Advertisement
ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವಿ ಸೂರ್ಯ ರವರ ವಿಶೇಷ ಪ್ರಯತ್ನದಿಂದ ನವದೆಹಲಿಗೆ ತೆರಳಿರುವ ನಗರದ 5 ಜನ ಠೇವಣಿದಾರರು, ಪ್ರಧಾನಿ ಶ್ರೀ ನರೇಂದ್ರ ಮೋದಿ ರವರನ್ನು ಭೇಟಿಯಾಗಿ ಧನ್ಯವಾದಗಳನ್ನು ಸಲ್ಲಿಸಿದ್ದು ವಿಶೇಷ. ದೇಶಾದ್ಯಂತ ಇರುವ 16 ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಗಳ ಠೇವಣಿದಾರರಿಗೆ, ಠೇವಣಿ ವಿಮೆ ಪಾವತಿಯಾದ ನಂತರದಲ್ಲಿ ‘ಡಿಪಾಸಿಟರ್ಸ್ ಫರ್ಸ್ಟ್’ ಕಾರ್ಯಕ್ರಮದ ಅಂಗವಾಗಿ ಮಾತನಾಡಿದ ಶ್ರೀ ನರೇಂದ್ರ ಮೋದಿಯವರು, 1 ಲಕ್ಷಕ್ಕೂ ಅಧಿಕ ಠೇವಣಿದಾರರು 1300 ಕೋಟಿ ರೂ, ಗಳಿಗೂ ಅಧಿಕ ಮೊತ್ತದ ಹಣವನ್ನು, ಠೇವಣಿ ಖಾತರಿ & ಸಾಲ ಖಾತರಿ ನಿಗಮ (ತಿದ್ದುಪಡಿ) ಮಸೂದೆ- 2021 ಅಡಿಯಲ್ಲಿ ವಿತರಿಸಿರುವ ಕುರಿತು ತಿಳಿಸಿದರು.
Related Articles
Advertisement
ವರ್ಚುವಲ್ ಸಭೆಯ ನಂತರ ಮಾತನಾಡಿದ ಸಂಸದ ತೇಜಸ್ವೀ ಸೂರ್ಯ, ” ಮಾನ್ಯ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಬ್ಯಾಂಕಿಂಗ್ ಕ್ಷೇತ್ರ & ಠೇವಣಿದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅನೇಕ ಸುಧಾರಣೆಗಳನ್ನು ಜಾರಿಗೆ ತಂದಿದ್ದು, ಕೇವಲ 1 ಲಕ್ಷ ವರೆಗೆ ಮಾತ್ರವಿದ್ದ ಠೇವಣಿ ವಿಮೆ ಮೊತ್ತವನ್ನು, 5 ಲಕ್ಷ ರೂ, ಗಳಿಗೆ ಏರಿಸುವುದರೊಂದಿಗೆ, ಕೋ-ಆಪರೇಟಿವ್ ಬ್ಯಾಂಕ್ ಗಳನ್ನು ಸಹ ಆರ್.ಬಿ.ಐ ವ್ಯಾಪ್ತಿಗೆ ತಂದು ಪಾರದರ್ಶಕತೆಗೆ ಅನುವು ಮಾಡಿಕೊಟ್ಟಿದ್ದು ಶ್ಲಾಘನೀಯ’ಎಂದರು.
ಈ ವರ್ಷದ ಆಗಸ್ಟ್ ನಲ್ಲಿ ಕೇಂದ್ರ ಸರಕಾರವು, 1961 ರ ಠೇವಣಿ ಖಾತರಿ ಮತ್ತು ಸಾಲ ಖಾತರಿ ನಿಗಮ ಮಸೂದೆಗೆ ತಿದ್ದುಪಡಿ ತಂದು, ಬ್ಯಾಂಕ್ ಗಳು ದಿವಾಳಿ ಹೊಂದಿದ 90 ದಿನಗಳ ಒಳಗಾಗಿ, ಠೇವಣಿದಾರರಿಗೆ 5 ಲಕ್ಷ ರೂ, ಗಳ ಠೇವಣಿ ವಿಮಾ ಮೊತ್ತ ಸಂದಾಯಗೊಳಿಸುವ ಕಾಯ್ದೆಯನ್ನು ಜಾರಿಗೆ ತಂದಿರುವುದರಿಂದ ಅಮೂಲಾಗ್ರ ಬದಲಾವಣೆಗೆ ಕಾರಣವಾಗಿದ್ದು, ಇದರಿಂದ ಶ್ರೀ ಗುರುರಾಘವೇಂದ್ರ ಬ್ಯಾಂಕ್ ನ 12,014 ಠೇವಣಿದಾರರು 90 ದಿನಗಳ ನಿಗದಿತ ಅವಧಿಪೂರ್ವದಲ್ಲಿಯೇ ಠೇವಣಿ ವಿಮೆ ಮೊತ್ತ ಪಡೆದಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ರಿಗೆ ಕೃತಜ್ಞತೆ ಸಲ್ಲಿಸುತ್ತೇನೆ “ ಎಂದರು.
ಡಿಪಾಸಿಟರ್ಸ್ ಫರ್ಸ್ಟ್’ ಸಮಾರಂಭದಲ್ಲಿ ಮಾತನಾಡಿದ ಮಾನ್ಯ ಪ್ರಧಾನಿಗಳು, ” ಕಳೆದ ಕೆಲವು ದಶಕಗಳಿಂದ ಸುಧಾರಣೆಗೆ ಒಡ್ಡಿಕೊಳ್ಳಬೇಕಾಗಿದ್ದ ಬ್ಯಾಂಕಿಂಗ್ ಕ್ಷೇತ್ರದ ಹಲವು ಸಮಸ್ಯೆಗಳಿಗೆ ನಮ್ಮ ಸರ್ಕಾರವು ಆಮೂಲಾಗ್ರ ಸುಧಾರಣೆಗಳನ್ನು ಜಾರಿಗೆ ತಂದಿದ್ದು, ಠೇವಣಿದಾರರ ಹಿತಾಸಕ್ತಿಗೆ ಸ್ಪಂದಿಸಿರುವುದು ಗಮನಾರ್ಹ. ಇದುವರೆಗೆ 1 ಲಕ್ಷಕ್ಕೂ ಅಧಿಕ ಠೇವಣಿದಾರರಿಗೆ 1300 ಕೋಟಿ ರೂ, ಗಳಿಗೂ ಅಧಿಕ ಮೊತ್ತದ ಠೇವಣಿ ವಿಮೆ ಮೊತ್ತ ಮರುಪಾವತಿಗೊಳಿಸಲಾಗಿದ್ದು, ಇನ್ನೂ 3 ಲಕ್ಷಕ್ಕೂ ಅಧಿಕ ಜನರೂ ಸಹ ತಮ್ಮ ಠೇವಣಿ ವಿಮೆ ಮೊತ್ತವನ್ನು ಪಡೆಯಲಿದ್ದಾರೆ. ಬ್ಯಾಂಕ್ ಗಳು ಕೆಲವೊಂದು ಕಾರಣಗಳಿಗಾಗಿ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳಬಹುದು,ಆದರೆ ಠೇವಣಿದಾರರ ಹಣಕ್ಕೆ ಯಾವುದೇ ರೀತಿಯ ತೊಂದರೆಗೆ ಅವಕಾಶಗಳಿಲ್ಲ. ಬ್ಯಾಂಕಿಂಗ್ ಕ್ಷೇತ್ರದ ವಿಶ್ವಾಸಾರ್ಹತೆಗೆ ಅಗತ್ಯ ಕಾನೂನುಗಳನ್ನು ಜಾರಿಗೆ ತರಲಾಗಿದೆ” ಎಂದು ತಿಳಿಸಿದರು.
ಠೇವಣಿ ವಿಮೆ ಮೊತ್ತವನ್ನು ವೃದ್ಧಿಗೊಳಿಸಿರುವುದರಿಂದ, ಹೂಡಿಕೆದಾರರ ಶೇ.98 ರಷ್ಟು ಮೊತ್ತವು ಸಂಪೂರ್ಣ ಮರುಪಡೆಯಲು ಶಕ್ತವಾಗಿದ್ದು,3 ಲಕ್ಷಕ್ಕೂ ಅಧಿಕ ಠೇವಣಿದಾರರು, ವಿಮೆ ಮೊತ್ತ ವನ್ನು ಪಡೆಯಲಿದ್ದಾರೆ. ಈ ವ್ಯವಸ್ಥೆಯಿಂದಾಗಿ 76 ಲಕ್ಷ ಕೋಟಿ ರೂ, ಗಳು ಸಂಪೂರ್ಣ ವಿಮೆಗೆ ಒಳಪಡಿಸಲಾಗಿದ್ದನ್ನು ಶ್ರೀ ನರೇಂದ್ರ ಮೋದಿಯವರು ಇದೇ ಸಂದರ್ಭದಲ್ಲಿ ವಿವರಿಸಿದರು.
“ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ಕೇಂದ್ರ ಸರ್ಕಾರಗಳಿಗೆ ವಿಮೆ ಮೊತ್ತವನ್ನು 1 ಲಕ್ಷದಿಂದ 5 ಲಕ್ಷಕ್ಕೆ ಏರಿಸುವಂತೆ ಮನವಿ ಸಲ್ಲಿಸಿದರೂ ಕೂಡ ಗಮನ ಹರಿಸಿರಲಿಲ್ಲ. ನಿಮ್ಮೆಲ್ಲರ ಸಹಕಾರದಿಂದ ಇಂದು ಠೇವಣಿ ವಿಮೆ ಮೊತ್ತವನ್ನು 5 ಲಕ್ಷಕ್ಕೆ ಏರಿಸಲು ಸಾಧ್ಯವಾಗಿದೆ ” ಎಂದರು.
ಇದೇ ಸಂದರ್ಭದಲ್ಲಿ, ಕೋ-ಆಪರೇಟಿವ್ ಬ್ಯಾಂಕ್ ಗಳನ್ನು ಆರ್.ಬಿ.ಐ ವ್ಯಾಪ್ತಿಗೆ ಒಳಪಡಿಸಿ, ಸಹಕಾರ ಕ್ಷೇತ್ರದಲ್ಲಿ ಠೇವಣಿದಾರರಿಗೆ ವಿಶ್ವಾಸಾರ್ಹತೆ ವೃದ್ಧಿಸಲು, ವಿಶೇಷವಾಗಿ ಸಹಕಾರ ಇಲಾಖೆಯನ್ನೇ ಹೊಸದಾಗಿ ಸ್ಥಾಪಿಸಲು ಕೈಗೊಂಡ ಕ್ರಮಗಳ ಬಗ್ಗೆ ನರೇಂದ್ರ ಮೋದಿರವರು ವಿವರಿಸಿದ್ದು ಗಮನಾರ್ಹ.
ಸಭೆಯಲ್ಲಿ ಪಾಲ್ಗೊಂಡಿದ್ದ ಶ್ರೀ ಗುರುರಾಘವೇಂದ್ರ ಬ್ಯಾಂಕ್ ನ ಇನ್ನೋರ್ವ ಠೇವಣಿದಾರರಾದ ಬಿ ಶ್ರೀಧರ್ ಬಾಬು ಮಾತನಾಡಿ, ” ಠೇವಣಿದಾರರೊಂದಿಗೆ ನೇರವಾಗಿ ಸಂಪರ್ಕಿಸಿ, ಅವರೊಂದಿಗೆ ಸ್ಪಂದಿಸುವ ಪ್ರಧಾನಿಯವರ ಈ ರೀತಿಯ ನಡುವಳಿಕೆ ದೇಶದ ಎಲ್ಲ ವರ್ಗದ ಜನತೆಯ ಕುರಿತಾಗಿ ಅವರಿಗಿರುವ ವಿಶೇಷ ಕಾಳಜಿ ಅರ್ಥ ಮಾಡಿಕೊಳ್ಳಬಹುದು. ನಮ್ಮ ಠೇವಣಿ ಮೊತ್ತ ಪಡೆದಿದ್ದು ಹಾಗೂ ಪ್ರಧಾನಿ ಶ್ರೀ ನರೇಂದ್ರ ಮೋದಿ ರವರನ್ನು ಭೇಟಿಯಾಗಿ ಅವರೊಂದಿಗೆ ಮಾತನಾಡುವ ಅವಕಾಶ ದೊರೆತಿದ್ದಕ್ಕೆ ನಿಜಕ್ಕೂ ಸಂತಸವಾಗುತ್ತಿದೆ ” ಎಂದು ವಿವರಿಸಿದರು.