ಧಾರವಾಡ : ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರಲು ವೃತ್ತಿ ಶಿಕ್ಷಣ ನೀಡಲು ಚಿಂತನೆ ನಡೆದಿದೆ, ರಾಜ್ಯದ ಪ್ರತಿಯೊಂದು ಕಂದಾಯ ವಿಭಾಗದಲ್ಲಿ ಒಂದರಂತೆ ನಾಲ್ಕು ಪಾಲಿಟೆಕ್ನಿಕ್ ಗಳನ್ನು ಈ ಉದ್ದೇಶಕ್ಕಾಗಿ ಪ್ರಾರಂಭಿಸಲಾಗುವುದು ಎಂದು ಕೈಮಗ್ಗ, ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ ಬಾಳಾಸಾಹೇಬ್ ಪಾಟೀಲ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಇಲಾಖೆಯ ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು,
ಅಲ್ಪಸಂಖ್ಯಾತರನ್ನು ಶಿಕ್ಷಣದ ಮೂಲಕವೇ ಸಮಾಜದ ಮುಖ್ಯ ವಾಹಿನಿಗೆ ತರಬೇಕು.ಈ ನಿಟ್ಟಿನಲ್ಲಿ ಮದರಸಾಗಳ ಶಿಕ್ಷಣ ಪದ್ಧತಿಯೊಂದಿಗೆ ಇತರ ನಿಗದಿತ ಪಠ್ಯಕ್ರಮಗಳನ್ನು ವಯಸ್ಸಿಗೆ ಅನುಗುಣವಾಗಿ ಬೋಧಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಇಲಾಖೆಯು ಅಗತ್ಯ ಕಾರ್ಯಕ್ರಮ ರೂಪಿಸಬೇಕು. ರಾಜ್ಯದ ಕೈಮಗ್ಗ ಹಾಗೂ ವಿದ್ಯುತ್ ಚಾಲಿತ ಮಗ್ಗಗಳ ನೇಕಾರರ ಬದುಕಿಗೆ ಆರ್ಥಿಕ ನೆರವು ನೀಡಲು ನೇಕಾರ ಸಮ್ಮಾನ್ ಯೋಜನೆಯಡಿ ಪ್ರತಿಯೊಂದು ನೇಕಾರ ಕುಟುಂಬಕ್ಕೆ ವಾರ್ಷಿಕ ತಲಾ 2 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು ಎಂದರು.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಕ್ತಾರ್ ಪಠಾಣ್ ಮಾತನಾಡಿ, ಅಲ್ಪಸಂಖ್ಯಾತರಿಗೆ ವೃತ್ತಿ ಶಿಕ್ಷಣ ನೀಡಬೇಕೆಂಬ ಸಚಿವರ ಕಾಳಜಿ ಅರ್ಥಪೂರ್ಣವಾಗಿದೆ.ಅಲ್ಪಸಂಖ್ಯಾತರ ಸಮುದಾಯದ ಸಂಸ್ಥೆಗಳು ಈ ನಿಟ್ಟಿನಲ್ಲಿ ಸಹಕಾರ ನೀಡಬೇಕು ಎಂದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿರ್ದೇಶಕ ಮೆಹಬೂಬ್ ಪಾಷಾ ಮಾತನಾಡಿ, ಧಾರವಾಡ ಜಿಲ್ಲೆಯು ಶೈಕ್ಷಣಿಕವಾಗಿ ಮುಂದುವರೆದ ಕೇಂದ್ರವಾಗಿದೆ.ಜಿಲ್ಲೆಯಲ್ಲಿ ಇಲಾಖೆಯ ಇನ್ನಷ್ಟು ಹಾಸ್ಟೇಲುಗಳ ಸ್ಥಾಪನೆ ಅಗತ್ಯವಿದೆ ಎಂಬುದು ಸರ್ಕಾರದ ಗಮನಕ್ಕೆ ಬಂದಿದೆ.ವಸತಿಶಾಲೆಗಳಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳ ಸಂಘ ರಚಿಸುವುದು ಅಗತ್ಯವಾಗಿದೆ ಎಂದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಬ್ದುಲ್ ರಷೀದ್ ಮಿರ್ಜಣ್ಣವರ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 4.5 ಲಕ್ಷ ಅಲ್ಪಸಂಖ್ಯಾತರ ಸಮುದಾಯದ ಜನಸಂಖ್ಯೆ ಇದೆ , ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಒಟ್ಟು ಶೇ.24 ರಷ್ಟು
ಪ್ರಮಾಣವಿದೆ.4 ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಗಳು, 3 ಮೌಲಾನಾ ಆಜಾದ್ ಆಂಗ್ಲ ಮಾದರಿ ಶಾಲೆಗಳು, 9 ಮೆಟ್ರಿಕ್ ನಂತರ ಹಾಸ್ಟೆಲ್ ಗಳು ಇವೆ. ಹಾಸ್ಟೆಲ್ ಗಳು ಪೀಠೋಪಕರಣ, ಬಿಸಿ ನೀರು, ಬಯೋ ಮೆಟ್ರಿಕ್, ಸಿಸಿ ಟಿವಿ, ಜಿಮ್ನಾಸ್ಟಿಕ್ಸ್, ಕ್ರೀಡಾ ಸಾಮಗ್ರಿಗಳನ್ನು ಹೊಂದಿವೆ.ನಿಗದಿತ ಪೌಷ್ಟಿಕ ಆಹಾರ ವಿತರಣೆಯಿಂದ ಇತರ ಜಿಲ್ಲೆಗಳಿಗೆ ಮಾದರಿಯಾಗಿವೆ . ಜಿಲ್ಲೆಯಲ್ಲಿ ಐದು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳು ಇವೆ ಎಂದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಕೆ ಆರ್ ಐ ಡಿ ಸಿ ಎಲ್ ಇಂಜನಿಯರುಗಳು, ವಕ್ಫ್ ಅಧಿಕಾರಿಗಳು, ಅಲ್ಪಸಂಖ್ಯಾತರ ಸಮುದಾಯದ ಸಂಘಟನೆಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.