Advertisement

ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ ಪುಡಿ ಮಾಡಲು ಬಂದಿದೆ ಶ್ರೆಡ್ಡರ್‌ ಯಂತ್ರ

12:00 AM Jun 29, 2020 | Sriram |

ಉಡುಪಿ: ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ಗಳನ್ನು ಪುಡಿ ಮಾಡುವ ಮೂರು ಶ್ರೆಡ್ಡರ್‌ ಯಂತ್ರಗಳು ಉಡುಪಿ ಜಿಲ್ಲೆಗೆ ಬಂದಿವೆ. ಉಡುಪಿ ತಾಲೂಕಿನಲ್ಲಿ 80 ಬಡಗುಬೆಟ್ಟು ಗ್ರಾ.ಪಂ., ಕುಂದಾಪುರ ತಾಲೂಕಿನಲ್ಲಿ ವಂಡ್ಸೆ ಗ್ರಾ.ಪಂ., ಕಾರ್ಕಳ ತಾಲೂಕಿನಲ್ಲಿ ಹೆಬ್ರಿ ಗ್ರಾ.ಪಂ.ಗಳಿಗೆ ಶ್ರೆಡ್ಡರ್‌ ಯಂತ್ರಗಳು ಬಂದಿವೆ.

Advertisement

ಈ ಯಂತ್ರಗಳನ್ನು ತಾ.ಪಂ. ಮೂಲಕ ಖರೀದಿಸಿ ಆಯಾ ತಾಲೂಕಿನ ಒಂದು ಗ್ರಾ.ಪಂ.ಗೆ ನೀಡಲಾಗಿದೆ.

ಇದರ ವೆಚ್ಚ ಸುಮಾರು 4.3 ಲ.ರೂ. ಯಂತ್ರವು ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ ಮತ್ತು ಸ್ವಲ್ಪ ದಪ್ಪದ ಬ್ಯಾಗ್‌ಗಳನ್ನು 2ರಿಂದ 5 ಮಿ.ಮೀ. ಗಾತ್ರದಲ್ಲಿ ಪುಡಿ ಮಾಡುತ್ತದೆ. ಸಿಲ್ವರ್‌ ಕೋಟೆಡ್‌ ಪ್ಯಾಕೇಟ್‌, ಸಿಂಗಲ್‌ ಯೂಸ್ಡ್ ಕ್ಯಾರಿಬ್ಯಾಗ್‌ಗಳನ್ನು ಖರೀದಿಸುವವರಿಲ್ಲ. ಉಳಿದ ಪ್ಲಾಸ್ಟಿಕ್‌ಗಳನ್ನು ಪುಡಿ ಮಾಡುವುದಾದರೂ ಬೇರೆಲ್ಲೂ ಬೇಡಿಕೆ ಇಲ್ಲದ ಪ್ಲಾಸ್ಟಿಕ್‌ನ್ನು ಮುಖ್ಯವಾಗಿ ಗಮನದಲ್ಲಿರಿಸಿಕೊಂಡು ಶ್ರೆಡ್ಡರ್‌ ಯಂತ್ರವನ್ನು ತರಿಸಲಾಗಿದೆ. ಈ ಪುಡಿ ಮಾಡಿದ ಚೂರುಗಳನ್ನು ರಸ್ತೆ ಕಾಮಗಾರಿ ನಡೆಸುವಾಗ ಡಾಮರಿಗೆ ಮಿಶ್ರಣ ಮಾಡಿ ಬಳಸುತ್ತಾರೆ. ಅಲೆವೂರು, ಮರವಂತೆಯಲ್ಲಿ ಇಂತಹ ಪ್ರಯೋಗವೊಂದು ಇತ್ತೀಚೆಗೆ ನಡೆದಿದೆ. ಇದರಿಂದ ಸುಮಾರು 300 ಮೀ. ಉದ್ದದ ರಸ್ತೆ ಕಾಮಗಾರಿ ನಿರ್ವಹಿಸಲಾಗಿದೆ. ಇದರಿಂದ ದೊಡ್ಡ ಲಾಭವಿಲ್ಲದಿದ್ದರೂ ತ್ಯಾಜ್ಯವಾಗಿ ಉತ್ಪಾದನೆಯಾಗುವ ಪ್ಲಾಸ್ಟಿಕ್‌ ವಿಲೇವಾರಿಯಾಗುವುದೇ ದೊಡ್ಡ ಲಾಭವಾಗಿದೆ. ಪುಡಿ ಮಾಡಿದ ಪ್ಲಾಸ್ಟಿಕ್‌ನ್ನು ಪ್ಲಾಸ್ಟಿಕ್‌ ತಯಾರಿ ಸುವ ಘಟಕಗಳು ಮರು ಬಳಸಲೂ ಖರೀದಿಸುತ್ತವೆ. ಇದನ್ನು ಖರೀದಿಸುವ ಎನ್‌ಜಿಒಗಳೂ ಇವೆ.

ವಂಡ್ಸೆಯಲ್ಲಿ
ವಂಡ್ಸೆಯಲ್ಲಿ ಮೂರು ತಿಂಗಳ ಹಿಂದೆಯೇ ಯಂತ್ರ ಬಂದಿದೆ. ಇಲ್ಲಿ ಈಗಾಗಲೇ 1 ಟನ್‌ ಆಗುವಷ್ಟು ಪ್ಲಾಸ್ಟಿಕ್‌ನ್ನು ಪುಡಿ ಮಾಡಿ ಇಡಲಾಗಿದೆ. ಪ್ಲಾಸ್ಟಿಕ್‌ ಮರುಬಳಸುವವರು ಖರೀದಿಸುವುದಾದರೆ ಪುಡಿ ಮಾಡಿದ ಪ್ಲಾಸ್ಟಿಕ್‌ನ ಸಾಗಣೆ ಸುಲಭಸಾಧ್ಯ.

80 ಬಡಗುಬೆಟ್ಟಿನಲ್ಲಿ
80 ಬಡಗಬೆಟ್ಟು ಗ್ರಾ.ಪಂ.ನಲ್ಲಿ ಈಗಷ್ಟೆ ಶ್ರೆಡ್ಡರ್‌ ಯಂತ್ರ ಬಂದಿದೆ. ಇದು 20 ಎಚ್‌ಪಿ ಸಾಮರ್ಥ್ಯದ ಮೋಟಾರ್‌ ಹೊಂದಿದೆ. ಸದ್ಯ ಐದು ಮೆಗಾವ್ಯಾಟ್‌ ವಿದ್ಯುತ್‌ ಇದ್ದು 15 ಮೆಗಾವ್ಯಾಟ್‌ ವಿದ್ಯುತ್‌ ಅಗತ್ಯವಿದೆ. ಹೀಗಾಗಿ ವಿದ್ಯುತ್‌ ಸಂಪರ್ಕವಾದ ಬಳಿಕ ಕಾರ್ಯಾರಂಭ ಮಾಡಲಿವೆ. ಮಣಿಪಾಲ ಪ್ರಗತಿ ನಗರದ ಬಳಿ ಇರುವ ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಇದರ ಸ್ಥಾಪನೆಯಾಗಲಿದ್ದು ಅಲ್ಲಿ ಪ್ಲಾಸ್ಟಿಕ್‌ ಬ್ಯಾಗ್‌ಗಳನ್ನು ಸಂಸ್ಕರಿಸಲಾಗುವುದು.

Advertisement

ಹೆಬ್ರಿಯಲ್ಲಿ
ಹೆಬ್ರಿ ಗ್ರಾ.ಪಂ.ನಲ್ಲಿ ಶ್ರೆಡ್ಡರ್‌ ಯಂತ್ರ ಬಂದಿದೆ. ಆದರೆ ಇದನ್ನು ಜೋಡಿಸಿಲ್ಲ. ತ್ರಿಫೇಸ್‌ ವಿದ್ಯುತ್‌ ಜೋಡಿಸಲು ಕ್ರಮ ವಹಿಸಲಾಗಿದೆ. ಇದಾದ ಬಳಿಕ ಅಕ್ಕಪಕ್ಕದ ಗ್ರಾ.ಪಂ.ಗಳ ಪ್ಲಾಸ್ಟಿಕ್‌ಗಳನ್ನೂ ಸೇರಿಸಿ ಪುಡಿ ಮಾಡುವ ಕೆಲಸ ಆರಂಭವಾಗಲಿದೆ.

ಪ್ರತಿ ತಾಲೂಕಿಗೆ ಒಂದು ಯಂತ್ರ
ಪ್ರತೀ ತಾಲೂಕಿಗೆ ಒಂದೊಂದು ಶ್ರೆಡ್ಡರ್‌ ಯಂತ್ರವನ್ನು ತಾ.ಪಂ. ಮೂಲಕ ಒದಗಿಸಲಾಗಿದೆ. ಇದರಿಂದ ಎಲ್ಲಿಯೂ ಬೇಡಿಕೆ ಇಲ್ಲದ ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ಗಳನ್ನು ಪುಡಿ ಮಾಡಿ ಅದನ್ನು ರಸ್ತೆಗೆ ಬಳಸುವ ಪ್ರಯೋಗ ಈಗಾಗಲೇ ಅಲೆವೂರು, ಮರವಂತೆಯಲ್ಲಿ ನಡೆದಿದೆ. ಪ್ರತಿ ಗ್ರಾ.ಪಂ.ನಲ್ಲಿ ಇಂತಹ ಒಂದು ರಸ್ತೆಯನ್ನು ನಿರ್ಮಿಸಬೇಕೆಂದು ಗ್ರಾ.ಪಂ. ಆಡಳಿತಗಳಿಗೆ ಸೂಚಿಸಲಾಗಿದೆ. ಆಯಾ ತಾಲೂಕಿನ ಗ್ರಾ.ಪಂ.ಗಳು ತಮ್ಮಲ್ಲಿ ಎಸ್‌ಎಲ್‌ಆರ್‌ಎಂ ಘಟಕದಿಂದ ಸಂಗ್ರಹಗೊಂಡ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ಗಳನ್ನು ಶ್ರೆಡ್ಡರ್‌ ಯಂತ್ರವಿರುವ ಸ್ಥಳಕ್ಕೆ ತಂದು ಪುಡಿ ಮಾಡಿಕೊಂಡು ಹೋಗಿ ರಸ್ತೆ ಕಾಮಗಾರಿ ನಡೆಸಬೇಕೆಂಬ ಇರಾದೆ ಇದೆ.
-ಪ್ರೀತಿ ಗೆಹ್ಲೋತ್‌ , ಜಿ.ಪಂ. ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next