ಮೊಂಗ್ ಕಾಕ್: ಮಹಿಳಾ ಎಮರ್ಜಿಂಗ್ ತಂಡಗಳ ಏಷ್ಯಾ ಕಪ್ ಕೂಟದಲ್ಲಿ ಭಾರತ ತಂಡವು ಶುಭಾರಂಭ ಮಾಡಿದೆ. ಆತಿಥೇಯ ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ ಭಾರತವು ಅತೀ ಸುಲಭ ಜಯ ಸಾಧಿಸಿದೆ. ಕನ್ನಡತಿ ಶ್ರೇಯಾಂಕಾ ಪಾಟೀಲ್ ಜಯದ ರೂವಾರಿಯಾದರು.
ಟಾಸ್ ಗೆದ್ದ ಭಾರತ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿತು. ಹಾಂಕ್ ಕಾಂಗ್ ತಂಡವು 14 ಓವರ್ ಗಳಲ್ಲಿ ಕೇವಲ 34 ರನ್ ಗಳಿಗೆ ಆಲೌಟಾದರೆ, ಭಾರತ ತಂಡ ಒಂದು ವಿಕೆಟ್ ಕಳೆದುಕೊಂಡು ಕೇವಲ ಐದು ಓವರ್ ಗಳಲ್ಲಿ ಗುರಿ ತಲುಪಿತು.
ಭಾರತದ ಬೌಲಿಂಗ್ ಎದುರು ಹಾಂಗ್ ಕಾಂಗ್ ಬ್ಯಾಟರ್ ಗಳು ಪರದಾಡಿದರು. ಆರಂಭಿಕ ಆಟಗಾರ್ತಿ ಮರಿಕೊ ಹಿಲ್ ಹೊರತುಪಡಿಸಿ ಉಳಿದ ಯಾವ ಬ್ಯಾಟರ್ ಗಳೂ ಎರಡಂಕಿ ಮೊತ್ತ ದಾಟಲು ವಿಫಲರಾದರು. ಮರಿಕೊ ಹಿಲ್ 14 ರನ್ ಮಾಡಿದರು.
ಇದನ್ನೂ ಓದಿ:ರೊಮ್ಯಾಂಟಿಕ್ ಆ್ಯಕ್ಷನ್ ‘ಲವ್..ಲಿ’ ಹಾಡು ಬಂತು
ಬಲಗೈ ಸ್ಪಿನ್ನರ್ ಆಗಿರುವ ಶ್ರೇಯಾಂಕಾ ಪಾಟೀಲ್ ಮೂರು ಓವರ್ ಬಾಲ್ ಹಾಕಿ ಕೇವಲ ಎರಡು ರನ್ ನೀಡಿ ಐದು ವಿಕೆಟ್ ಪಡೆದರು. ಅದರಲ್ಲೂ ಒಂದು ಓವರ್ ಮೇಡನ್ ಮಾಡಿದ್ದರು. ಐದು ವಿಕೆಟ್ ಗಳಲ್ಲಿ ಮೂರು ಬೌಲ್ಡ್ ಮತ್ತು ಒಂದು ಎಲ್ ಬಿಡಬ್ಲ್ಯೂ ಆಗಿದ್ದು ವಿಶೇಷ.
ಉಳಿದಂತೆ ಪರಶ್ವಿ ಚೋಪ್ರಾ ಮತ್ತು ಮನ್ನತ್ ಕಶ್ಯಪ್ ತಲಾ ಎರಡು ವಿಕೆಟ್, ತಿತಾಸ್ ಸಂಧು ಒಂದು ವಿಕೆಟ್ ಕಿತ್ತರು. ಶ್ರೇಯಾಂಕಾ ಪಾಟೀಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.