ಶ್ರವಣಬೆಳಗೊಳ: ನಾಳೆ( ಫೆ.7) ಯಿಂದ 26 ರವರೆಗೆ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ 88ನೇ ಬಾರಿಯ ಮಹಾಮಸ್ತಕಾಭಿಷೇಕವು ವೈಭವದಿಂದ ನಡೆಯಲಿದೆ ಎಂದು ಆಚಾರ್ಯ ಶ್ರೀ ವರ್ಧಮಾನಸಾಗರ ಮಹಾರಾಜರು ಹೇಳಿದರು.
ಜೈನಕಾಶಿ ಶ್ರವಣಬೆಳಗೊಳದ ತ್ಯಾಗಿನಗರದಲ್ಲಿರುವ ಪಂಚಕಲ್ಯಾಣ ಪ್ರಾರ್ಥನಾ ಮಂದಿರದಲ್ಲಿ ಮುನಿಗಳಿಗೆ ನಡೆದ ಪಾದಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ, ಫೆ 7ರಂದು ಬೆಳಗ್ಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಚಾಲನೆ ನೀಡಲಿದ್ದಾರೆ ಎಂದರು.
ಶಾಂತಿಯ ಪ್ರತಿರೂಪ ಹಾಗೂ ಅಹಿಂಸೆಯ ಸಂದೇಶ ಸಾರುವುದಷ್ಟೇ ಅಲ್ಲ, ಲೋಕ ಕಲ್ಯಾಣಕ್ಕಾಗಿ ಸಲ್ಲೇಖನ ವ್ರತ ಕೈಗೊಂಡಿರುವ ಮುನಿಗಳ ತ್ಯಾಗ ಅಪಾರವಾದದ್ದು, ಅವರ ತತ್ವ-ಸಂದೇಶಗಳನ್ನು ನಾವು ಪಾಲನೆ ಮಾಡುವುದರ ಜತೆಗೆ ವಿಶ್ವಕ್ಕೆ ಸಾರಬೇಕಿದೆ ಎಂದರು. ತ್ಯಾಗದಿಂದ ಶಾಂತಿ, ಅಹಿಂಸೆಯಿಂದ ಸುಖ, ಮೈತ್ರಿಯಿಂದ ಪ್ರಗತಿ ಹಾಗೂ ಧ್ಯಾನದಿಂದ ಸಿದ್ಧಿ ಸಿಗಲಿದೆ.
ನಾವೆಲ್ಲರೂ ಎದುರು ನೋಡುತ್ತಿದ್ದ ಮಹಾಮಸ್ತಕಾಭಿಷೇಕವು ಹತ್ತಿರ ಸಮೀಪಿಸುತ್ತಿದ್ದು, ವಿವಿಧ ಪೂಜೆ ಹಾಗೂ ಅಭಿಷೇಕದೊಂದಿಗಿನ ಸ್ವಾಮಿಯವರ ಅಪೂರ್ವ ದರ್ಶನ ಪಡೆದು ಜನ್ಮ ಸಾರ್ಥಕ ಪಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು. 12 ವರ್ಷಗಳಿಗೊಮ್ಮೆ ನಡೆಯುವ ಭಗವಾನ್ ಶ್ರೀ ಬಾಹುಬಲಿಯವರ ಮಹಾಮಸ್ತಕಾಭಿಷೇಕಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಪೂಜಾ ವಿಧಿವಿಧಾನಗಳಿಗೆ ಎಲ್ಲ ಸಿದ್ಧತೆ ನಡೆಯುತ್ತಿದೆ ಎಂದರು. ಬಳಿಕ ಪಂಚಕಲ್ಯಾಣ ಪ್ರಾರ್ಥನಾ ಮಂದಿರದಲ್ಲಿ ಪಾಲ್ಗೊಂಡಿದ್ದ ಮುನಿಗಳಿಗೆ ಪಾದಪೂಜೆ ನಡೆಯಿತು, ಆಯಿìಕ ಮಾತಾಜಿಯರು, ಶ್ರಾವಕ ಹಾಗೂ ಶ್ರಾವಕಿಯರು ಪಾಲ್ಗೊಂಡಿದ್ದರು.