Advertisement

Mangaluru: ಪ್ಲಾಸ್ಟಿಕ್‌ಗಿದೆ ಪರ್ಯಾಯ, ಮನಸು ಬೇಕಷ್ಟೆ!

01:17 PM Oct 29, 2024 | Team Udayavani |

ಮಹಾನಗರ: ಏಕಬಳಕೆಯ ಪ್ಲಾಸ್ಟಿಕ್‌ಗಳನ್ನು 2022ರ ಜುಲೈ 1ರಿಂದ ಜಾರಿಗೆ ದೇಶಾದ್ಯಂತ ಜಾರಿಗೆ ಬರುವಂತೆ ನಿಷೇಧಿಸಲಾಗಿದ್ದರೂ ಅದಿನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ. ಬದಲಾಗಿ ಪ್ಲಾಸ್ಟಿಕ್‌ ಬೇರೆ ಬೇರೆ ರೂಪಗಳಲ್ಲಿ ಆವರಿಸುತ್ತಲೇ ಇದೆ. ಪ್ಲಾಸ್ಟಿಕ್‌ ಇಲ್ಲದೆ ಬದುಕೇ ಇಲ್ಲ, ವ್ಯಾಪಾರವೇ ಇಲ್ಲ ಎನ್ನುವ ಮಟ್ಟಿಗೆ ಅದರ ಆವಾಹನೆ ನಡೆದಿದೆ. ನಿಜವೆಂದರೆ, ಹಿಂದೆ ಪ್ಲಾಸ್ಟಿಕ್‌ ಇಲ್ಲದೆಯೂ ಜೀವನ ನಡೆದಿದೆ, ಈಗಲೂ ಪ್ಲಾಸ್ಟಿಕ್‌ಗೆ ಹಲವು ಪರ್ಯಾಯಗಳು ನಮ್ಮ ಮುಂದಿವೆ. ಆದರೆ ಅವುಗಳನ್ನು ಬಳಸುವ ಮನಸ್ಸನ್ನು ನಾವು ಮಾಡಿಕೊಳ್ಳಬೇಕು ಅಷ್ಟೆ.

Advertisement

ಪ್ಲಾಸ್ಟಿಕ್‌ ಕ್ಯಾಂಡಿ ಸ್ಟಿಕ್‌ಗಳು, ಕಪ್‌ಗ್ಳು, ಚಮಚಗಳು, ಫೋರ್ಕ್‌ಗಳು, ಟ್ರೇಗಳು, ಕ್ಯಾರಿ ಬ್ಯಾಗ್‌ಗಳು ಸಹಿತ ಹಲವು ವಸ್ತುಗಳು ನಮ್ಮ ನಡುವೆ ಹಾಸುಹೊಕ್ಕಾಗಿರುವುದು ನಿಜ. ಆದರೆ ಅದರ ಬದಲಾಗಿ ಬಳಸಬಹುದಾದ ಹಲವು ವಸ್ತುಗಳು ನಮ್ಮ ನಡುವೆ ಇವೆ. ಅವುಗಳಿಗೆ ಬೆಂಬಲ ನೀಡಿದರೆ ಖಂಡಿತವಾಗಿಯೂ ಪ್ಲಾಸ್ಟಿಕ್‌ ಬಳಕೆ ಕಡಿಮೆ ಆಗಿಯೇ ಆಗುತ್ತದೆ.

ಆದರೆ ಇದಕ್ಕೆ ಜನರು ಮತ್ತು ಆಡಳಿತ ಒಂದು ವ್ಯವಸ್ಥೆಯನ್ನು ಜಾರಿಗೆ ತರಬೇಕು. ಒಂದು ಕಡೆ ಪ್ಲಾಸ್ಟಿಕ್‌ ಬಳಕೆಯನ್ನು ಕಡ್ಡಾಯವಾಗಿ ನಿಯಂತ್ರಿಸುವ ಜತೆಗೆ ಇನ್ನೊಂದೆಡೆ ಪರ್ಯಾಯ ಬಳಕೆ ವಸ್ತುಗಳು ಮಾರುಕಟ್ಟೆಯಲ್ಲಿ ಸುಲಭದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಈ ಹಿಂದೆ ಹಲವಾರು ಬಾರಿ ಆಗಿರುವ ಪ್ಲಾಸ್ಟಿಕ್‌ ನಿಷೇಧ ಪ್ರಯತ್ನಗಳು ಯಶಸ್ಸು ಕಾಣದಿರಲು ಇದು ಕೂಡ ಕಾರಣ.

ಪರ್ಯಾಯ ಉತ್ಪನ್ನಗಳ ಕ್ಷೇತ್ರವನ್ನು ಅದ್ಯತೆಯ ನೆಲೆಯಲ್ಲಿ ಪರಿಗಣಿಸಿ ಅವುಗಳಿಗೆ ಉತ್ತೇಜನ ನೀಡುವ ಕಾರ್ಯ ಸರಕಾರದ ಕಡೆಯಿಂದ ಆಗಬೇಕಾಗಿದೆ. ನಿರುದ್ಯೋಗಿ ಯುವಕ ಯುವತಿಯರಿಗೆ ಪೇಪರ್‌ಬ್ಯಾಗ್‌, ಬಟ್ಟೆ ಕೈಚೀಲ ಹಾಗೂ ಇತರ ಪ್ಲಾಸ್ಟಿಕ್‌ ಮುಕ್ತ ಉತ್ಪನ್ನಗಳ ತಯಾರಿಕೆ ಉಚಿತ ತರಬೇತಿಗಳ ಆಯೋಜನೆ ಪೂರಕವಾಗಬಹುದು. ಮಹಿಳಾ ಸ್ವಸಹಾಯ ಸಂಘಗಳನ್ನು ಇದರಲ್ಲಿ ಬಳಸಬಹುದಾಗಿದೆ. ಘಟಕಗಳ ಸ್ಥಾಪನೆಗೆ ಸರಕಾರದಿಂದ ಅರ್ಥಿಕ ನೆರವು, ತೆರಿಗೆ ವಿನಾಯತಿ, ಕಚ್ಚಾವಸ್ತುಗಳು ಸುಲಭವಾಗಿ ಲಭ್ಯವಾಗುವಂತೆ ವ್ಯವಸ್ಥೆ, ಉತ್ಪನ್ನಗಳಿಗೆ ಮಾರುಕಟ್ಟೆ ಒದಗಣೆ, ಪ್ರಚಾರ ಮುಂತಾದ ಕ್ರಮಗಳು ಪರ್ಯಾಯ ಉತ್ಪನ್ನಗಳನ್ನು ಹೆಚ್ಚು ಜನಪ್ರಿಯಗೊಳಿಸಲು ಪೂರಕ ಆಗಲಿದೆ.

ಪ್ಲಾಸ್ಟಿಕ್‌ಗೆ ಪರ್ಯಾಯ ಯಾವುದು?
– ಪ್ಲಾಸ್ಟಿಕ್‌ ಕೈಚೀಲಗಳಿಗೆ ಬದಲಾಗಿ ಬಟ್ಟೆ, ಸೆಣಬಿನ ಚೀಲಗಳು
– ಪ್ಲಾಸ್ಟಿಕ್‌ ಸಿಹಿತಿಂಡಿ ಪೊಟ್ಟಣಕ್ಕೆ ಬದಲಾಗಿ ಪೇಪರ್‌ ಪೊಟ್ಟಣ
– ಪ್ಲಾಸ್ಟಿಕ್‌ ಇಯರ್‌ ಬಡ್‌ಗಳಿಗೆ ಬದಲಾಗಿ ಮರದ ಕಡ್ಡಿ
– ಧ್ವಜಗಳು, ಬ್ಯಾನರ್‌ಗಳನ್ನು ಬಟ್ಟೆಯಿಂದ ತಯಾರಿಸಬಹುದು
– ಪ್ಲಾಸ್ಟಿಕ್‌ ಬದಲು ಮರ, ಪೇಪರ್‌ನ ಕ್ಯಾಂಡಿ, ಐಸ್‌ ಕ್ರೀಂ ಸ್ಟಿಕ್‌
– ಪ್ಲಾಸ್ಟಿಕ್‌ ತಟ್ಟೆ, ಬಟ್ಟಲು, ಬೌಲ್‌ ಬದಲಾಗಿ ಅಡಿಕೆ ಹಾಳೆಯ ಉತ್ಪನ್ನ
– ಊಟ, ಉಪಾಹಾರಕ್ಕೆ ಬಳಸಿ ತಿನ್ನಬಹುದಾದ ಜೈವಿಕ ಸ್ಪೂನ್‌ಗಳಿವೆ
– ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್‌ ತಟ್ಟೆ, ಲೋಟದ ಬದಲು ದೊಡ್ಡ ಪ್ರಮಾಣದಲ್ಲಿ ಸ್ಟೀಲ್‌ ಲೋಟ, ತಟ್ಟೆಗಳು ಬಾಡಿಗೆಗೆ ಸಿಗುವಂತೆ ನೋಡಿಕೊಳ್ಳಬಹುದು.

Advertisement

ಅಡಿಕೆ ಹಾಳೆಯ ಉತ್ಪನ್ನಗಳಿಗೆ ಪ್ರಾಶಸ್ತ್ಯ
ಅಡಿಕೆ ಹಾಳೆಗಳು ನಿಷೇಧಿತ ಪ್ಲಾಸ್ಟಿಕ್‌ ವಸ್ತುಗಳಿಗೆ ಪ್ರಮುಖ ಪರ್ಯಾಯವಾಗುವ ಅವಕಾಶ ಹಾಗೂ ಸಾಮರ್ಥ್ಯವನ್ನು ಹೊಂದಿದೆ. ಊಟದ ತಟ್ಟೆ, ತಿಂಡಿ ತಟ್ಟೆ, ಬೌಲ್‌ಗ‌ಳು, ಐಸ್‌ಕ್ರೀಂ ಕಪ್‌ಗ್ಳು ಸೇರಿದಂತೆ ಈಗಾಗಲೇ ಅಡಿಕೆ ಹಾಳೆಯ ವಿವಿಧ ಉತ್ಪನ್ನಗಳು ಮಾರುಕಟ್ಟೆಗಳಲ್ಲಿ ಚಲಾವಣೆಯಲ್ಲಿವೆ. ಸಾರ್ವಜನಿಕ ಸಮಾರಂಭಗಳಲ್ಲಿ ಇವುಗಳನ್ನು ವಿಸ್ತೃತವಾಗಿ ಬಳಸಬಹುದು. ಜತೆಗೆ ಸ್ವೀಟ್‌ ಬಾಕ್ಸ್‌ಗಳುಗಳಿಗೂ ಹಾಳೆ ಬಳಸಬಹುದು.

ಅಡಿಕೆಯಂತೆಯೇ ಬಾಳೆ ಮತ್ತು ಅಡಿಕೆ ತ್ಯಾಜ್ಯಗಳಿಂದ ತಟ್ಟೆ ಹಾಗೂ ಕೈಚೀಲ ತಯಾರಿಸಬಹುದು.

ಮೀನು, ಊಟ ತರಲು ಬುತ್ತಿ, ಪಾತ್ರೆ ಬಳಕೆ
ಮೀನು, ಮಾಂಸ, ಹೊಟೇಲ್‌ನಿಂದ ಊಟ, ಪದಾರ್ಥ ಹಾಗೂ ಇತರ ಖಾದ್ಯಗಳಿಗೆ ಪೇಪರ್‌ ಅಥವಾ ಬಟ್ಟೆ ಬ್ಯಾಗ್‌ಗಳನ್ನು ಬಳಸಲಾಗದು. ಅದುದರಿಂದ ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಅಲ್ಯೂಮಿಯಂ, ಸ್ಟೀಲ್‌ ಬುತ್ತಿ, ನಿರ್ದಿಷ್ಟ ಪಾತ್ರೆಗಳನ್ನು ಬಳಸಬಹುದಾಗಿದೆ. ದ್ವಿಚಕ್ರ ವಾಹನಗಳು, ಕಾರುಗಳನ್ನು ಹೊಂದಿರುವವರು ತಮ್ಮ ವಾಹನಗಳಲ್ಲಿ ಇವುಗಳನ್ನು ಇಟ್ಟುಕೊಂಡು ಆವಶ್ಯಕತೆಗಳಿಗೆ ಬಳಸಬಹುದಾಗಿದೆ.

ಬ್ಯಾಗ್‌ ತಯಾರಿಕೆಗೆ ಹಲವು ಅವಕಾಶ
– ಬಟ್ಟೆ, ಪೇಪರ್‌, ಬಿದಿರು ಸೇರಿದಂತೆ ಪರಿಸರ ಸ್ನೇಹಿ ವಸ್ತುಗಳಿಂದ ಬ್ಯಾಗ್‌ ತಯಾರಿ
– ಕಬ್ಬಿನ ಸಿಪ್ಪೆ, ತರಕಾರಿ ತ್ಯಾಜ್ಯಗಳಿಂದ ತಯಾರಿಸಿದ ಬ್ಯಾಗ್‌ಗಳೂ ಲಭ್ಯ
– ಹಳೆಯ ಕರ್ಟನ್ಸ್‌, ಬ್ಲೌಸ್‌ ಪೀಸ್‌, ಬೆಡ್‌ ಶೀಟ್‌ಗಳಿಂದ ಬ್ಯಾಗ್‌ ತಯಾರಿಸಬಹುದು.
– ಕಾರ್ನ್ ಸ್ಟಾರ್ಚ್‌ , ಸಸ್ಯದ ನಾರುಗಳಿಂದ ಚೀಲ ತಯಾರಿ.

ಸಾರ್ವಜನಿಕರ ಅಭಿಪ್ರಾಯ
ಪರಿಸರ ಸ್ನೇಹಿ ಕೈಚೀಲ ವಿತರಣೆ
ನಮ್ಮ ಸಂಸ್ಥೆಯು 2 ವರ್ಷಗಳಿಂದ ಪರಿಸರ ಸ್ನೇಹಿ ಉತ್ಪನ್ನಗಳಾದ ಕೈ ಚೀಲ ತಯಾರಿಕ ಘಟಕವನ್ನು ಹೊಂದಿದ್ದು, 55 ಮಹಿಳೆಯರಿಗೆ ಕೈ ಚೀಲ ತಯಾರಿಕೆಯ ತರಬೇತಿ ನೀಡಿ ಪ್ರಮಾಣ ಪತ್ರವನ್ನು ನೀಡಿದ್ದೇವೆ. ಸ್ವೋದ್ಯೋಗಕ್ಕೆ ಬೆಂಬಲ ನೀಡಿ ಅವರು ತಯಾರಿಸಿದ ಕೈಚೀಲವನ್ನು ಜಿಲ್ಲೆಯ ಪ್ರಖ್ಯಾತ ದೇವಸ್ಥಾನಗಳಿಗೆ ಸರಬರಾಜು ಮಾಡಿರುತ್ತೇವೆ. ಅದರ ಜತೆಗೆ ಸ್ಥಳೀಯ ಪ್ರದೇಶದ ಸಣ್ಣ ಸಣ್ಣ ದೇವಸ್ಥಾನಗಳಿಗೆ ಮತ್ತು ಸಂಘ – ಸಂಸ್ಥೆಗಳಿಗೆ ಉಚಿತವಾಗಿ ಅಂದಾಜು 12,000ಕ್ಕೂ ಅಧಿಕ ಕೈ ಚೀಲಗಳನ್ನು ನೀಡಿದ್ದೇವೆ.
– ಸುನಿಲ್‌ ಆಳ್ವ ಮಂಗಳೂರು

ಬೀಚ್‌ಗಳಲ್ಲಿ ಪ್ಲಾಸ್ಟಿಕ್‌ ನಿಷೇಧಿಸಿ
ಬೀಚ್‌ಗಳಲ್ಲಿ ಬಾಟಲಿ ನೀರು ನಿಷೇಧಿಸಬೇಕು. ಅಲ್ಲಲ್ಲಿ ಶುದ್ಧ ನೀರಿನ ಘಟಕ ಸ್ಥಾಪಿಸಬೇಕು. ನೀರು ಬೇಕಾದವರು ಘಟಕದಿಂದ ನೀರು ಕುಡಿಯಬೇಕು. ಇದರಿಂದ ಸಮುದ್ರದ ಬದಿಯಲ್ಲಿ ಪ್ಲಾಸ್ಟಿಕ್‌ ಬಾಟಲಿ ಎಸೆಯುವುದನ್ನು ತಡೆಗಟ್ಟಬಹುದು. ಚುರುಮುರಿ ಹಾಗೂ ಇತಹ ಆಹಾರ ವಸ್ತುಗಳ ಮಾರಾಟಕ್ಕೆ ಕೂಡ ಪೇಪರ್‌, ಪೇಪರ್‌ಕಪ್‌ ಉಪಯೋಗ ಕಡ್ಡಾಯಗೊಳಿಸಬೇಕು.
-ರಾಘವೇಂದ್ರ ಕೂಳೂರು

ಬಟ್ಟೆಯ ಚೀಲ ಮಾರುಕಟ್ಟೆಗೆ ಬರಲಿ
ಹಳೆ ಬಟ್ಟೆಗಳನ್ನು ನಗರದ ವಾರ್ಡ್‌ವಾರು ಸಂಗ್ರಹದ ವ್ಯವಸ್ಥೆ, ವಾರ್ಡಿನಲ್ಲಿ ಒಂದುಕಡೆ ಹೊಲಿಯುವ ವ್ಯವಸ್ಥೆ ಮಹಾನಗರ ಪಾಲಿಕೆಯ ವತಿಯಿಂದ ಮಾಡಬೇಕು. ಕಡಿಮೆ ದರಕ್ಕೆ ಬಟ್ಟೆಗಳನ್ನು ಖರೀದಿಸಿ ನಿರುದ್ಯೋಗಿಗಳಿಗೆ ಹಾಗೂ ಕೆಲಸ ಕಡಿಮೆ ಇರುವ ಟೈಲರ್‌ಗಳಿಗೆ ಒದಗಿಸಿ ವಿವಿಧ ಬಗೆಯ ಚೀಲ ತಯಾರಿಸಬೇಕು. ಸಂಘ – ಸಂಸ್ಥೆಗಳ ಹಾಗೂ ಮಹಾನಗರ ಪಾಲಿಕೆ ಸಹಕಾರದಿಂದ ಎಲ್ಲ ಅಂಗಡಿಗಳಿಗೆ ಹಂಚಿಕೆ ವ್ಯವಸ್ಥೆ ಮಾಡಬೇಕು.
-ಪ್ರಸನ್ನ ಪಕ್ಕಳ ಕದ್ರಿ, ಮಂಗಳೂರು

ಪ್ಲಾಸ್ಟಿಕ್‌ ನಿಯಂತ್ರಣ ನಿಮ್ಮ ತಂತ್ರ ಹಂಚಿಕೊಳ್ಳಿ
ಪ್ಲಾಸ್ಟಿಕ್‌ ನಿಯಂತ್ರಣದ ಬಗ್ಗೆ ಅನೇಕ ಸಂಘಟನೆಗಳು, ವಿದ್ಯಾಸಂಸ್ಥೆಗಳು ಧನಾತ್ಮಕ ಕಾರ್ಯತಂತ್ರ ರೂಪಿಸಿವೆ. ಅಂತಹ ಕಾರ್ಯಗಳಿದ್ದಲ್ಲಿ ಹಂಚಿಕೊಳ್ಳಬಹುದು. ವಾಟ್ಸಪ್‌: 9900567000

-ವೇಣುವಿನೋದ್‌ ಕೆ. ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next