ಮಸ್ಕಿ: ಉಪ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಪ್ರಚಾರದ ವೇಳೆ ಕಾಂಗ್ರೆಸ್‌ನವರು ಗಲಾಟೆ, ಗದ್ದಲ ಎಬ್ಬಿಸುವ ಕೆಲಸ ಮಾಡುತ್ತಾರೆ ಆದರೆ ಬಿಜೆಪಿ ಕಾರ್ಯಕರ್ತರು ಇದಕ್ಕೆ ಎದೆಗುಂದಬಾರದು ಎಂದು ಸಚಿವ ಬಿ. ಶ್ರೀರಾಮುಲು ಹೇಳಿದರು.
ಪಟ್ಟಣದ ಬಸವೇಶ್ವರ ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್‌ಗೆ ಯಾವುದೇ ಭವಿಷ್ಯ ಇಲ್ಲ. ಅದೊಂದು ಮುಳುಗುವ ಹಡಗು, ಇಂತಹ ಪಕ್ಷದಿಂದ ದೇಶದ ಹಾಗೂ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ? ರೈತ ನಾಯಕ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಬೇಕು ಎಂಬ ಉದ್ದೇಶದಿಂದ ಪ್ರತಾಪಗೌಡ ಪಾಟೀಲ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದಿದ್ದಾರೆ.
ಅವರ ತ್ಯಾಗದಿಂದ ಇವತ್ತು ಬಿಜೆಪಿ ರಾಜ್ಯದಲ್ಲಿ ಅಧಿ ಕಾರ ನಡೆಸುತ್ತಿದೆ. ಉಪ ಚುನಾವಣೆಯಲ್ಲಿ ಪ್ರತಾಪಗೌಡ ಪಾಟೀಲ್ ಅವರನ್ನು ಹೆಚ್ಚಿನ ಮತಗಳಿಂದ ಆಯ್ಕೆ ಮಾಡಬೇಕು. ಅದಕ್ಕಾಗಿ ಕಾರ್ಯಕರ್ತರು ಪ್ರತಿ ಮತಗಟ್ಟೆಯಲ್ಲಿ ಸೈನಿಕರಂತೆ ಕೆಲಸ ಮಾಡಬೇಕು ಎಂದರು. ಸುರಪುರ ಶಾಸಕ ರಾಜುಗೌಡ ಮಾತನಾಡಿ, ಕಾಂಗ್ರೆಸ್ ಗೆದ್ದ ಹಾಗೂ ಸೋತ ಶಾಸಕರಿಗೆ ಮಾಡಲು ಕೆಲಸ ಇಲ್ಲಾ, ಹೀಗಾಗಿ ಅವರು ಉಪ ಚುನಾವಣೆ ಸಂದರ್ಭದಲ್ಲಿ ಮಸ್ಕಿಯಲ್ಲಿ ಬಂದು ಬೀಡು ಬಿಟ್ಟಿದ್ದಾರೆ.
ಕಾಂಗ್ರೆಸ್ ಕಸ ಇದ್ದಲ್ಲಿ ಏನೂ ಬೆಳೆ ಬೆಳೆಯುವುದಿಲ್ಲ ಎಂದ ಅವರು, ಪ್ರತಾಪಗೌಡ ಪಾಟೀಲರ ರಾಜೀನಾಮೆ ನೀಡಿದ್ದರಿಂದಲೇ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿ ಯಾಗಿದ್ದಾರೆ. ಶ್ರೀರಾಮುಲು ಸಚಿವರಾಗಿದ್ದಾರೆ. ಕ್ಷೇತ್ರದ ಮತದಾರರು ಈ ಬಾರಿ ಶಾಸಕರನ್ನು ಆಯ್ಕೆ ಮಾಡುತ್ತಿಲ್ಲ, ಒಬ್ಬ ಸಚಿವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದರು.
ಕ್ಷೇತ್ರದಲ್ಲಿ ಕಾಂಗ್ರೆಸ್ ಗುಂಡಾಗಳು ಗಲಾಟೆ ಮಾಡಲು ಬಂದರೆ ಅಂಜಬೇಡಿ, ನಾವು ನಿಮ್ಮ ಜತೆ ಇದ್ದೇವೆ, ಧೈರ್ಯವಾಗಿ ಕೆಲಸ ಮಾಡಿ ಪ್ರತಾಪಗೌಡ ಪಾಟೀಲರನ್ನು 20 ಸಾವಿರ ಮತಗಳಿಂದ ಆಯ್ಕೆ ಮಾಡಿ ಎಂದರು. ಸಂಸದರಾದ ಕರಡಿ ಸಂಗಣ್ಣ, ರಾಜಾ ಅಮರೇಶ್ವರ ನಾಯಕ, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಶಾಸಕರಾದ ಬಸವರಾಜ ಧಡೆಸೂಗೂರು, ಡಾ. ಶಿವರಾಜ ಪಾಟೀಲ್, ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ ಸೇರಿದಂತೆ ಇತರರು ಮಾತನಾಡಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಮಾನಂದ ಯಾದವ್, ಶಾಸಕ ಪರಣ್ಣ ಮನವಳ್ಳಿ, ಮಾಜಿ ಶಾಸಕ ಮಾನಪ್ಪ ವಜ್ಜಲ್, ಗಂಗಾಧರ ನಾಯಕ, ಬಸನಗೌಡ ಬ್ಯಾಗವಾಟ, ಎನ್. ಶಂಕರಪ್ಪ, ಶರಣಪ್ಪಗೌಡ ಜಾಡಲದಿನ್ನಿ, ರೈತ ಮುಖಂಡ ಹನುಮನಗೌಡ ಬೇಳಗಿರ್ಕಿ, ಬಿಜೆಪಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ ಸೇರಿದಂತೆ ಇತರರು ಇದ್ದರು.