ಟéಪೂರ್ಣ ವಾಸ್ತುಶೈಲಿ, ಸುಸಜ್ಜಿತ ಮೂಲಸೌಕರ್ಯಗಳೊಂದಿಗೆ ನಿರ್ಮಾಣವಾಗಿರುವ ದೇಗುಲವನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲಾಗಿದೆ.
ಈ ದೇವಾಲಯವು ಅಪಾರ ಸಂಖ್ಯೆಯಲ್ಲಿ ಭಕ್ತರು ಹಾಗೂ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ದೇಗುಲಕ್ಕೆ ಹಿಂದೂ, ಸಿಕ್ಖ್ ಸಮುದಾಯಕ್ಕೆ ಸೇರಿದ ಭಕ್ತರು ಭೇಟಿ ನೀಡುತ್ತಾರೆ. ಇಲ್ಲಿ ವಿಶೇಷವಾಗಿ ದೇವಿಗೆ ಸಾಸಿವೆ ಎಣ್ಣೆ, ಮಸೂರ ಬೇಳೆ, ಸಿಹಿ ತಿಂಡಿ, ತೆಂಗಿನಕಾಯಿ ಅಲ್ಲದೆ ಆಡು, ಕೋಳಿ ಮತ್ತಿತರ ಮಾಂಸಾಹಾರ ಹಾಗೂ ಮದ್ಯವನ್ನು ಭಕ್ತರು ಸಮರ್ಪಿಸುವ ಮೂಲಕ ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಪ್ರಾರ್ಥಿಸುತ್ತಾರೆ.
ಕಾಳಿ ದೇವಿ ಈ ಪ್ರದೇಶದ ಹೆಚ್ಚಿನ ಹಿಂದೂ ಶ್ರದ್ಧಾಳುಗಳ ಕುಲದೇವರಾಗಿರುವ ಹಿನ್ನೆಲೆಯಲ್ಲಿ ನವರಾತ್ರಿಯ ಸಂದರ್ಭದಲ್ಲಿ ಪ್ರತಿನಿತ್ಯವೂ ಈ ದೇಗುಲದಲ್ಲಿ ವಿಶೇಷ ಪೂಜಾರ್ಚನೆಗಳು, ಭಕ್ತರಿಂದ ಹರಕೆ, ಸೇವೆಗಳ ಸಮರ್ಪಣ ಕಾರ್ಯ ನೆರವೇರುತ್ತದೆ. ಹೀಗಾಗಿ ನವರಾತ್ರಿಯ ಒಂಬತ್ತು ದಿನಗಳಲ್ಲಿಯೂ ಈ ದೇಗುಲಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.