ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿರುವ ಬಿಟ್‌ಕಾಯಿನ್ ಪ್ರಕರಣದ ಪ್ರಮುಖ ರೂವಾರಿ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಸದ್ಯದಲ್ಲೇ ಕೇಂದ್ರದ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಯಿದೆ.
ಈ ಮಧ್ಯೆ ಶ್ರೀಕಿ ವಿದೇಶ ಕಂಪನಿಯೊಂದನ್ನು ಹ್ಯಾಕ್ ಮಾಡಿ ಸಾವಿರಾರು ಕೋಟಿ ರೂ. ಗಳಿಸಿದ್ದಾನೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಕಳೆದ ವರ್ಷವೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶ್ರೀಕಿ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ಗೆ ಪತ್ರ ಬರೆದು ಕೋರಿದ್ದರು. ಈ ಹಿನ್ನೆಲೆಯಲ್ಲಿ ಆತನ ಸಂಪೂರ್ಣ ಮಾಹಿತಿಯನ್ನು ಇಡಿ ನೀಡಲಾಗಿದೆ. ಈ ವೇಳೆ ವಿದೇಶಿ ವ್ಯವಹಾರ ನಡೆಸಿರುವ ಮಾಹಿತಿ ದೊರೆತಿದೆ ಎಂದು ಹೇಳಲಾಗಿದೆ.
ಮತ್ತೂಂದೆಡೆ ಸಿಬಿಐ ಕೂಡ ದೇಶದ ವಿವಿಧೆಡೆ ಬಿಟ್‌ಕಾಯಿನ್ ವ್ಯವಹಾರದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದು, ರಾಜ್ಯದ ಬಿಟ್‌ಕಾಯಿನ್ ವ್ಯವಹಾರದಲ್ಲಿ ಭಾಗಿಯಾಗಿರುವವರ ಬಗ್ಗೆ ಪಟ್ಟಿ ಸಿದ್ದಪಡಿಸಿಕೊಂಡಿದೆ. ಈ ಪಟ್ಟಿಯ ಮೊದಲನಲ್ಲಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಹೆಸರು ಇದೆ. ಹೀಗಾಗಿ ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ನೆದರ್‌ಲ್ಯಾಂಡ್‌ನಲ್ಲಿ ಉನ್ನತ ವ್ಯಾಸಂಗ ಮುಗಿಸಿರುವ ಶ್ರೀಕಿಗೆ ಇಸ್ರೇಲ್, ಅಮೆರಿಕಾ ಸೇರಿ ಹತ್ತಾರು ವಿದೇಶಿ ಪ್ರಜೆಗಳು ಈತನ ಸಂಪರ್ಕದಲ್ಲಿದ್ದು, ಅವರು ಕೂಡ ಹ್ಯಾಕರ್ಸ್‌ಗಳಾಗಿದ್ದಾರೆ. ಈ ಸಂಪರ್ಕದ ಮೂಲಕವೇ ಇತ್ತೀಚೆಗೆ ಹಣ ವಿನಿಮಯ ಏಜೆನ್ಸಿಗಳ ಎರಡು ಜಾಲತಾಣಗಳನ್ನು ಹ್ಯಾಕ್ ಮಾಡಿ ಐದು ಸಾವಿರ ಬಿಟ್‌ಕಾಯಿನ್ ದೋಚಿದ್ದಾನೆ. ಈ ಬಿಟ್‌ಕಾಯಿನ್‌ಗಳ ಮೌಲ್ಯ 2,283 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಜತೆಗೆ ಅಮೆರಿಕಾದ ಹಣ ವಿನಿಮಯ ಏಜೆನ್ಸಿ ಬಿಟಿಸಿ ಇ ಡಾಡ್ ಕಾಮ್ ಜಾಲತಾಣ ಹ್ಯಾಕ್ ಮಾಡಿ, 1,370 ಕೋಟಿ ರೂ. ಗಳಿಸಿದ್ದಾನೆ. ನಂತರ ಬಿಟ್ ಫಿನಿಕ್ಸ್ ಜಾಲತಾಣ ಹ್ಯಾಕ್ ಮಾಡಿ ಸರ್ವರ್ ಅನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದ. ಅದಕ್ಕೆ ಇಬ್ಬರು ಇಸ್ರೇಲ್ ಹ್ಯಾಕರ್ಸ್‌ಗಳು ಸಹಕಾರ ನೀಡಿದ್ದರು ಎಂಬುದು ಗೊತ್ತಾಗಿದೆ. ಈ ಮೂಲಕ 913.33 ಕೋಟಿ ರೂ. ಮೌಲ್ಯದ 2000 ಬಿಟ್‌ಕಾಯಿನ್ ಸಂಪಾದಿಸಿದ್ದ.
ಇದನ್ನೂ ಓದಿ : ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾದ ಯೋಧಗೆ ಹೃದಯಸರ್ಶಿ ಸ್ಪಾಗತ
ಕೆಲ ದಿನಗಳಿಂದ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಬಿಟ್‌ಕಾಯಿನ್ ಪ್ರಕರಣದಲ್ಲಿ ಪ್ರಭಾವಿ ರಾಜಕೀಯ ಮುಖಂಡರು, ಅವರಮಕ್ಕಳು ಹೆಸರು ಕೇಳಿ ಬರುತ್ತಿದೆ. ಅವರೊಂದಿಗೆ ನೇರವಾಗಿ ಸಂಪರ್ಕ ಇಟ್ಟುಕೊಳ್ಳುತ್ತಿದ್ದರೂ ಶ್ರೀಕಿ ಅವರಿಗೆ ಬಿಟ್‌ಕಾಯಿನ್ ವ್ಯವಹಾರದ ಬಗ್ಗೆ ಪರೋಕ್ಷವಾಗಿ ಸಹಕಾರ ನೀಡಿದ್ದಾನೆ ಎಂಬುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ಶ್ರೀಕಿ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ
ಕಾಲೇಜು ದಿನಗಳಲ್ಲಿ ಹ್ಯಾಕಿಂಗ್
ಶ್ರೀಕೃಷ್ಣ ಕಾಲೇಜಿನ ದಿನಗಳಲ್ಲಿ ದೇಶ-ವಿದೇಶಿ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುವುದನ್ನು ಕರಗತ ಮಾಡಿಕೊಂಡಿದ್ದ. ಆಗಲೇ ರೂನೆಸ್ಕೆಪ್ ಡಾಟ್ ಕಾಮ್ ಗೇಮಿಂಗ್ ಸರ್ವರ್‌ವೊಂದನ್ನು ಹ್ಯಾಕ್ ಮಾಡಿ 7.48 ಕೋಟಿ ರೂ.ಗಳಿಸಿದ್ದ. ಅನಂತರ ಬೆಂಗಳೂರಿನ ಆತನ ಸ್ನೇಹಿತ ಸುನೀಶ್ ಹೆಗ್ಡೆ ಸಹಕಾರ ನೀಡಿದ ಮೇರೆಗೆ ಜಿಜಿ ಪೋಕರ್ ಗೇಮಿಂಗ್ ಸರ್ವರ್ ಹ್ಯಾಕ್ ಮಾಡಿ 41.22 ಕೋಟಿ ರೂ. ಗಳಿಸಿದ್ದ. ರಾಜ್ಯದ ಸರ್ಕಾರದ ಇ-ಸಂಗ್ರಹಣಾ ಪೋರ್ಟಲ್ ಹ್ಯಾಕ್ ಮಾಡಿ 46 ಕೋಟಿ ರೂ. ಗಳಿಸಿದ್ದ. ಈ ಪ್ರಕರಣ ಸಿಐಡಿ ತನಿಖೆ ನಡೆಸುತ್ತಿತ್ತು. ಈ ಮಧ್ಯೆ 2020ರ ನ.17ರಂದು ಸಿಸಿಬಿ ಪೊಲೀಸರು ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಬಂಧಿಸಿದಾಗ ಗೇಮಿಂಗ್ ಆ್ಯಪ್, ವೆಬ್‌ಸೈಟ್‌ಗಳ ಹ್ಯಾಕ್ ಮಾಡುತ್ತಿರುವ ಬೆಳಕಿಗೆ ಬಂದಿತ್ತು.